Advertisement

ತುಳುನಾಡಿನ ಸಂಸ್ಕೃತಿಯನ್ನು ಪ್ರತಿಬಿಂಬಿಸಿದ ದೇವುಪೂಂಜ 

06:00 AM Sep 21, 2018 | |

ದೇವು ಪೂಂಜ ಮತ್ತು ದುಗ್ಗಣ್ಣ ಕೊಂಡೆಯ ಯುದ್ಧದ ಸನ್ನಿವೇಶ, ಸಿದ್ದು ಮನೆಯಲ್ಲಿ ಸಿಕ್ಕಿ ಬಿದ್ದು ದೇವು ಪೂಂಜ ಪರಿತಪಿಸುವ ಸಂದರ್ಭದ ದೃಶ್ಯಗಳು ಹಾಗೂ ದೈವದ ಭಂಡಾರದ ದೃಶ್ಯಗಳು ಮುದ ನೀಡಿದವು. ಇಲ್ಲಿ ಮನೋರಂಜನೆಯ ಜತೆಯಲ್ಲಿ ವೀರ ರಸ, ಭಕ್ತಿ ರಸಕ್ಕೆ ಹೆಚ್ಚು ಮಹತ್ವ ಸಿಕ್ಕಿತ್ತು. ಜುಮಾದಿ ನೇಮವಂತೂ ಅದ್ಭುತವಾಗಿತ್ತು.

Advertisement

ಉಡುಪಿಯಲ್ಲಿ ಸೆ. 9ರಂದು ಜರಗಿದ ಬಂಟರ ಸಮ್ಮಿಲನದಲ್ಲಿ ಸುರತ್ಕಲ್‌ ಬಂಟರ ಸಂಘದವರು ಉಲ್ಲಾಸ್‌ ಶೆಟ್ಟಿ ಮತ್ತು ಸುಧಾಕರ ಪೂಂಜ ಅವರ ಸಲಹೆ- ಸಹಕಾರದೊಂದಿಗೆ ಪ್ರದರ್ಶಿಸಿದ ದೇವುಪೂಂಜನ ಕಥೆ ಆಧಾರಿತ ಕಿರು ನಾಟಕ ತುಳುನಾಡಿನ ಸಂಸ್ಕೃತಿ, ದೈವಾರಾಧನೆಯನ್ನು ಚಿಕ್ಕ ಚೊಕ್ಕದಾಗಿ ಪ್ರತಿ ಬಿಂಬಿಸುವಲ್ಲಿ ಯಶಸ್ವಿಯಾಯಿತು. 

ಈ ಕಿರು ನಾಟಕದಲ್ಲಿ ಅಭಿನಯಿಸಿದ್ದ ಎಲ್ಲರೂ ಉತ್ತಮ ಅಭಿನಯ ತೋರಿದ್ದು, ಇಡೀ ತಂಡ ಶ್ಲಾಘನೆಗೆ ಪಾತ್ರವಾಗಿದೆ. ಈ ತಂಡವು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬೆಂಗಳೂರು, ಮುಂಬಯಿ ಮುಂತಾದೆಡೆ ಹಲವಾರು ಪ್ರಶಸ್ತಿ ಗೆದ್ದಿದ್ದು, ಅದಕ್ಕೆ ಅರ್ಹವಾಗಿಯೇ ಈ ಪ್ರಶಸ್ತಿಗಳು ಸಂದಿವೆ ಎಂಬುದು ಉಡುಪಿಯಲ್ಲಿ ಆ ತಂಡದವರು ನೀಡಿದ್ದ ದೇವುಪೂಂಜನ ಕಿರುನಾಟಕ ಸಾಕ್ಷಿಯಾಯಿತು.

