ಬೆಂಗಳೂರು: ಕಾವೇರಿ ವಿವಾದದ ನಡುವೆ ಕನ್ನಡ ನಾಡು, ಭಾಷೆ, ಕನ್ನಡಿಗರ ಬಗ್ಗೆ ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ ಪಶ್ಚಿಮ ಬಂಗಾಳ ಮೂಲದ ಯುವಕನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಆರ್.ಟಿ.ನಗರ ನಿವಾಸಿ ನಿಲಾಯ್ ಮಂಡಲ್ (23) ಬಂಧಿತ.
ಆರೋಪಿ “ನೇಟೀವ್ ಬೆಂಗಳೂರಿಯನ್ಸ್’ ಎಂಬ ಇನ್‌ಸ್ಟ್ರಾಗ್ರಾಂ ಖಾತೆಯಲ್ಲಿ ಕರ್ನಾಟಕ, ಬೆಂಗಳೂರು ಹಾಗೂ ಕನ್ನಡಿಗರ ಬಗ್ಗೆ ಅವಾಚ್ಯಶಬ್ಧಗಳಿಂದ ನಿಂದಿಸಿ ಪೋಸ್ಟ್ ಮಾಡಿದ್ದ. ಈ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.
ಪಶ್ಚಿಮ ಬಂಗಾಳ ಮೂಲದ ಆರೋಪಿ ಕೊಡಿಗೇಹಳ್ಳಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ನೇಟಿವ್ ಬೆಂಗಳೂರಿಯನ್ಸ್ ಎಂಬ ಪೇಜ್‌ನಲ್ಲಿ ಕನ್ನಡಿಗರ ಕುರಿತು ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. “ಬೆಂಗಳೂರು ಇಲ್ಲದೆ ಕರ್ನಾಟಕ ಇಲ್ಲ. ಕರ್ನಾಟಕದ ಜನ ಅವಿದ್ಯಾವಂತರು. ಇಲ್ಲಿನ ಜನ ನನ್ನ ಶೌಚಾಲಯ ಸ್ವಚ್ಛ ಮಾಡಲು ನಾಲಾಯಕ್ಕು. ಉತ್ತರ ಭಾರತದವರು, ಅದರಲ್ಲೂ ಪಶ್ಚಿಮ ಬಂಗಾಳದವರು ಬೆಂಗಳೂರಿಗೆ ಬಂದು ಉದ್ಯೋಗ ಮಾಡುತ್ತಿರುವುದರಿಂದ ಬೆಂಗಳೂರು ಅಭಿವೃದ್ಧಿಯಾಗಿದೆ. ನಾವು ಬೆಂಗಳೂರು ಬಿಟ್ಟು ಹೋದರೆ, ಬೆಂಗಳೂರಿಗರು ಪ್ರಮುಖವಾಗಿ, ಕನ್ನಡಿಗರು ಕಾಡು ಜನರಿಗೆ ಸಮವಾಗುತ್ತಾರೆ. ಯಾರು ಕೂಡ ಕನ್ನಡ ಭಾಷೆ ಕಲಿಯುವುದಿಲ್ಲ’ ಎಂಬುದು ಸೇರಿ ಕನ್ನಡನಾಡು, ಕನ್ನಡಭಾಷೆ, ಕನ್ನಡಿಗರ ಬಗ್ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ ಪೋಸ್ಟ್ ಮಾಡಿದ್ದ. ಅದನ್ನ ಗಮನಿಸಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ಆರೋಪಿ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.
ಇನ್ನು ಆರೋಪಿ ಕೆಲಸ ಮಾಡುತ್ತಿದ್ದ ಕಂಪನಿ ಅಧಿಕಾರಿಗಳು ಕೂಡ ಪ್ರತಿಕ್ರಿಯೆ ನೀಡಿದ್ದು, ನಿಲಾಯ್ ಮಂಡಲ್ ಕುರಿತು ಆಂತರಿಕ ತನಿಖೆ ನಡೆಸುತ್ತಿದ್ದೇವೆ. ಪ್ರತಿ ಮಾಹಿತಿಯನ್ನು ಸಂಬಂಧಪಟ್ಟ ಪೊಲೀಸರಿಗೆ ತಿಳಿಸುತ್ತೇವೆ. ಘಟನೆಯಿಂದ ಯಾವುದೇ ಭಾವನೆಗಳಿಗೆ ಧಕ್ಕೆಯುಂಟಾದರೆ ಕ್ಷಮೆಯಾಚಿಸುತ್ತೇವೆ ಎಂದಿದ್ದಾರೆ.