ವರದಿ : ಅಮರೇಗೌಡ ಗೋನವಾರ
ಹುಬ್ಬಳ್ಳಿ: ಕೋವಿಡ್ ನಿಯಂತ್ರಣ ನಿಟ್ಟಿನಲ್ಲಿ ದೇಶಪಾಂಡೆ ಫೌಂಡೇಶನ್ ನೆರವಿನ ಸೇವೆಯ ಪಾಲು ಪಡೆದುಕೊಂಡಿದೆ. ಅಮೆರಿಕಾದಿಂದ ಸುಮಾರು 40 ಆಕ್ಸಿಜನ್ ಕಾನ್ಸಂಟ್ರೇಟರ್ ತರಿಸಿ ಕಿಮ್ಸ್ ಇನ್ನಿತರ ಆಸ್ಪತ್ರೆಗಳಿಗೆ ನೀಡಿದ್ದು, ಗ್ರಾಮೀಣ ಪ್ರದೇಶಕ್ಕೆ 500 ಮೆಡಿಕಲ್ ಕಿಟ್, ಆಂಬ್ಯುಲೆನ್ಸ್, ಸಂಚಾರಿ ಪರೀಕ್ಷೆ ವ್ಯಾನ್ ಇನ್ನಿತರ ನೆರವಿನ ಸಾರ್ಥಕ ಕಾರ್ಯದಲ್ಲಿ ತೊಡಗಿಕೊಂಡಿದೆ.
ಸಾಮಾಜಿಕ ಉದ್ಯಮ, ಕೃಷಿ, ಶಿಕ್ಷಣ, ಕೌಶಲಾಭಿವೃದ್ಧಿ ತರಬೇತಿ, ನವೋದ್ಯಮಕ್ಕೆ ಉತ್ತೇಜನ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿರುವ ದೇಶಪಾಂಡೆ ಫೌಂಡೇಶನ್, ಈ ಭಾಗದಲ್ಲಿ ವಿಪತ್ತು ಸಂದರ್ಭದಲ್ಲಿ ನೆರವಿನ ಪಾಲು ಪಡೆದುಕೊಳ್ಳುತ್ತಿದೆ. ಕೊರೊನಾ ಮೊದಲ ಅಲೆಯಲ್ಲಿಯೂ ಹಲವು ನೆರವಿನ ಕಾರ್ಯ ಕೈಗೊಂಡಿದ್ದು, ಇದೀಗ ಎರಡನೇ ಅಲೆಯಲ್ಲಿಯೂ ಮುಂದುವರಿಸಿದೆ.
ಜಿಲ್ಲಾಡಳಿತಕ್ಕೆ ಸಾಥ್ ನೀಡುತ್ತಿದೆ. 40 ಆಕ್ಸಿಜನ್ ಯಂತ್ರ ನೀಡಿಕೆ: ಕೋವಿಡ್ ಎರಡನೇ ಅಲೆ ಶರವೇಗದಲ್ಲಿ ವ್ಯಾಪಿಸಿದ್ದರಿಂದ ಸೋಂಕಿತರ ಸಂಖ್ಯೆಯಲ್ಲಿ ಭಾರಿ ಪ್ರಮಾಣದ ಹೆಚ್ಚಳವಷ್ಟೇ ಅಲ್ಲದೆ, ಅಕ್ಸಿಜನ್ ಕೊರತೆ ವ್ಯಾಪಕವಾಗಿತ್ತು. ಆಡಳಿತಕ್ಕೆ ಸಾಥ್ ನೀಡಲು ಅನೇಕ ಸಂಘ-ಸಂಸ್ಥೆ, ಕಂಪೆನಿಗಳು ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಿಕೆಗೆ ಮುಂದಾಗಿದ್ದವು. ದೇಶಪಾಂಡೆ ಫೌಂಡೇಶನ್ ಸಂಸ್ಥಾಪಕರಾದ ಡಾ| ಗುರುರಾಜ ದೇಶಪಾಂಡೆ ಅವರು ಅಮೆರಿಕಾದಲ್ಲಿದ್ದು, ಅಲ್ಲಿಂದಲೇ ಸುಮಾರು 40 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಹುಬ್ಬಳ್ಳಿಗೆ ರವಾನಿಸಿದ್ದರು. ಅವುಗಳನ್ನು ಜಿಲ್ಲಾಡಳಿತಕ್ಕೆ ನೀಡುವ ಮೂಲಕ ಕಿಮ್ಸ್ ಸೇರಿದಂತೆ ಜಿಲ್ಲೆಯ ವಿವಿಧ ಆಸ್ಪತ್ರೆ ಹಾಗೂ ಕೋವಿಡ್ ಕೇರ್ ಕೇಂದ್ರಗಳ ಸೇವೆಗೆ ಸಮರ್ಪಿತವಾಗುವಂತೆ ಮಾಡಿದೆ.
