Advertisement

ಪ್ರಧಾನಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೇಶಪಾಂಡೆ

09:01 AM Sep 22, 2019 | Team Udayavani |

ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕ ಆರ್‌.ವಿ.ದೇಶಪಾಂಡೆ ಕೇಂದ್ರ ಸರಕಾರ ಕಾರ್ಪೋರೆಟ್‌ ವಲಯದ ತೆರಿಗೆ ಕಡಿಮೆ ಮಾಡಿರುವುದನ್ನು ಸ್ವಾಗತಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯ ಬಗ್ಗೆ ಮೃದು ಧೋರಣೆ ತೋರಿರುವುದು ರಾಜಕೀಯ ವಲಯದಲ್ಲಿ ಹುಬ್ಬೇರಿಸುವಂತೆ ಮಾಡಿದೆ.

Advertisement

ದೇಶದಲ್ಲಿ ವಿಪಕ್ಷಗಳ ನಾಯಕರನ್ನು ಕೇಂದ್ರ ಸರಕಾರ ಟಾರ್ಗೆಟ್‌ ಮಾಡುತ್ತಿದೆ ಎಂದು ಕಾಂಗ್ರೆಸ್‌ನ ಎಲ್ಲ ನಾಯಕರೂ ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರಕಾರದ ವಿರುದ್ಧ ವಾಗ್ಧಾಳಿ ನಡೆಸುತ್ತಿರುವ ಸಂದರ್ಭದಲ್ಲಿ ದೇಶಪಾಂಡೆ ಪ್ರಧಾನಿ ನಿರ್ಧಾರವನ್ನು ಸ್ವಾಗತಿಸಿರುವುದರ ಹಿಂದೆ ರಾಜಕೀಯ ಜಾಣತನ ಅಡಗಿದೆಯಾ ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿ ಬರುತ್ತಿವೆ.

ಕಾಂಗ್ರೆಸ್‌ನಲ್ಲಿ ಆರ್ಥಿಕವಾಗಿ ಶಕ್ತಿ ಹೊಂದಿರುವ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಟಾರ್ಗೆಟ್‌ ಮಾಡಿ, ಅವರ ವಿರುದ್ಧ ಸಿಬಿಐ, ಇಡಿ ಮತ್ತು ಐಟಿ ಇಲಾಖೆಗಳನ್ನು ಬಳಸಿಕೊಂಡು ಅವರನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಅದರ ಪರಿಣಾಮವಾಗಿ ಲೋಕಸಭೆ ಚುನಾವಣೆಗೂ ಮುಂಚೆಯೇ ಆರ್‌.ವಿ.ದೇಶಪಾಂಡೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಮಾತುಗಳೂ ಕೇಳಿ ಬರುತ್ತಿದ್ದವು. ಬಿಜೆಪಿ ಕೂಡ ದೇಶಪಾಂಡೆಯವರಿಗೆ ಐಟಿ ಇಲಾಖೆಯ ಪರೋಕ್ಷ ಎಚ್ಚರಿಕೆ ನೀಡುವ ಮೂಲಕ ಅವರನ್ನು ಸೈಲೆಂಟ್‌ ಆಗಿರುವಂತೆ ಮಾಡಿದ್ದರು ಎಂದು ಹೇಳಲಾಗಿತ್ತು.

ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಕ್ಕೂ ಶುಭಾಶಯ ಕೋರಿ ಅವರನ್ನು ಹೊಗಳಿ ಟ್ವೀಟ್‌ ಮಾಡಿದ್ದ ಆರ್‌.ವಿ.ದೇಶಪಾಂಡೆ ಈಗ ಕಾರ್ಪೊರೇಟ್‌ ತೆರಿಗೆ ಕಡಿಮೆ ಮಾಡಿರುವುದನ್ನು ಸ್ವಾಗತಿಸುವ ಮೂಲಕ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next