ಉಳ್ಳಾಲ : ವಸತಿ ಸಂಕೀರ್ಣದಲ್ಲಿದ್ದ ಫ್ಯ್ಲಾಟೊಂದರ ಕೋಣೆಯಲ್ಲಿ ವಿದ್ಯುತ್ ಚಾಲನಾ ಸ್ಥಿತಿಯಲ್ಲಿಟ್ಟಿದ್ದ ಇಸ್ತ್ರಿಪೆಟ್ಟಿಗೆಯಿಂದ ಬೆಡ್ ಬಿಸಿಯಾಗಿ ಆಕಸ್ಮಿಕವಾಗಿ ಬೆಂಕಿ ಅವಘಡವಾಗಿದ್ದು,
ವಸತಿ ಸಂಕೀರ್ಣದ ಪ್ರಬಂಧಕನ ಸಮಯ ಪ್ರಜ್ಞೆಯಿಂದ ಬಹುಮಹಡಿಯಲ್ಲಿ ಬೆಂಕಿ ಆಕಸ್ಮಿಕವೊಂದು ತಪ್ಪಿದಂತಾಗಿದೆ.
ದೇರಳಕಟ್ಟೆ ಖಾಸಗಿ ವೈದ್ಯಕೀಯ ಕಾಲೇಜಿನ ಪಕ್ಕದ ವಸತಿ ಸಂಕೀರ್ಣದಲ್ಲಿ ಬೆಂಕಿ ಅವಘಡವಾಗಿದ್ದು, ವಸತಿ ಸಂಕೀರ್ಣದ ಪ್ರಬಂಧಕ ಕುತ್ತಾರು ನಿವಾಸಿ ಮಹಮ್ಮದ್ ಶಾಹಿದ್ ಶಫೀಕ್ ಸಮಯ ಪ್ರಜ್ಞೆಯಿಂದ ದುರಂತ ತಪ್ಪಿದೆ. ವಸತಿ ಸಂಕೀರ್ಣದಲ್ಲಿ ಹೊಗೆ ಹೊರಗಡೆ ಬಂದಾಗ ಶಫೀಕ್ ವಸತಿ ಹೊಗೆಗೆ ಕಾರಣ ಏನೆಂದು ಪ್ರತೀ ಮಹಡಿಗೆ ತೆರಳಿ ತಪಾಸಣೆ ನಡೆಸಿದಾಗ ದಂತ ವೈದ್ಯಕೀಯ ವಿದ್ಯಾರ್ಥಿಗಳು ವಾಸಿಸುತ್ತಿದ್ದ ಫ್ಲ್ಯಾಟ್‍ನ ಕೋಣೆಯಿಂದ ಹೊಗೆ ಬರುತ್ತಿರುವ ವಿಚಾರ ತಿಳಿಯುತ್ತಿದ್ದಂತೆ ಆ ವಿದ್ಯಾರ್ಥಿಗಳಿಗೆ ಕರೆ ಮಾಡಿ ಕರೆಸಿದ್ದ ಕೋಣೆಯ ಬೀಗ ತೆಗೆದು ಒಳಗೆ ನುಗ್ಗಿ ತಪಾಸಣೆ ನಡೆಸಿದಾಗ ಬೆಡ್‍ನಲ್ಲಿ ಬೆಂಕಿ ಬರುತ್ತಿರುವುದನ್ನು ಕಂಡು ಬೆಡ್ ಹೊರಗೆ ಎಸೆದಿದ್ದಾರೆ.
ಕೋಣೆ ತುಂಬಾ ಹೊಗೆ ತುಂಬಿದ್ದು ಪ್ರಾಣಾಪಾಯವನ್ನು ಲೆಕ್ಕಿಸದೆ ಒಳ ಕೋಣೆಯ ಒಳಗೆ ತೆರಳಿ ಹೆಚ್ಚು ಅವಘಡವನ್ನು ತಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಲೇಜಿನ ಕಾರ್ಯಕ್ರಮದ ಹಿನ್ನಲೆಯಲ್ಲಿ ದಂತ ವಿಜ್ಞಾನ ವಿದ್ಯಾರ್ಥಿಗಳಿಬ್ಬರು ಬಟ್ಟೆಗೆ ಇಸ್ತ್ರಿ ಹಾಕಿ ತುರಾತುರಿಯಲ್ಲಿ ಇಸ್ತ್ರಿಪೆಟ್ಟಿಗೆಯ ಸ್ವಿಚ್ ಆಫ್ ಮಾಡದೆ ಮಲಗುವ ಬೆಡ್ ಮೇಲೆ ಇಟ್ಟು ತೆರಳಿದ್ದು, ಇಸ್ತ್ರಿಪೆಟ್ಟಿಗೆ ಬಿಸಿಯಾಗಿ ಬೆಡ್‍ನಲ್ಲಿ ಬೆಂಕಿ ಉಂಟಾಗಿದ್ದು ಬೆಂಕಿ ಮತ್ತು ಹೊಗೆ ಹೊರಗಡೆ ಆವರಿಸಿತ್ತು. ಫ್ಲ್ಯಾಟ್‍ನ ವಾಚ್‍ಮೆನ್ ಲೋಕೇಶ್ ಈ ಸಂದರ್ಭದಲ್ಲಿ ಸಹಕರಿಸಿದ್ದರು.