ಸೋಂಕಿತರ ಸಂಖ್ಯೆ ತೀವ್ರವಾಗಿದ್ದರಿಂದ ಹುಬ್ಬಳ್ಳಿಯ ಕಿಮ್ಸ್ ಹಾಗೂ ಧಾರವಾಡದ ಜಿಲ್ಲಾಸ್ಪತ್ರೆಗೆ ದೇಶಪಾಂಡೆ ಫೌಂಡೇಶನ್ ಸುಮಾರು 300 ಮಂಚ ಹಾಗೂ ಹಾಸಿಗೆ ನೀಡಿದೆ. 500 ಆಕ್ಸಿಮೀಟರ್-500 ವೈದ್ಯಕೀಯ ಕಿಟ್: ಫೌಂಡೇಶನ್ ಗ್ರಾಮೀಣ ಪ್ರದೇಶದಲ್ಲೂ ನೆರವಿಗೆ ಮುಂದಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ, ಆಶಾ ಕಾರ್ಯಕರ್ತೆಯರಿಗೆ ವಿವಿಧ ನೆರವು ಕಲ್ಪಿಸಿದೆ. ಕೊರೊನಾ ಸೋಂಕಿತರ ರಕ್ತದಲ್ಲಿ ಆಮ್ಲಜನಕ ಪ್ರಮಾಣ ಕುಸಿತವಾಗುತ್ತದೆ. ಇದನ್ನು ಅರಿಯಲು ಬಳಸುವ ಆಕ್ಸಿಮೀಟರ್‌ಗಳ ಕೊರತೆ ಅನೇಕ ಆಸ್ಪತ್ರೆಗಳಲ್ಲಿದೆ. ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ದೇಶಪಾಂಡೆ ಫೌಂಡೇಶನ್ ಸುಮಾರು 500 ಆಕ್ಸಿಮೀಟರ್‌ಗಳನ್ನು ಹುಬ್ಬಳ್ಳಿಯ ಕಿಮ್ಸ್, ಧಾರವಾಡ ಜಿಲ್ಲಾಸ್ಪತ್ರೆ, ವಿವಿಧ ಕೋವಿಡ್ ಕೇರ್ ಕೇಂದ್ರಗಳಿಗೆ ನೀಡಿದೆ. ಹುಬ್ಬಳ್ಳಿಯಲ್ಲಿ ಎಂಟು ಕಡೆಗಳಲ್ಲಿ ಆಕ್ಸಿಮೀಟರ್ ಸಹಿತ ಸಿಬ್ಬಂದಿ ಸಾರ್ವಜನಿಕರ ಆಕ್ಸಿಜನ್ ಪ್ರಮಾಣ ತಪಾಸಣೆ ಕಾರ್ಯದಲ್ಲಿ ತೊಡಗಿದ್ದಾರೆ. ಜಿಲ್ಲೆಯ ಆರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಸುಮಾರು 500 ಮೆಡಿಕಲ್ ಕಿಟ್ ಹಾಗೂ 20 ಲೀಟರ್ ನಷ್ಟು ಸ್ಯಾನಿಟೈಸರ್ ನೀಡಲಾಗಿದೆ. ಹುಬ್ಬಳ್ಳಿ ಇನ್ನಿತರ ಕಡೆ ಈಗಾಗಲೇ ಸುಮಾರು 500 ಜನರಿಗೆ ಆಹಾರಧಾನ್ಯಗಳ ಕಿಟ್ ವಿತರಣೆ ಮಾಡಲಾಗಿದ್ದು, 25 ಹೈಜನಿಕ್ ಕಿಟ್ ಗಳನ್ನು ನೀಡಲಾಗಿದೆ. ಈ ಕಿಟ್‌ಗಳ ನೀಡಿಕೆ ಕಾರ್ಯ ಮುಂದುವರಿದಿದೆ.
ಗ್ರಾಮೀಣ ಪ್ರದೇಶದಲ್ಲಿ ಆರು ಪಿಎಚ್‌ಸಿಗಳ ಮುಖಾಂತರ 159 ಆಶಾ ಕಾರ್ಯಕರ್ತೆಯರಿಗೆ ತಲಾ ಒಂದು ಆಕ್ಸಿಮೀಟರ್, ಆರು ಎನ್-95 ಮಾಸ್ಕ್, ಎರಡು ಫೇಸ್‌ಶೀಲ್ಡ್ ಹಾಗೂ ಗ್ಲೌಸ್ ಗಳನ್ನು ನೀಡಲಾಗಿದೆ. ನವಲಗುಂದ ತಾಲೂಕಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ ಕೋವಿಡ್ ತಡೆ ನಿಟ್ಟಿನಲ್ಲಿ ಜನಜಾಗೃತಿ, ಮಾಹಿತಿ, ಸಹಾಯದ ಕಾರ್ಯವನ್ನು ಫೌಂಡೇಶನ್ ಮಾಡುತ್ತಿದೆ. ಗ್ರಾಮೀಣ ಪ್ರದೇಶದ ಬಳಕೆಗೆಂದು ಫೌಂಡೇಶನ್ ಒಂದು ಆಂಬ್ಯುಲೆನ್ಸ್ ನೀಡಿದ್ದು, ಒಂದು ಸಂಚಾರಿ ಪರೀಕ್ಷಾ ವ್ಯಾನ್ ನೀಡಿದೆ.
ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಕೋವಿಡ್ ನಿಯಂತ್ರಣ ಜಾಗೃತಿ ಹಾಗೂ ನೆರವು ಕಾರ್ಯ ನಿಟ್ಟಿನಲ್ಲಿ ಫೌಂಡೇಶನ್ ನೀಲನಕ್ಷೆ ತಯಾರಿಸಿದ್ದು, ಜಿಲ್ಲಾ ಧಿಕಾರಿ ನಿತೇಶ ಪಾಟೀಲರ ಮಾರ್ಗದರ್ಶನದಲ್ಲಿ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದೆ.