Advertisement

ನವೋದ್ಯಮಕ್ಕೆ ದೇಶಪಾಂಡೆ ಸ್ಟಾರ್ಟಪ್‌-ಐಐಟಿ ಬಲ

05:27 PM Jun 18, 2022 | Team Udayavani |

ಹುಬ್ಬಳ್ಳಿ: ಸಾಮಾಜಿಕ ಉದ್ಯಮ, ನವೋದ್ಯಮ ವಿಚಾರದಲ್ಲಿ ಉತ್ತರ ಕರ್ನಾಟಕದಲ್ಲಿ ದೊಡ್ಡ ಕ್ರಾಂತಿ ಮಾಡಿರುವ, ಹುಬ್ಬಳ್ಳಿಯನ್ನು ವಿಶ್ವ ಭೂಪಟದಲ್ಲಿ ಕಾಣುವಂತೆ ಮಾಡಿರುವ ಕೀರ್ತಿ ದೇಶಪಾಂಡೆ ಫೌಂಡೇಶನ್‌ಗಿದೆ. ನವೋದ್ಯಮಕ್ಕೆ ಪ್ರೋತ್ಸಾಹ ಜತೆಗೆ ವಿದ್ಯಾರ್ಥಿಗಳಲ್ಲಿ ಇನ್ನೋವೇಶನ್‌ ಹಾಗೂ ಉದ್ಯಮಶೀಲತೆ ಉತ್ತೇಜನ ನಿಟ್ಟಿನಲ್ಲಿ ದೇಶಪಾಂಡೆ ಸ್ಟಾರ್ಟ್‌ಅಪ್ಸ್‌ ಹಾಗೂ ಧಾರವಾಡ ಐಐಟಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಿದ್ದು, ಉತ್ತರದಲ್ಲಿ ನವೋದ್ಯಮ ನೆಗೆತಕ್ಕೆ ಇದು ಮಹತ್ವದ ಸಹಕಾರಿ ಆಗಲಿದೆ ಎಂದೇ ನಿರೀಕ್ಷಿಸಲಾಗಿದೆ.

Advertisement

ಎರಡು ಪ್ರತಿಷ್ಠಿತ ಸಂಸ್ಥೆಗಳು ಇಂತಹ ಮಹತ್ವದ ಕಾರ್ಯಕ್ಕೆ ಮುಂದಾಗಿರುವುದರಿಂದ ನವೋದ್ಯಮ ಬೆಳವಣಿಗೆ ದೃಷ್ಟಿಯಿಂದ ತಂತ್ರಜ್ಞಾನ ಹಾಗೂ ಹಲವು ಹೊಸತನಗಳಿಗೆ ಕಾರಣ ಆಗಬಹುದಾಗಿದೆ. ದೇಶಪಾಂಡೆ ಫೌಂಡೇಶನ್‌ ಹಾಗೂ ಧಾರವಾಡ ಐಐಟಿ ಜೂ.21ರಂದು ಮಹತ್ವದ ಒಡಂಡಿಕೆಗೆ ಸಹಿ ಹಾಕಲಿದ್ದು, ನಂತರ ಇನ್ನೋವೇಶನ್‌ ಹಾಗೂ ಉದ್ಯಮಶೀಲತೆ ವೇಗೋತ್ಕರ್ಷ ದೃಷ್ಟಿಯಿಂದ ಜತೆಯಾಗಿ ಕಾರ್ಯನಿರ್ವಹಿಸಲಿದ್ದು, ನವೋದ್ಯಮಕ್ಕೆ ಮುಂದಾಗುವವರಿಗೆ ಮಾರ್ಗದರ್ಶನ, ತಂತ್ರಜ್ಞಾನದ ನೆರವು ದೊರೆಯಲಿದೆ. ನವೋದ್ಯಮಕ್ಕೆ ಉತ್ತೇಜನ ಜತೆಗೆ ವಿಶೇಷವಾಗಿ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಬೀಜವನ್ನು ಬಿತ್ತುವುದು, ಈಗಾಗಲೇ ನವೋದ್ಯಮ ಚಿಂತನೆ ಹೊಂದಿದ ವಿದ್ಯಾರ್ಥಿಗಳಲ್ಲಿ ಚಿಂತನೆಯ ಬಲವರ್ಧನೆಗೆ ಪೋಷಕಾಂಶ ನೀಡುವ ಕಾರ್ಯಕ್ಕೆ ದೇಶಪಾಂಡೆ ಫೌಂಡೇಶನ್‌, ಧಾರವಾಡ ಐಐಟಿ ಮಹತ್ವದ ಹೆಜ್ಜೆ ಇರಿಸಿವೆ.

