ನಟಿ ಸಾನ್ವಿ ಈಗ ಮತ್ತೆ ಕನ್ನಡದಲ್ಲಿ ಬಿಜಿಯಾಗುತ್ತಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಸ್ಟಾರ್ ನಟರೊಂದಿಗೆ ಅಭಿನಯಿಸಿ, ಸಕ್ಸಸ್‌ಫುಲ್ ನಟಿ ಎಂದೆನಿಸಿಕೊಂಡಿದ್ದ ಸಾನ್ವಿ, ಇತ್ತೀಚೆಗಷ್ಟೇ ಓಂ ಪ್ರಕಾಶ್‌ರಾವ್ ನಿರ್ದೇಶನದ “ರವಿ-ಚಂದ್ರ’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದ ಸುದ್ದಿಯನ್ನು ಇದೇ “ಬಾಲ್ಕನಿ’ಯಲ್ಲಿ ಹೇಳಲಾಗಿತ್ತು. ಈಗ ಹೊಸ ಸುದ್ದಿಯೆಂದರೆ, ಸಾನ್ವಿ ಸದ್ದಿಲ್ಲದೆಯೇ ಮತ್ತೂಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ.
ಹೌದು, “ಅಖಿಲ್’ ಚಿತ್ರಕ್ಕೆ ಸಾನ್ವಿ ನಾಯಕಿ. ಈ ಹಿಂದೆ “ಕಥಾ ವಿಚಿತ್ರ’ ಚಿತ್ರ ನಿರ್ದೇಶಿಸಿದ್ದ ಅನೂಪ್ ಆಂಟೋನಿ ಈ ಚಿತ್ರದ ನಿರ್ದೇಶಕರು. ಕಥೆಗೆ ಸಾನ್ವಿ ಸರಿಹೊಂದುತ್ತಾರೆಂಬ ಕಾರಣಕ್ಕೆ, ನಿರ್ದೇಶಕ ಅನೂಪ್ ಆಂಟೋನಿ ಅವರು ಸಾನ್ವಿ ಅವರಿಗೆ ಕಥೆ ಮತ್ತು ಪಾತ್ರ ವಿವರಿಸಿದ್ದೇ ತಡ, ಪಾತ್ರವನ್ನು ಮೆಚ್ಚಿಕೊಂಡ ಸಾನ್ವಿ, “ಅಖಿಲ್’ಗೆ ನಾಯಕಿಯಾಗಲು ಗ್ರೀನ್‌ಸಿಗ್ನಲ್ ಕೊಟ್ಟಿದ್ದಾರೆ.
ಅಂದಹಾಗೆ, ಸಾನ್ವಿ, ಇಲ್ಲಿ ಕಾಲೇಜ್ ಹುಡುಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಹಾಗಂತ, ಗ್ಲಾಮರ್ ಆಗಿರುತ್ತಾರೆ ಅಂದುಕೊಳ್ಳುವಂತಿಲ್ಲ. ಪಕ್ಕಾ ಡೀಸೆಂಟ್ ಆಗಿರುವ ಹುಡುಗಿ ಪಾತ್ರವನ್ನು ಸಾನ್ವಿ ನಿರ್ವಹಿಸುತ್ತಿದ್ದಾರೆ ಎಂಬುದು ನಿರ್ದೇಶಕರ ಮಾತು. ಈ ಚಿತ್ರದ ಮೂಲಕ ಸೂರಜ್ ಎಂಬ ಹೊಸ ಪ್ರತಿಭೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದೆ. ಸೂರಜ್‌ಗೆ “ಅಖಿಲ್’ ಮೊದಲ ಚಿತ್ರವಾದರೂ, ಸಿನಿಮಾರಂಗದ ಅನುಭವ ಇದೆ.
“ಐರಾವತ’ ಹಾಗೂ “ತಾರಕ್’ ಚಿತ್ರಗಳಲ್ಲಿ ಒಂದಷ್ಟು ಕೆಲಸ ಮಾಡಿ, ಈಗ ಹೀರೋ ಆಗುತ್ತಿದ್ದಾರೆ. ಇದೊಂದು ಮಾಸ್ ಕಥೆ ಆಗಿರುವುದರಿಂದ ಹೊಸ ಮುಖಗಳೇ ಹೆಚ್ಚು ಇರಲಿವೆ. ಕಾಲೇಜ್ ಕಥೆಯಾದ್ದರಿಂದ, ಪ್ರೀತಿ, ಪ್ರೇಮ ಇತ್ಯಾದಿ ಜೊತೆಗೆ ಹುಡುಗರ ನಡುವಿನ ಹೊಡೆದಾಟ ದೃಶ್ಯಗಳು ಕಾಣಿಸಿಕೊಳ್ಳಲಿವೆ. ಪ್ರತಿಯೊಬ್ಬ ಕಾಲೇಜ್ ಹುಡುಗನಿಗೂ ಸಂಬಂಧಿಸಿದಂತಹ ಕಥೆ ಇಲ್ಲಿದೆ.
ಚಿತ್ರ ನೋಡುವ ಪ್ರತಿ ಹುಡುಗನೂ ನನ್ನದೇ ಕಥೆ ಎಂದು ಭಾವಿಸುವಂತಹ ಚಿತ್ರ ಕಟ್ಟಿಕೊಡಲು ಹೊರಟಿರುವ ಅನೂಪ್, ಸುಮಾರು 65 ದಿನಗಳ ಕಾಲ ಬೆಂಗಳೂರಲ್ಲೇ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದಾರೆ. ಒಂದೇ ಏರಿಯಾದಲ್ಲಿರುವ ಹುಡುಗರ ಕಥೆ ಇದಾಗಿದ್ದು, ತುಂಬಾನೇ ನೈಜವಾಗಿ ಮೂಡಿಬರಲಿದೆ ಎಂಬ ವಿಶ್ವಾಸ ನಿರ್ದೇಶಕರದ್ದು. ಸೆಪ್ಟೆಂಬರ್‌ನಲ್ಲಿ ಚಿತ್ರದ ಚಿತ್ರೀಕರಣ ಶುರುವಾಗಲಿದೆ.
ಚಿತ್ರಕ್ಕೆ ಹರಿಕೃಷ್ಣ ಸಂಗೀತ ನೀಡುತ್ತಿದ್ದಾರೆ. “ಕಥಾ ವಿಚಿತ್ರ’ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದ ಅಭಿಲಾಶ್ ಕಲತಿ ಈ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ನಾಯಕಿ ಸಾನ್ವಿ ಅವರೀಗ ರಕ್ಷಿತ್‌ಶೆಟ್ಟಿ ಜೊತೆಗೆ “ಅವನೇ ಶ್ರೀಮನ್ನಾರಾಯಣ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈಗ “ರವಿ-ಚಂದ್ರ’ಕ್ಕೂ ನಾಯಕಿಯಾಗಿದ್ದಾರೆ. ಇವೆರೆಡರ ಜೊತೆಗೆ ಈಗ “ಅಖಿಲ್’ ಜೊತೆಯಾಗಿದ್ದಾರೆ.