ಬಾಗಲಕೋಟೆ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಹೊರ ಬಿದ್ದಿದ್ದು, ಕಳೆದ ವರ್ಷಕ್ಕಿಂತ ಫಲಿತಾಂಶದಲ್ಲಿ ಏರಿಕೆಯಾಗಿದೆ. ಆದರೆ, ರಾಜ್ಯ ಮಟ್ಟದ ರ್‍ಯಾಂಕಿಂಗ್‌ನಲ್ಲಿ ಜಿಲ್ಲೆಯ ಸ್ಥಾನ ಕುಸಿದಿದೆ.
ಈ ಬಾರಿ 199 ಸರ್ಕಾರಿ ಪ್ರೌಢ ಶಾಲೆಗಳು, 83 ಅನುದಾನಿತ ಹಾಗೂ 152 ಅನುದಾನರಹಿತ ಪ್ರೌಢ ಶಾಲೆಗಳ ಒಟ್ಟು 26,003 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 19,713 (ಶೇ.75.28) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ, ಬಾಲಕಿಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿ, ತಾವೇ ಮೇಲುಗೈ ಎಂಬುದು ಮತ್ತೂಮ್ಮೆ ಸಾಬೀತುಪಡಿಸಿದ್ದಾರೆ.
ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ 13,079 ಬಾಲಕರು ಪರೀಕ್ಷೆ ಬರೆದಿದ್ದು, ಅದರಲ್ಲಿ 9,469 (ಶೇ.72.39) ಪಾಸಾಗಿದ್ದಾರೆ. ಇನ್ನು 12,924 ಬಾಲಕಿಯರು ಪರೀಕ್ಷೆ ಎದುರಿಸಿದ್ದು, ಅದರಲ್ಲಿ 10,244 (ಶೇ.79.26) ಜನ ಉತ್ತೀರ್ಣರಾಗಿದ್ದಾರೆ.
ಹುನಗುಂದ ಫಸ್ಟ್-ಬೀಳಗಿ ಲಾಸ್ಟ್: ಜಿಲ್ಲೆಯ ತಾಲೂಕು ಮಟ್ಟದ ರ್‍ಯಾಂಕಿಂಗ್‌ನಲ್ಲಿ ಹುನಗುಂದ ಪ್ರಥಮ ಸ್ಥಾನ ಪಡೆದರೆ, ಬೀಳಗಿ ಕೊನೆ ಸ್ಥಾನದಲ್ಲಿದೆ. ಹುನಗುಂದ ತಾಲೂಕಿನಲ್ಲಿ 4,505 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅದರಲ್ಲಿ 3,676 (ಶೇ.81.60) ಪಾಸಾಗಿ, ಈ ತಾಲೂಕು ಜಿಲ್ಲೆಗೆ ಮೊದಲ ಸ್ಥಾನ ಪಡೆದಿದೆ. 2ನೇ ಸ್ಥಾನದಲ್ಲಿ ಬಾದಾಮಿ ಇದ್ದು, ಇಲ್ಲಿ 4,561 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 3,393 (ಶೇ.74.39) ವಿದ್ಯಾರ್ಥಿಗಳು ಪಾಸಾಗಿದ್ದಾರೆ. 3ನೇ ಸ್ಥಾನದಲ್ಲಿರುವ ಬಾಗಲಕೋಟೆ ತಾಲೂಕಿನಲ್ಲಿ 4,876 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 3,572 (ಶೇ.73.26) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಜಮಖಂಡಿ ತಾಲೂಕು 4ನೇ ಸ್ಥಾನ ಪಡೆದಿದ್ದು, ಇಲ್ಲಿ 7,725 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 5,089 (ಶೇ.65.88) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಮುಧೋಳ 5ನೇ ಸ್ಥಾನದಲ್ಲಿದ್ದು, ಈ ತಾಲೂಕಿನಲ್ಲಿ 4,851 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇಲ್ಲಿ 3,181 (ಶೇ.65.57) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕೊನೆಯ 6ನೇ ಸ್ಥಾನದಲ್ಲಿ ಬೀಳಗಿ ತಾಲೂಕಿದ್ದು, ಇಲ್ಲಿ 3,084 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 1,948 (ಶೇ.63.16) ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಆಂಗ್ಲ ಮಾಧ್ಯಮ ಪ್ರಥಮ: ಭಾಷಾವಾರು ವಿದ್ಯಾರ್ಥಿಗಳ ಉತ್ತೀರ್ಣದಲ್ಲಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಸಾಗಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ 3,420 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 3,065 (ಶೇ.89.62) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ 21,655 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅದರಲ್ಲಿ 16,069 (ಶೇ.74.20) ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಉರ್ದು ಮಾಧ್ಯಮದಲ್ಲಿ 908 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 568 (ಶೇ.62.56) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಮರಾಠಿ ಮಾಧ್ಯಮದಲ್ಲಿ 20 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 11 (ಶೇ.55) ವಿದ್ಯಾರ್ಥಿಗಳು ಪಾಸಾಗಿದ್ದಾರೆ.
