ಹುಬ್ಬಳ್ಳಿ: ದಕ್ಷಿಣ ಏಷ್ಯಾದ ಅತಿ ದೊಡ್ಡ ಸಾಮಾಜಿಕ ಉದ್ಯಮಶೀಲತಾ ಸಮ್ಮೇಳನ ಹಾಗೂ ಅಭಿವೃದ್ಧಿ ಸಂವಾದ ಜ.28-29ರಂದು ಇಲ್ಲಿನ ಬಿವಿಬಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿನ ದೇಶಪಾಂಡೆ ಪ್ರತಿಷ್ಠಾನದ ಕಚೇರಿ ಆವರಣದಲ್ಲಿ ನಡೆಯಲಿದೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇಶಪಾಂಡೆ ಪ್ರತಿಷ್ಠಾನದ ಸಂಸ್ಥಾಪಕ ಡಾ| ಗುರುರಾಜ ದೇಶಪಾಂಡೆ, ಸಾಮಾಜಿಕ ಉದ್ಯಮಶೀಲತೆ ಉದ್ದೇಶದೊಂದಿಗೆ ಹುಬ್ಬಳ್ಳಿ ಆರಂಭವಾದ ದೇಶಪಾಂಡೆ ಪ್ರತಿಷ್ಠಾನ ದಶಮಾನೋತ್ಸವ ಸಂಭ್ರಮದಲ್ಲಿದೆ. ಈ ಬಾರಿಯ ಅಭಿವೃದ್ಧಿ ಸಂವಾದದ ಧ್ಯೇಯ ಅಭಿವೃದ್ಧಿ ಬೆಳವಣಿಗೆ ಸ್ಥಿತಿ ಪರಿಣಾಮಕಾರಿ ಹೆಚ್ಚಿಸುವುದುಎಂಬುದಾಗಿದೆ ಎಂದರು.
ಈ ಬಾರಿಯ ಅಭಿವೃದ್ಧಿ ಸಂವಾದದಲ್ಲಿ ಸಚಿವ ಪ್ರಿಯಾಂಕ ಖರ್ಗೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ| ಸುಭಾಷ್‌ಚಂದ್ರ ಖುಂತಿಯ, ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಬೇಜವಾಡ ವಿಲ್ಸನ್, ಎಂಐಟಿ ಟಾಟಾ ಸೆಂಟರ್ ಫಾರ್ ಟೆಕ್ನಾಲಾಜಿ ಆ್ಯಂಡ್ ಡಿಸೈನ್ ನಿರ್ದೇಶಕ ಡಾ| ಚಿಂತನ್ ವೈಷ್ಣವ್, ಸೇವ್ ಮದರ್ ಸಂಸ್ಥಾಪಕ ಡಾ|ಶಿಬಿನ್ ಗಂಜು, ಅಗಸ್ತ್ಯ ಪ್ರತಿಷ್ಠಾನದ ರಾಮಜೀ ರಾಘವನ್, ಕೆಡಿಆರ್ ಡಿಪಿಯ ಡಾ| ಎಲ್.ಎಚ್.ಮಂಜುನಾಥ, ಇಸ್ರೇಲ್‌ನ ಇಸ್ರೇಲ್ ಗಾನೋಟ್, ದಿ ಬ್ರಿಜ್‌ಸ್ಪಾನ್ ಗ್ರೂಪ್‌ನ ಸೌಮಿತ್ರ ಪಾಂಡೆ ಇನ್ನಿತರರು ಪಾಲ್ಗೊಳ್ಳಲಿದ್ದಾರೆ ಎಂದರು.
ಎಲ್ಲ ಸಹಕಾರ ಅಗತ್ಯ: ದೇಶಪಾಂಡೆ ಪ್ರತಿಷ್ಠಾನ ಆರಂಭಗೊಂಡ ಹತ್ತು ವರ್ಷದಲ್ಲಿ ಹುಬ್ಬಳ್ಳಿಯ ಸಾಮರ್ಥ್ಯ ಹಲವು ರೀತಿಯಲ್ಲಿ ಹೆಚ್ಚಾಗಿದೆ. ಇಲ್ಲಿಗೆ ಇನ್ಫೋಸಿಸ್ ಬಂದಿದೆ. ದೇಶದಲ್ಲೇ ಅತಿ ದೊಡ್ಡ ಕೌಶಲ ಅಭಿವೃದ್ಧಿ ತರಬೇತಿ ಕೇಂದ್ರ ಹಾಗೂ ನವೋದ್ಯಮಿಗಳ ಉತ್ತೇಜನಕ್ಕೆ ದೇಶದಲ್ಲೇ ಅತಿ ದೊಡ್ಡ ಇನ್‌ಕುಬೇಷನ್ ಕೇಂದ್ರ ಕಾರ್ಯಾರಂಭಕ್ಕೆ ಸಿದ್ಧವಾಗಿವೆ ಎಂದರು. ಜಾಗತೀಕರಣ ಜಾರಿಗೊಂಡು 25-30 ವರ್ಷ ಆಗುತ್ತಿದೆ.