ಇಲ್ಲಿ ತುಳುನಾಡಿನ ಉತ್ತರಕ್ರಿಯೆಯನ್ನೂ ದೇವು ಪೂಂಜನ ತಂದೆಯ ಸಾವಿನ ಸಂದರ್ಭದಲ್ಲಿ ತೋರಿಸಲಾಗಿತ್ತು. ಈಗ ಹೆಚ್ಚಾಗಿ ಎಲ್ಲರೂ ಹಾಲ್‌ಗಳಲ್ಲೇ ಉತ್ತರಕ್ರಿಯೆ ಮಾಡುವುದರಿಂದ ಹಿಂದೆ ಮನೆಯಲ್ಲಿ ಮಾಡುತ್ತಿದ್ದ ಸಂಪ್ರದಾಯಗಳು ಕಾಣಲು ಸಿಗುವುದೇ ಕಷ್ಟ, ಅದನ್ನು ಸಣ್ಣ ಅವಧಿಯಲ್ಲಿ ಈ ತಂಡ ಸಮರ್ಥವಾಗಿ ತೋರಿಸಿತು. ಜತೆಗೆ ದೇವು ಪೂಂಜನ ಕಥೆಯಲ್ಲಿ ಪ್ರಧಾನವಾಗಿರುವ ಜುಮಾದಿ ದೈವದ ಕಾರಣಿಕವನ್ನೂ ಸೂಕ್ತ ಗೌರವದಿಂದ ತೋರಿಸಲಾಯಿತು. ದೈವದ ಭಂಡಾರ ಬರುವುದು ಮತ್ತು ದೈವದ ನೇಮವನ್ನು ಕಥೆಗೆ ಅಗತ್ಯವಿರುವ ರೀತಿಯಲ್ಲಿ ತೋರಿಸಲಾಯಿತು. ದೇವು ಪೂಂಜನ ಸಾಹಸದ ಕಥೆಯನ್ನು ಚಿಕ್ಕ ಚೊಕ್ಕವಾಗಿ ತೋರಿಸುವಲ್ಲಿ ಈ ತಂಡ ಸಫ‌ಲವಾಯಿತು. ಈ ತಂಡಕ್ಕೆ ಸ್ವಲ್ಪ ಹೆಚ್ಚು ಕಾಲಾವಕಾಶ ಸಿಕ್ಕಿದ್ದರೆ ಅದರ ರೂಪವೇ ಬೇರೆ ಆಗುತ್ತಿತ್ತು ಎಂಬ ಮಾತು ಸಭಿಕರಿಂದ ಕೇಳಿ ಬರುತ್ತಿತ್ತು. 

ದೇವು ಪೂಂಜ ಮತ್ತು ದುಗ್ಗಣ್ಣ ಕೊಂಡೆಯ ಯುದ್ಧದ ಸನ್ನಿವೇಶ, ಸಿದ್ದು ಮನೆಯಲ್ಲಿ ಸಿಕ್ಕಿ ಬಿದ್ದು ದೇವು ಪೂಂಜ ಪರಿತಪಿಸುವ ಸಂದರ್ಭದ ದೃಶ್ಯಗಳು ಹಾಗೂ ದೈವದ ಭಂಡಾರದ ದೃಶ್ಯಗಳು ತುಂಬಾ ಮುದ ನೀಡಿತು. ಇಲ್ಲಿ ಮನೋರಂಜನೆಯ ಜತೆಯಲ್ಲಿ ವೀರರಸ, ಭಕ್ತಿರಸಕ್ಕೆ ಹೆಚ್ಚು ಮಹತ್ವ ಸಿಕ್ಕಿತ್ತು. ಜುಮಾದಿ ನೇಮವಂತೂ ಅದ್ಭುತವಾಗಿತ್ತು. ದೈವಾರಾಧನೆಯನ್ನು ಕಥೆಗೆ ಅಗತ್ಯವಿರುವಷ್ಟೇ ಮತ್ತು ಹೆಚ್ಚು ಗೌರವದಿಂದಲೇ ಬಳಸಿಕೊಳ್ಳಲಾಗಿದೆ. ಆ ಸಂದರ್ಭದಲ್ಲಿ ಪ್ರೇಕ್ಷಕರು ಅದನ್ನು ನಾಟಕ ಎಂದು ಭಾವಿಸದೆ ನಿಜವಾದ ದೈವದ ನೇಮ ಎಂಬಂತೆಯೇ ಭಕ್ತಿಯಿಂದ ಆಸ್ವಾದಿಸಿದರು.