ದೇಶಪಾಂಡೆ ಸ್ಟಾರ್ಟ್‌ಅಪ್ಸ್‌ ಅಡಿಯಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಉದ್ಯಮಶೀಲತೆ ಚಿಂತನೆ ಹೊಂದಿದವರಿಗೆ ಉದ್ಯಮ ಆಕರ್ಷಣೆ ಹಾಗೂ ಇನ್ನೋವೇಶನ್‌ಗೆ ಪ್ರೋತ್ಸಾಹದ ಮೂಲಕ ನವೋದ್ಯಮಕ್ಕೆ ಉದ್ಯಮಸ್ನೇಹಿ ವಾತಾವರಣ ಸೃಷ್ಟಿಸುವುದು, ಮುಖ್ಯವಾಗಿ ವಿವಿಧ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಇನ್ನೋವೇಶನ್‌ ಸಂಸ್ಕೃತಿ ಬೆಳವಣಿಗೆ ಹಾಗೂ ನವೋದ್ಯಮ ಸ್ನೇಹಿ ವಾತಾವರಣ ರೂಪಿಸುವ ಉದ್ದೇಶವನ್ನು ಎರಡು ಸಂಸ್ಥೆಗಳು ಹೊಂದಿವೆ. ಸಮಸ್ಯೆಗಳ ಸ್ವರೂಪ ಹಾಗೂ ಅವುಗಳಿಗೆ ಪರಿಹಾರ, ಉತ್ಪಾದನೆ ಚಿಂತನೆ ಬೆಳವಣಿಗೆ ಜತೆಗೆ ವಿದ್ಯಾರ್ಥಿ ಸಮುದಾಯದಲ್ಲಿ ಇನ್ನೋವೇಶನ್‌, ಉದ್ಯಮಶೀಲತೆ ಪ್ರೋತ್ಸಾಹಿಸುವುದು, ಸಮಸ್ಯೆಗಳನ್ನು ನೀಡಿ ಅದಕ್ಕೆ ಪರಿಹಾರ ರೂಪಿಸುವಂತೆ ಸೂಚಿಸುವುದು, ದೇಶಪಾಂಡೆ ಫೌಂಡೇಶನ್‌ ಸ್ಟಾರ್ಟ್‌ಅಪ್ಸ್‌ ಹಾಗೂ ಕೆಎಲ್‌ಇ ಸಿಒಪಿ ವಿದ್ಯಾರ್ಥಿಗಳ ನಡುವೆ ಪರಿಣಾಮಕಾರಿ ಇನ್ನೋವೇಶನ್‌ಗೆ ಪ್ರೋತ್ಸಾಹ ಮೂಲಕ ಈ ಭಾಗಕ್ಕೆ ಅದು ಪ್ರಯೋಜನಾಕಾರಿ ಆಗುವಂತೆ ಮಾಡುವುದು ಒಡಂಬಡಿಕೆ ಉದ್ದೇಶವಾಗಿದೆ.

ನವೋದ್ಯಮ ಕ್ರಾಂತಿ

ದೇಶಪಾಂಡೆ ಫೌಂಡೇಶನ್‌ ಈಗಾಗಲೇ ಹುಬ್ಬಳ್ಳಿ ಸೇರಿದಂತೆ ಉತ್ತರ ಕರ್ನಾಟಕಷ್ಟೇ ಅಲ್ಲದೆ ನೆರೆಯ ತೆಲಂಗಾಣದಲ್ಲೂ ಸಹ ನವೋದ್ಯಮ ಕ್ರಾಂತಿ ಮಾಡಿದೆ. ದೇಶದಲ್ಲಿಯೇ ಅತಿದೊಡ್ಡ ಇನ್‌ ಕ್ಯುಬೇಷನ್‌ ಕೇಂದ್ರವನ್ನು ಹುಬ್ಬಳ್ಳಿಯಲ್ಲಿ ಆರಂಭಿಸುವ ಮೂಲಕ ದೇಶಪಾಂಡೆ ಫೌಂಡೇಶನ್‌ ಮಹತ್ವದ ಸಾಧನೆ ಮಾಡಿದ್ದು, ಜಾಗತಿಕ ಉದ್ಯಮ ಹುಬ್ಬಳ್ಳಿ ಕಡೆ ನೋಡುವಂತೆ ಮಾಡಿದೆ.

Advertisement

ದೇಶಪಾಂಡೆ ಸ್ಟಾರ್ಟ್‌ಅಪ್ಸ್‌ ಮೂಲಕ ನವೋದ್ಯಮಕ್ಕೆ ವಿವಿಧ ರೀತಿಯ ಸೌಲಭ್ಯಗಳ ಜತೆಗೆ ನವೋದ್ಯಮದ ಸಾಹಸಕ್ಕೆ ಮುಂದಾಗುವವರಿಗೆ ಮಾರ್ಗದರ್ಶನ, ತರಬೇತಿ, ತಂತ್ರಜ್ಞಾನ, ಮಾರುಕಟ್ಟೆ ಸಂಪರ್ಕ ನಿಟ್ಟಿನಲ್ಲಿ ಮಹತ್ವದ ವೇದಿಕೆ ಕಲ್ಪಿಸಿದೆ. ದೇಶಪಾಂಡೆ ಸ್ಟಾರ್ಟ್‌ ಅಪ್ಸ್‌ನಲ್ಲಿ ವಿವಿಧ ನವೋದ್ಯಮಗಳಿಗೆ ಅವಕಾಶ ನೀಡಿದೆ. ನವೋದ್ಯಮಿಗಳು ಉದ್ಯಮಶೀಲತೆ ಚಿಂತನೆ ಹೊಂದಿದ್ದರೂ ಉತ್ಪನ್ನಗಳ ಪ್ರಯೋಗ, ಫೋಟೋಕಾಪಿ ಇನ್ನಿತರ ಪ್ರಯೋಗಕ್ಕೆ ಮುಂದಾದರೆ ಅಗತ್ಯ ಸೌಲಭ್ಯಗಳ ಕೊರತೆ ಇದ್ದು, ಅದರ ನಿವಾರಣೆಗೆ ನಿಟ್ಟಿನಲ್ಲಿ ತ್ರಿಡಿ ಪ್ರಿಂಟ್‌, ಸಿಎನ್‌ಸಿ ಮಿಷನ್‌, ಪ್ರಯೋಗಾಲಯ ಇನ್ನಿತರ ಸೌಕರ್ಯಗಳನ್ನು ಅತ್ಯಂತ ಕಡಿಮೆ ದರದಲ್ಲಿ, ಕೆಲವೊಂದು ಉಚಿತವಾಗಿ ನೀಡುವ ಮೂಲಕ ದೇಶಪಾಂಡೆ ಫೌಂಡೇಶನ್‌ ನವೋದ್ಯಮ ಉತ್ತೇಜನಕ್ಕೆ ತನ್ನದೇ ಬಲ ತುಂಬುವ ಕಾರ್ಯ ಮಾಡುತ್ತಿದೆ. ರಾಜ್ಯದಲ್ಲಿ ನವೋದ್ಯಮ ಉತ್ತೇಜಿಸುವ ನಿಟ್ಟಿನಲ್ಲಿ ಎಲಿವೇಟ್‌ ಎಂಬ ಯೋಜನೆ ಆರಂಭಿಸಿದ್ದು, ಈ ಯೋಜನೆಯ ಪರಿಕಲ್ಪನೆ ಹಾಗೂ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ದೇಶಪಾಂಡೆ ಫೌಂಡೇಶನ್‌ ಪಾತ್ರವೂ ಮಹತ್ವದ್ದಾಗಿದ್ದು, ಎಲಿವೇಟ್‌ ಯೋಜನೆಯಡಿ ಬೆಂಗಳೂರು ಹೊರತುಪಡಿಸಿದರೆ ಅತಿ ಹೆಚ್ಚು ಪ್ರಯೋಜನ ಪಡೆದಿದ್ದು, ದೇಶಪಾಂಡೆ ಸ್ಟಾರ್ಟ್‌ಅಪ್ಸ್‌ ಅಡಿಯ ನವೋದ್ಯಮಗಳು ಎಂಬುದು ಹೆಮ್ಮೆಯ ಸಂಗತಿಯಾಗಿದೆ.

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next