Advertisement

Derogatary Term: ಸಿ.ಟಿ.ರವಿ ಪ್ರಕರಣಗಳು ಸಿಐಡಿ ತನಿಖೆಗೆ

04:24 AM Dec 25, 2024 | Team Udayavani |

ಹುಬ್ಬಳ್ಳಿ/ಬೆಂಗಳೂರು: ರಾಜ್ಯದಲ್ಲಿ ಭಾರೀ ವಿವಾದದ ಕಿಚ್ಚು ಹೊತ್ತಿಸಿರುವ, ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ವಿರುದ್ಧ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಅಶ್ಲೀಲ ಪದ ಬಳಕೆ ಪ್ರಕರಣ ಈಗ ಹೊಸ ಮಜಲು ತಲುಪಿದೆ. ಈವರೆಗೆ ಪೊಲೀಸರು ಹಾಗೂ ಪರಿಷತ್‌ ಸಭಾಪತಿ ಅಂಗಳದಲ್ಲೇ ಸುತ್ತುಹಾಕುತ್ತಿದ್ದ ಈ ಪ್ರಕರಣ ಈಗ ಮತ್ತೂಂದು ತಿರುವು ಪಡೆದುಕೊಂಡಿದ್ದು, ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಿರುವುದಾಗಿ ಗೃಹ ಸಚಿವ ಡಾ| ಪರಮೇಶ್ವರ್‌ ಮಂಗಳವಾರ ಘೋಷಿಸಿದ್ದಾರೆ.

Advertisement

ಇದರ ಬೆನ್ನಲ್ಲೇ ರಾಜ್ಯ ಸರಕಾರದಿಂದ ಅಧಿಕೃತ ಆದೇಶವೂ ಹೊರಬಿದ್ದಿದೆ. ಇದೇ ವೇಳೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಸಚಿವೆ ಹೆಬ್ಟಾಳ್ಕರ್‌, ಅವರ ಆಪ್ತ ಸಹಾಯಕ ಸಂಗನಗೌಡ ಪಾಟೀಲ್‌ ಹಾಗೂ ಇತರರ ವಿರುದ್ಧ ಸಿ.ಟಿ. ರವಿ ಅವರು ಖಾನಾಪುರ ಠಾಣೆಯಲ್ಲಿ ಸಲ್ಲಿಸಿದ್ದ ಪ್ರತಿದೂರನ್ನು ಕೂಡ ಸಿಐಡಿಗೆ ವರ್ಗಾಯಿಸಲಾಗಿದೆ. ಸದ್ಯದಲ್ಲೇ ಸಿಐಡಿಯ ವಿಶೇಷ ತನಿಖಾ ತಂಡ ರಚನೆ ಆಗುವ ಸಾಧ್ಯತೆಗಳಿವೆ. ಬಹುತೇಕ ಸಿಐಡಿ ಎಡಿಜಿಪಿ ಬಿ.ಕೆ. ಸಿಂಗ್‌ ನೇತೃತ್ವದ ತಂಡಕ್ಕೆ ಈ ಪ್ರಕರಣದ ತನಿಖೆಯ ಹೊಣೆ ಹೊರಿಸುವ ಸಾಧ್ಯತೆಗಳಿವೆ ಎಂದು ಸಿಐಡಿ ಮೂಲಗಳು ಹೇಳಿವೆ.

ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ
ಇದಕ್ಕೆ ಮುನ್ನ ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಪರಮೇಶ್ವರ್‌, ಸಿ.ಟಿ. ರವಿ ತಾವು ಅಶ್ಲೀಲ ಪದ ಬಳಕೆ ಮಾಡಿಲ್ಲ ಎನ್ನುತ್ತಿದ್ದಾರೆ. ಆದರೆ ಸಚಿವೆ ಹೆಬ್ಟಾಳ್ಕರ್‌ ಅವರ ಪಕ್ಕದಲ್ಲಿದ್ದವರು ರವಿ ಆ ಮಾತು ಆಡಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಎಲ್ಲ ವಿಷಯಗಳ ಬಗ್ಗೆ ತನಿಖೆ ಆಗಲೆಂದೇ ಈ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ ಎಂದಿದ್ದರು.

