ಕೆ.ಆರ್.ಪೇಟೆ: ಪಟ್ಟಣದಲ್ಲಿರುವ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಸ್ಥಳ, ಸಿಬ್ಬಂದಿ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳ ಅವ್ಯವಸ್ಥೆಯಿಂದ ಜನರಿಗೆ ಸೂಕ್ತ ಸಮಯಕ್ಕೆ ನೋಂದಣಿ ಕೆಲಸವಾಗದೆ ಕಾಯುವ ದುಸ್ಥಿತಿ ನಿರ್ಮಾಣವಾಗಿದೆ.
ತಾಲೂಕಿನಲ್ಲಿ ಪ್ರತಿದಿನ ಮನೆ, ನಿವೇಶನ, ಕೃಷಿ ಭೂಮಿ ಮತ್ತಿತರೆ ನೋಂದಣಿ ಹಾಗೂ ಆಧಾರ್‌ಕಾರ್ಡ್ ಮಾಡಿಸಲು ತಾಲೂಕಿನ ಜನ ಉಪನೋಂದ ಣಾಧಿಕಾರಿ ಕಚೇರಿಗೇ ಬರುವ ಅನಿವಾರ್ಯತೆ ಇದೆ. ಆದರೆ ಸದರಿ ಕಚೇರಿಯಲ್ಲಿ ಓರ್ವ ನೋಂದಣಾ ಧಿಕಾರಿ, ಓರ್ವ ಡಿ.ಗ್ರೂಪ್ ನೌಕರ ಹೊರತು ಪಡಿಸಿದರೆ ಉಳಿದ ಎಲ್ಲಾ ಹುದ್ದೆಗಳು ಖಾಲಿ ಇದೆ. ಮಧ್ಯವರ್ತಿಗಳ ಹಾವಳಿ: ಸದರಿ ಕಚೇರಿಯಲ್ಲಿ ಮಧ್ಯ ವರ್ತಿಗಳು ಹಾಗೂ ಸ್ವಯಂ ಸೇವಕರಿಂದಲೇ ಸಾರ್ವಜನಿಕ ಕೆಲಸಗಳು ನಡೆಯುತ್ತಿವೆ. ಕಚೇರಿಯಲ್ಲಿ ಪತ್ರ ಬರಹಗಾರರು ಮತ್ತು ಮಧ್ಯವರ್ತಿಗಳು ಕಾನೂನು ಬಾಹಿರ ಚಟುವಟಿಕೆ ಸ್ಥಗಿತಗೊಳಿಸಿದರೆ ಉಪ ನೋಂದಣಾಧಿಕಾರಿಗಳ ಕಚೇರಿಗೇ ಬೀಗ ಹಾಕಬೇಕೆನ್ನುವಷ್ಟರ ಮಟ್ಟಿಗೆ ಆಡಳಿತ ವ್ಯವಸ್ಥೆ ಹದಗೆಟ್ಟಿದೆ.
ಮಧ್ಯವರ್ತಿಗಳು ಕಾಯಬೇಕಿಲ್ಲ: ರೈತರು ವಿವಿಧ ಕೃಷಿ ಯೋಜನೆಗಳಡಿ ಆಧಾರ್ ಲಿಂಕ್ ಮಾಡಬೇಕಾಗುತ್ತದೆ. ಅದು ಉಪನೋಂದಣಾಧಿಕಾರಿ ಕಚೇರಿಯಲ್ಲೇ ಮಾಡಬೇಕಾಗುತ್ತದೆ. ಹಾಗಾಗಿ ಪ್ರತಿದಿನ ನೂರಾರು ರೈತರು ಕಚೇರಿಗೆ ಆಗಮಿಸುತ್ತಾರೆ. ಆದರೆ ಇಲ್ಲಿನ ಸಿಬ್ಬಂದಿ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಣ್ಣ ಕೆಲಸವಾಗಬೇಕಾದರೂ 20ರಿಂದ 30 ದಿನ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಏಕೆಂದರೆ ಆಧಾರ್ ಮಾಡಿಸಲು ಬರುವ ರೈತರಿಗೆ ದಿನಾಂಕ ನಿಗದಿಪಡಿಸಿ ಟೋಕನ್ ಕೊಡುತ್ತಾರೆ. ರೈತರು ಆ ದಿನಾಂಕದಂದೇ ಬಂದು ಆಧಾರ್ ಮಾಡಿಸಬೇಕು. ಆದರೆ ಈ ನಿಮಯ ಬರಿ ರೈತರಿಗೆ ಮಾತ್ರ.