Advertisement

ದೇವು ಪೂಂಜನಾಗಿ ವೆಂಕಟೇಶ್‌ ಶೆಟ್ಟಿ ಚೇಳಾರು ಮತ್ತು ರಾಮ ಚಂದ್ರ ಶೆಟ್ಟಿ, ದುಗ್ಗಣ್ಣ ಕೊಂಡೆಯಾಗಿ ಆರ್‌. ಎನ್‌. ಶೆಟ್ಟಿ, ಶಂಕರಿ ಪೂಂಜೆದಿ ಆಗಿ ಮಮತಾ ಶೆಟ್ಟಿ ಚೇಳಾರು, ಕಾಂತಣ್ಣ ಅಧಿಕಾರಿಯಾಗಿ ಸುಧಾಕರ ಪೂಂಜ ಮತ್ತು ಶಿಶಿರ್‌ ಶೆಟ್ಟಿ ಪೆರ್ಮುದೆ, ಧೇರಾಮ್‌ ಆಗಿ ಆಶ್ರಯ ಶೆಟ್ಟಿ ಕಟ್ಲ, ಸಿದ್ದು ಪಾತ್ರದಲ್ಲಿ ಬಿಂದಿಯಾ ಎಲ್‌. ಶೆಟ್ಟಿ ಅವರು ಉತ್ತಮ ಅಭಿನಯ ನೀಡಿದ್ದಾರೆ. ಇತರ ಪಾತ್ರಗಳಲ್ಲಿ ಲೀಲಾಧರ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ನಾರಾಯಣ ಶೆಟ್ಟಿ, ಪ್ರಹ್ಲಾದ್‌ ಶೆಟ್ಟಿ, ರತ್ನಾಕರ ಶೆಟ್ಟಿ, ಲೋಕಯ್ಯ ಶೆಟ್ಟಿ, ಜಯ ಶೆಟ್ಟಿ, ಹರೀಶ್‌ ಶೆಟ್ಟಿ ಮುಂತಾದವರೂ ಗಮನ ಸೆಳೆಯುವಲ್ಲಿ ಸಫ‌ಲರಾಗಿದ್ದಾರೆ. 

ನವನೀತ್‌ ಶೆಟ್ಟಿ ಕದ್ರಿ ಅವರ ರಚನೆಯಾಗಿರುವ ಈ ಕಿರು ನಾಟಕವವನ್ನು ಮಧು ಸುರತ್ಕಲ್‌ ಅವರು ನಿರ್ದೇಶಿಸಿದ್ದಾರೆ. ಸತೀಶ್‌ ಸುರತ್ಕಲ್‌ ಅವರ ಸಂಗೀತ ಇಡೀ ಪ್ರದರ್ಶನಕ್ಕೆ ಹೊಸ ಕಳೆ ತಂದು ಕೊಟ್ಟಿತ್ತು. ಆದರೆ ಸಮಾವೇಶಕ್ಕೆ ಬರುತ್ತಿದ್ದ ಗಣ್ಯರನ್ನು ಸ್ವಾಗತಿಸುವುದಕ್ಕಾಗಿ ಬಾರಿಸುತ್ತಿದ್ದ ಡೋಲು, ಊದುತ್ತಿದ್ದ ಕೊಂಬಿನ ಕಾರಣದಿಂದಾಗಿ ಪ್ರೇಕ್ಷಕರಿಗೆ ಸ್ವಲ್ಪ ರಸಭಂಗ ಆಯಿತು. ಇಂಥ ಉತ್ತಮ ಪ್ರದರ್ಶನ ನೀಡುವ ಸಂದರ್ಭದಲ್ಲಿ ಅಂಥ ಕಾರಣಗಳಿಂದಾಗಿ ರಸ ಭಂಗ ಆಗದಂತೆ ನೋಡಿಕೊಳ್ಳುವ ಅಗತ್ಯ ಇತ್ತು ಎಂದು ಹೆಚ್ಚಿನ ಪ್ರೇಕ್ಷಕರು ಹೇಳುತ್ತಿದ್ದರು. ಸಂಭಾಷಣೆಯನ್ನು ನುಂಗಿ ಹಾಕುವ ರೀತಿಯಲ್ಲಿ ಗಣ್ಯರನ್ನು ಸ್ವಾಗತಿಸುವ ಗೌಜಿ ಇದ್ದುದು ಬೇಸರ ತರಿಸಿತು.

ಪುತ್ತಿಗೆ ಪದ್ಮನಾಭ ರೈ 

Advertisement

Udayavani is now on Telegram. Click here to join our channel and stay updated with the latest news.

Next