11 ಸರ್ಕಾರಿ ಶಾಲೆ 100ರಷ್ಟು ಸಾಧನೆ: ಜಿಲ್ಲೆಯ 11 ಸರ್ಕಾರಿ ಪ್ರೌಢ ಶಾಲೆಗಳು ಈ ಬಾರಿ 100ಕ್ಕೆ 100 ಫಲಿತಾಂಶ ನೀಡಿವೆ. 4 ಅನುದಾನಿತ, 14 ಅನುದಾನರಹಿತ ಶಾಲೆಗಳೂ ಶೇ.100ಕ್ಕೆ 100 ಫಲಿತಾಂಶ ಕೊಟ್ಟಿವೆ. ಅಲ್ಲದೇ 199 ಸರ್ಕಾರಿ ಪ್ರೌಢ ಶಾಲೆಗಳಲ್ಲಿ ಪರೀಕ್ಷೆ ಎದುರಿಸಿದ 12,442 ವಿದ್ಯಾರ್ಥಿಗಳಲ್ಲಿ 9,172 ವಿದ್ಯಾರ್ಥಿಗಳು (ಶೇ.73.72) ಪಾಸಾದರೆ, 83 ಅನುದಾನಿತ ಶಾಲೆಗಳಲ್ಲಿ 6,767 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, ಅದರಲ್ಲಿ 4,979 (ಶೇ.73.58) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 152 ಅನುದಾನರಹಿತ ಶಾಲೆಗಳಲ್ಲಿ 6,794 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ 5,562 (ಶೇ.81.87) ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಜಿಲ್ಲೆಯ ಟಾಪ್-10 ವಿದ್ಯಾರ್ಥಿಗಳು:
ಬಾಗಲಕೋಟೆ ವಿದ್ಯಾಗಿರಿಯ ಸೇಂಟ್ ಆನ್ಸ್ ಕಾನ್ವೆಂಟ್ ಪ್ರೌಢ ಶಾಲೆಯ ಸಮರ್ಥ ಬಾರ್ಶಿ-622, ಬಾದಾಮಿ ತಾಲೂಕು ಚಿಕ್ಕಮುಚ್ಚಳಗುಡ್ಡ ಗ್ರಾಮದ ಆದರ್ಶ ವಿದ್ಯಾಲಯದ ದೀಪಿಕಾ ಮುತ್ತಪ್ಪ ಹೊಸಮನಿ-620, ರಬಕವಿ-ಬನಹಟ್ಟಿಯ ಎಸ್.ಆರ್.ಎ ಜ್ಯೂನಿಯರ್ ಕಾಲೇಜಿನ ರವಿಕುಮಾರ ಬಸವರಾಜ ಕರಲಟ್ಟಿ-620, ಇದೇ ಜ್ಯೂನಿಯರ್ ಕಾಲೇಜಿನ ಅಶ್ವಿನಿ ಗೊಡಚಪ್ಪ ಯಡಹಳ್ಳಿ-619, ಹುನಗುಂದ ಆದರ್ಶ ವಿದ್ಯಾಲಯದ ಪ್ರಜ್ವಲ್ ಖೋತ-617, ಜಮಖಂಡಿಯ ತುಂಗಳ ಆಂಗ್ಲ ಮಾಧ್ಯಮ ಶಾಲೆಯ ಸೃಷ್ಟಿ ಮೋಹನಕುಮಾರ ನ್ಯಾಮಗೌಡ-617, ಬನಹಟ್ಟಿಯ ಎಸ್.ಆರ್.ಎ ಜ್ಯೂನಿಯರ್ ಕಾಲೇಜಿನ ಸಂತೋಷ ಚನಮಲ್ಲಪ್ಪ-617, ಹುನಗುಂದ ತಾಲೂಕು ಸೂಳೇಭಾವಿಯ ಸರ್ಕಾರಿ ಜ್ಯೂನಿಯರ್ ಕಾಲೇಜಿನ ವರ್ಷಾ ಅರವಿಂದಗೌಡ ಪಾಟೀಲ-617, ಬಾಗಲಕೋಟೆಯ ಎಸ್.ಸಿ, ಎಸ್.ಟಿ ಪ್ರತಿಭಾನ್ವಿತ ವಿದ್ಯಾರ್ಥಿಗಳ ವಸತಿ ನಿಲಯದ ಸತ್ಯವತಿ ಶಂಕ್ರಪ್ಪ-616, ರಬಕವಿಯ ಡಿ.ಕೆ. ಕೊಟ್ರಶೆಟ್ಟಿ ಶಾಲೆಯ ಓಂ ಗಿರೀಶ ಪಿಸೆ-616, ಜಮಖಂಡಿಯ ತುಂಗಳ ಪ್ರೌಢ ಶಾಲೆಯ ಸೃಷ್ಟಿ ಸಂಜೀವ ತೇಲಿ-616 ಅಂಕ ಪಡೆದು ಜಿಲ್ಲೆಯ ಟಾಪ್-10 ವಿದ್ಯಾರ್ಥಿಗಳೆನಿಸಿಕೊಂಡಿದ್ದಾರೆ.