ಬೆಂಗಳೂರು: ಬಿಬಿಎಂಪಿ ಆಡಳಿತ ವರದಿಯನ್ನು ಒಂದು ವಾರದೊಳಗಾಗಿ ಸಿದ್ಧಪಡಿಸುವಂತೆ ಪಾಲಿಕೆಯ ಎಲ್ಲ ವಿಭಾಗದ ಮುಖ್ಯಸ್ಥರಿಗೆ ಬಿಬಿಎಂಪಿ ಉಪಮೇಯರ್ ಭದ್ರೇಗೌಡ ಶನಿವಾರ ಸೂಚನೆ ನೀಡಿದರು.
ಐದು ವರ್ಷಗಳಿಂದ ಆಡಳಿತ ವರದಿ ಮಂಡಿಸದ ಹಿನ್ನೆಲೆಯಲ್ಲಿ ಬಿಬಿಎಂಪಿ ಕೇಂದ್ರ ಕಚೇರಿ ಸಭಾಂಗಣದಲ್ಲಿ ಭದ್ರೇಗೌಡ ಅವರು ಆಡಳಿತ ಪರಿಶೀಲನಾ ಸಭೆ ನಡೆಸಿದರು. ಕೆಎಂಸಿ ಕಾಯ್ದೆ 61(3)ರ ಅಡಿ ಪ್ರತಿ ವರ್ಷ ಆಡಳಿತ ಮತ್ತು ಲೆಕ್ಕಪರಿಶೋಧನಾ ವರದಿ ಮಂಡಿಸಬೇಕು.
ಆದರೆ, 2013-14ರಿಂದ ಇದುವರೆಗೆ ವರದಿ ಮಂಡಿಸಿಲ್ಲ. ಈ ಸಂಬಂಧ ಪ್ರಸಕ್ತ ಸಾಲಿನಲ್ಲಿ ವರದಿ ಮಂಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಅಧಿಕಾರಿಗಳು ಇಲಾಖಾವಾರು ಸಂಪೂರ್ಣ ಮಾಹಿತಿ ಸಂಗ್ರಹಿಸಿದ ವರದಿಯನ್ನು ಸಾಂಖೀಕ ವಿಭಾಗಕ್ಕೆ ವಾರದೊಳಗಾಗಿ ಸಲ್ಲಿಕೆ ಮಾಡಬೇಕು.
ಬಳಿಕ ಆ ವರದಿಯನ್ನು ಕ್ರೂಢೀಕರಿಸಿ ಕರಡು ಸಿದ್ಧಪಸಿಕೊಂಡು ಮಾಸಿಕ ಸಭೆಯಲ್ಲಿ ಆಡಳಿತ ವರದಿ ಮಂಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಉಪಮೇಯರ್ ತಿಳಿಸಿದರು. ಸಭೆಯಲ್ಲಿ ವಿಶೇಷ ಆಯುಕ್ತರು (ಆಡಳಿತ), ಎಲ್ಲ ವಲಯಗಳ ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್ (ರಸ್ತೆಗಳು), ಜಂಟಿ ನಿರ್ದೇಶಕರು (ಸಾಂಖೀಕ) ಹಾಗೂ ವಿವಿಧ ಇಲಾಖೆ ಮುಖ್ಯಸ್ಥರು ಹಾಜರಿದ್ದರು.
ಕೌನ್ಸಿಲ್ ಸಭೆಯಲ್ಲಿ ಚರ್ಚೆ: ಕೆಎಂಸಿ ಕಾಯ್ದೆ ಅನ್ವಯ ವರದಿ ಮಂಡನೆಯಾಗದೆ ಇರುವ ಬಗ್ಗೆ ಪಾಲಿಕೆಯ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಅವರು ಜೂ.28ರಂದು ನಡೆದ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಿದ್ದರು. ಆಡಳಿತ ವರದಿ ಮಂಡಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ. ವರದಿ ಮಂಡಿಸದೆ ಲೋಪ ಎಸಗುತ್ತಿರುವುದಕ್ಕೆ ಕಾರಣವೇನು, ಅವ್ಯವವಹಾರಗಳನ್ನು ಮುಚ್ಚಿಡುವ ಪ್ರಯತ್ನ ನಡೆಯುತ್ತಿದೆಯೇ ಎಂದು ಅವರು ಪ್ರಶ್ನೆ ಮಾಡಿದ್ದರು.