ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡದಿದ್ದರೆ 5 ಗ್ಯಾರಂಟಿ ಯೋಜನೆಗಳು ರದ್ದಾಗಲಿವೆ ಎಂಬ ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ನೀಡಿರುವ ಹೇಳಿಕೆ ಜನಪ್ರತಿನಿಧಿ ಕಾಯ್ದೆಯ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಮಾನ್ಯತೆ ರದ್ದುಪಡಿಸುವಂತೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖೀಲ್ ಕುಮಾರಸ್ವಾಮಿ ನೇತೃತ್ವದ ನಿಯೋಗ ಚುನಾವಣ ಆಯೋಗಕ್ಕೆ ದೂರು ನೀಡಿದೆ.
ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಅವರನ್ನು ಭೇಟಿ ಮಾಡಿದ ನಿಯೋಗವು, ಬಾಲಕೃಷ್ಣರ ಹೇಳಿಕೆಯು ಸಾರ್ವಜನಿಕರಿಗೆ ಬೆದರಿಕೆ ಮತ್ತು ಅವರ ಮತದಾನದ ನಡವಳಿಕೆಯನ್ನು ಭ್ರಷ್ಟಗೊಳಿ ಸುವ ಪ್ರಕರಣವಾಗಿದೆ. ಜನಪ್ರತಿನಿಧಿ ಕಾಯ್ದೆಯಡಿ ಇಂತಹ ಪ್ರಕರಣಗಳಲ್ಲಿ ಆ ರಾಜಕೀಯ ಪಕ್ಷದ ಮಾನ್ಯತೆ ರದ್ದುಗೊಳಿಸುವ ತನ್ನ ಅಧಿಕಾರವನ್ನು ಆಯೋಗ ಚಲಾಯಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ.
ಸಂಸದ ಡಿ.ಕೆ. ಸುರೇಶ್ ಅವರ ಹೇಳಿಕೆ ದೇಶದ ಸಾರ್ವಭೌಮತೆಗೆ ವಿರುದ್ಧವಾಗಿದೆ. ಅವರನ್ನು ದೇಶದ ಕಾನೂನು ವ್ಯಾಪ್ತಿಯಲ್ಲಿ ವಿಚಾರಣೆಗೆ ಒಳಪಡಿಸಬೇಕು ಎಂದು ನಿಖೀಲ್ ಕುಮಾರಸ್ವಾಮಿ ಒತ್ತಾಯ ಮಾಡಿದರು.