ಜನರಿಗೆ ಇದರಿಂದಾದ ಲಾಭವೇನು ಎಂಬುದರ ಬಗ್ಗೆ ಅಮೆರಿಕ, ಭಾರತ ಸೇರಿದಂತೆ ಅನೇಕ ಕಡೆ ಚರ್ಚೆ ಇಂದಿಗೂ ನಡೆಯುತ್ತಿದೆ. ಉದ್ಯಮ, ಶಿಕ್ಷಣ, ಆರೋಗ್ಯ, ಕೃಷಿ ಇನ್ನಿತರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಜತೆಗೆ ಆರ್ಥಿಕಾಭಿವೃದ್ಧಿ ವೇಗಕ್ಕೆ ಗಮನ ನೀಡಬೇಕಿದೆ ಎಂದರು. ದೇಶಪಾಂಡೆ ಪ್ರತಿಷ್ಠಾನ ಕಳೆದ 10 ವರ್ಷಗಳಲ್ಲಿ ಕೈಗೊಂಡ ಯೋಜನೆಗಳ ಸಾಮರ್ಥ್ಯ ಇನ್ನಷ್ಟು ಹೆಚ್ಚಬೇಕಿದೆ. ಮುಂದಿನ ಹೆಜ್ಜೆಯಾಗಿ ಹೈದರಾಬಾದ ಕರ್ನಾಟಕ ಸೇರಿದಂತೆ ವಿವಿಧ ಕಡೆಗಳಲ್ಲಿ ವಿಸ್ತರಣೆಗೊಳ್ಳಬೇಕಿದೆ.
ಇದಕ್ಕೆ ಸರಕಾರ,ಸಾರ್ವಜನಿಕರು, ಶಿಕ್ಷಣ ಸಂಸ್ಥೆಗಳು, ಸ್ವಯಂ ಸಂಸ್ಥೆಗಳ ಸಹಕಾರವೂ ಮುಖ್ಯವಾಗಿದೆ. ಐಐಟಿ, ಎಂಐಟಿ, ತಾಂತ್ರಿಕ ಕಾಲೇಜುಗಳು, ಪ್ರತಿಷ್ಠಾನಗಳ ಸಂಖ್ಯೆ ಹೆಚ್ಚಬೇಕಿದೆ. ಸುಸ್ಥಿರ ಸ್ಥಿತಿ ನಿರ್ಮಾಣಗೊಂಡ ಸಮಸ್ಯೆಗಳಿಗೆ ಜನರೇ ಪರಿಹಾರ ಕಂಡುಕೊಳ್ಳುವಂತಾಗಬೇಕು. ಸಮುದಾಯ ಬಳಕೆ ಸಾಮರ್ಥ್ಯ ಹೆಚ್ಚಳವಾಗಬೇಕು. ಈ ಭಾಗದಲ್ಲಿ ಬದಲಾವಣೆ ಶಕೆ ಆರಂಭವಾಗಿದ್ದು, ಮುಂದಿನ 10 ವರ್ಷಗಳಲ್ಲಿ ಇದು ಸ್ಪಷ್ಟರೂಪ ಪಡೆದುಕೊಳ್ಳಲಿದೆ ಎಂದರು.
ಡಾ| ನೀಲಂ ಮಹೇಶ್ವರಿ ಮಾತನಾಡಿ, ಅಭಿವೃದ್ಧಿ ಸಂವಾದಕ್ಕೆ ಈಗಾಗಲೇ 326 ಜನರು ನೋಂದಣಿ ಮಾಡಿದ್ದು, ಸುಮಾರು 40ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. 65-70 ಜನ ಸಂಪನ್ಮೂಲ ವ್ಯಕ್ತಿಗಳು, 25 ಹೂಡಿಕೆದಾರರು, 10ಕ್ಕೂ ಹೆಚ್ಚು ಸಿಎಸ್‌ಆರ್ ಮುಖ್ಯಸ್ಥರು ಭಾಗವಹಿಸುತ್ತಿದ್ದಾರೆ ಎಂದರು. ದೇಶಪಾಂಡೆ ಪ್ರತಿಷ್ಠಾನದ ಸಹ ಸಂಸ್ಥಾಪಕಿ ಜಯಶ್ರೀ ದೇಶಪಾಂಡೆ, ಸಿಇಒ ನವೀನ ಝಾ, ಐಟಿ ಮುಖ್ಯಸ್ಥ ಎಸ್.ಕೆ.ಸುನಿಲ್, ಇನ್‌ಕುಬೇಷನ್ ಮುಖ್ಯಸ್ಥ ಸಿ.ಎಂ.ಪಾಟೀಲ ಇನ್ನಿತರರು ಇದ್ದರು.