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಅವರು ತಮ್ಮ ಕೆಲಸ ಮಾಡಿದ್ದಾರೆ. ಅಲ್ಲಿಯ ಸಾಧಕ-ಬಾಧಕ ನೋಡಿಕೊಂಡು ಅವರು ಹೇಳಿಕೆ ಕೊಟ್ಟಿರಬಹುದು. ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುತ್ತಾರೆ. ಕಾನೂನು ಪ್ರಕ್ರಿಯೆ ನಡೆಯುವಾಗ ಸ್ವಲ್ಪ ವಿಳಂಬವಾಗಬಹುದು. ಆದರೆ ಪ್ರಕರಣದ ಸತ್ಯಾಸತ್ಯ ಪರಿಶೀಲಿಸುವುದು ಪೊಲೀಸರ ಕರ್ತವ್ಯ. ಸರಿಯಾದ ರೀತಿಯಲ್ಲಿ ತನಿಖೆ ಮಾಡಬೇಕಾಗುತ್ತದೆ ಎಂದೂ ಗೃಹ ಸಚಿವರು ತಿಳಿಸಿದ್ದರು.

ಆತ್ಮಸಾಕ್ಷಿಗೆ ಬಿಟ್ಟಿದ್ದ ಸಭಾಪತಿ
ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಡಿ. 19ರಂದು ವಿಧಾನಪರಿಷತ್ತಿನ ಕಲಾಪ ಮುಂದೂಡಿಕೆಯಾಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಹೆಬ್ಟಾಳ್ಕರ್‌ ಮತ್ತು ರವಿ ಅವರು ಪರಸ್ಪರ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು-ಪ್ರತಿದೂರು ಕೊಟ್ಟಿದ್ದರು. ಎರಡನ್ನೂ ಪರಿಶೀಲಿಸಿದ್ದ ಹೊರಟ್ಟಿ, ಘಟನೆಗೆ ಸೂಕ್ತ ಸಾಕ್ಷ್ಯಾಧಾರ ಇಲ್ಲದ್ದರಿಂದ ಇಬ್ಬರ ಆತ್ಮಸಾಕ್ಷಿಗೆ ಬಿಡುವುದಾಗಿ ತೀರ್ಪು ಕೊಟ್ಟಿದ್ದರಲ್ಲದೆ, ಇದನ್ನು ಇಲ್ಲಿಗೇ ಬಿಡುವಂತೆಯೂ ನಿರ್ದೇಶನ ನೀಡಿದ್ದರು.

Advertisement

ಹಕ್ಕುಬಾಧ್ಯತ ಸಮಿತಿಗೆ ಒಪ್ಪಿಸಿದ್ದ ಸ್ಪೀಕರ್‌
ಇದೇ ವಿಷಯ ವಿಧಾನಸಭೆಯಲ್ಲೂ ಪ್ರಸ್ತಾವವಾಗಿತ್ತು. ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡುವ ಮುನ್ನ ಪ್ರಸ್ತಾವವಾದ ಈ ವಿಷಯದಲ್ಲಿ ಸ್ಪೀಕರ್‌ ಯು.ಟಿ. ಖಾದರ್‌ ಕೂಡ ಒಂದು ತೀರ್ಪು ಕೊಟ್ಟಿದ್ದರು. ಗುರುವಾರ ಸಂಭವಿಸಿದ ಈ ಘಟನೆಯನ್ನು ಸೋಮವಾರದಿಂದ ಜಾರಿಗೆ ಬರುವಂತೆ ಹಕ್ಕುಬಾಧ್ಯತ ಸಮಿತಿಯ ಪರಿಶೀಲನೆಗೆ ಒಳಪಡಿಸುವುದಾಗಿ ಆದೇಶಿಸಿದ್ದರು.

ಠಾಣೆಯಲ್ಲಿ ಪರಸ್ಪರ ದೂರು-ಪ್ರತಿದೂರು
ಈ ಮಧ್ಯೆ ಸಿ.ಟಿ. ರವಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾಗಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್‌ ಅವರು ಬಾಗೇವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದನ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗುತ್ತಿದ್ದಂತೆ ಸಿ.ಟಿ. ರವಿ ಅವರ ಬಂಧನವಾಗಿತ್ತು. ಮರುದಿನವೇ ನ್ಯಾಯಾಲಯದ ಆದೇಶದ ಮೇರೆಗೆ ಬಿಡುಗಡೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next