ಪ್ರಭಾವಿಗಳು, ಮಧ್ಯವರ್ತಿಗಳಿಗೆ ಅನ್ವಯಿಸುವುದಿಲ್ಲ. ಇವರು ಲಂಚ ಕೊಟ್ಟೋ, ಪ್ರಭಾವ ಬಳಸಿ ಒಂದೇ ದಿನದಲ್ಲಿ ಕೆಲಸ ಮಾಡಿಕೊಳ್ಳುತ್ತಾರೆ. ಜಿಲ್ಲೆಯಲ್ಲಿಯೇ ಕನಿಷ್ಠ ಸಿಬ್ಬಂದಿ: ಜಿಲ್ಲೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ತಾಲೂಕು ಕೇಂದ್ರವಾದರೂ ನೋಂದಣಿ ಕಚೇರಿಯಲ್ಲಿ ಯಾವುದೇ ಮೂಲ ಸೌಲಭ್ಯಗಳು, ಸಕ್ರಮ ಆಡಳಿತ ವ್ಯವಸ್ಥೆ ಇಲ್ಲ. ಕಚೇರಿಯಲ್ಲಿ ಎಫ್ಡಿಎ, ಎಸ್‌ಡಿಎ ಸೇರಿದಂತೆ ಅನೇಕ ಸಿಬ್ಬಂದಿ ಕೊರತೆ ಇದೆ. ಮುಖ್ಯವಾಗಿ ಅಗತ್ಯಕ್ಕೆ ತಕ್ಕಷ್ಟು ಕಂಪ್ಯೂಟರ್ ಆಪರೇಟರ್‌ಗಳೇ ಇಲ್ಲ, ಕೇವಲ ಮೂವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ.
ಮೂಲ ಸೌಲಭ್ಯಗಳ ಕೊರತೆ: ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮೌಲ ಸೌಲಭ್ಯಗಳ ಕೊರತೆ ಇದೆ. ಕಾರ್ಯ ನಿಮಿತ್ತ ಕಚೇರಿಗೆ ಆಗಮಿಸುವ ಸಾರ್ವಜನಿಕರು ಕುಳಿತುಕೊಳ್ಳಲು ಸೂಕ್ತ ಸ್ಥಳಾವಕಾಶ ಇಲ್ಲ. ಹೊಸ ಕಟ್ಟಡ ನಿರ್ಮಿಸಲೆಂದು ಹಳೆಯ ಕಟ್ಟಡ ಕೆಡವಿ ಉಪ ನೋಂದಣಾಧಿಕಾರಿ ಕಚೇರಿಯನ್ನು ಹಳೆ ತಾಲೂಕು ಕಚೇರಿ ಕಟ್ಟಡಕ್ಕೆ ವರ್ಗಾಯಿಸಲಾಗಿದೆ. ಸ್ಥಳಾಂತರ ಮಾಡಿ ಐದಾರು ವರ್ಷ ಕಳೆದರೂ ಇದುವರೆಗೂ ಹೊಸ ಕಟ್ಟಡ ನಿರ್ಮಿಸುವ ಯಾವುದೇ ಸೂಚನೆಗಳು ಕಂಡು ಬರುತ್ತಿಲ್ಲ. ಜನ ಕಚೇರಿ ಹೊರಗಿನ ಮರದಡಿಗಳಲ್ಲಿ ಕುಳಿತು ಕಾಯುವಂತಾಗಿದೆ. ಕಚೇರಿಯ ಒಳಭಾಗದಲ್ಲಿ ಕೇವಲ ಹತ್ತರಿಂದ ಹದಿನೈದು ಜನ ಮಾತ್ರ ಕುಳಿತುಕೊಳ್ಳಲು ಜಾಗವಿದೆಯಷ್ಟೆ.
ವಿವಾಹ ನೋಂದಣಿಗೂ ಕಿರಿಕಿರಿ: ಸರ್ಕಾರಿ ಸೌಲಭ್ಯ ಹಾಗೂ ಸಾಂಪ್ರದಾಯಿಕ ಪದ್ಧತಿಯಲ್ಲಿ ವಿವಾಹವಾದರೂ ಬಳಿಕ ಉಪನೋಂದಣಾಧಿಕಾರಿ ಕಚೇರಿಯಲ್ಲಿ ವಿವಾಹ ನೋಂದಣಿ ಮಾಡಿಸುವುದು ಕಡ್ಡಾಯ ಮಾಡಲಾಗಿದೆ. ಆದರೆ ತಾಲೂಕಿನಲ್ಲಿರುವ ಉಪನೋಂದಣಾಧಿಕಾರಿ ಕಚೇರಿಯಲ್ಲಿ
ಅಧಿಕಾರಿಗಳಿಗೆ ಲಾಭ ತಂದುಕೊಡುವ ಆಸ್ತಿ ನೋಂದಣಿಗಳಿಗೆ ಮಾತ್ರ ಆದ್ಯತೆ ನೀಡಿ, ವಿವಾಹ ನೋಂದಣಿಗೆ ತಿಂಗಳುಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ನವ ವಿವಾಹಿತ ಜೋಡಿ ಉಪನೊಂದಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ವಿವಾಹ ನೋಂದಣಿ ಮಾಡಿಸಿಕೊಂಡಿರುವ ಘಟನೆಯೂ ಇಲ್ಲಿ ನಡೆದಿದೆ.
-ಎಚ್.ಬಿ.ಮಂಜುನಾಥ್