Advertisement

ಉಪ ಚುನಾವಣೆ: ಜೆಡಿಎಸ್‌ ಬುಡ ಭದ್ರ,ಕಾಂಗ್ರೆಸ್‌ ಬೇರು ಸಡಿಲ

06:25 AM Oct 16, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಪಟ್ಟ ಅನಾಯಾಸವಾಗಿ ದೊರಕಿಸಿಕೊಂಡ ಜೆಡಿಎಸ್‌ ಇದೀಗ ಉಪ ಚುನಾವಣೆಯಲ್ಲೂ ಐದು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರ ಪಡೆದುಕೊಳ್ಳುವ ಮೂಲಕ ರಾಜಕೀಯವಾಗಿ ಸುಭದ್ರಗೊಂಡಿದೆ.

Advertisement

ಆ ಮೂಲಕ ಪಕ್ಷದ ಬೇರು ಗಟ್ಟಿಗೊಳಿಸಿಕೊಳ್ಳುವುದಷ್ಟೇ ಅಲ್ಲದೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ರಾಜ್ಯ ರಾಜಕೀಯದಲ್ಲಿ ಫ‌ವರ್‌ಫ‌ುಲ್‌ ಎಂಬ ಸಂದೇಶವೂ ರವಾನೆಯಾಗಿದೆ.

ಶಿವಮೊಗ್ಗ ಕ್ಷೇತ್ರದ ಮಟ್ಟಿಗಂತೂ ಕಾಂಗ್ರೆಸ್‌ಗೆ ಅಲ್ಲಿ ಅಭ್ಯರ್ಥಿಗಳೇ ಸಿಗದಂತ ಪರಿಸ್ಥಿತಿಯಲ್ಲಿ ರಾಜಕೀಯ ಚಾಣಾಕ್ಷತೆಗೆ ಹೆಸರಾದ ದೇವೇಗೌಡರು ಉರುಳಿಸಿದ ದಾಳಕ್ಕೆ ಕಾಂಗ್ರೆಸ್‌ ಪ್ರತಿರೋಧವಿಲ್ಲದೆ ಒಪ್ಪಿಕೊಳ್ಳುವಂತಾಗಿದೆ. ಮಂಡ್ಯ, ರಾಮನಗರದಲ್ಲಿ ಕಾಂಗ್ರೆಸ್‌ನಿಂದ ಎಷ್ಟೇ ಪ್ರತಿರೋಧ ಇದ್ದರೂ ಜೆಡಿಎಸ್‌ “ಹಠ’ ಗೆದ್ದಿದೆ.

ಹಳೇ ಮೈಸೂರು, ಮಲೆನಾಡು, ಕರಾವಳಿ ಭಾಗದ ಪ್ರದೇಶಗಳನ್ನೊಳಗೊಂಡಿರುವ ರಾಮನಗರ, ಮಂಡ್ಯ, ಶಿವಮೊಗ್ಗ ಕ್ಷೇತ್ರಗಳಲ್ಲಿ ಜೆಡಿಎಸ್‌ ಮತ್ತಷ್ಟು ಗಟ್ಟಿಗೊಳ್ಳಲ ಉಪ ಚುನಾವಣೆ ಅವಕಾಶ ಒದಗಿಸಿದಂತಾಗಿದೆ.

ಬಳ್ಳಾರಿ ಹಾಗೂ ಜಮಖಂಡಿ ಎರಡೂ ಕ್ಷೇತ್ರಗಳಲ್ಲಿ ಹಿಂದಿನ ಚುನಾವಣೆಗಳಲ್ಲಿ ಜೆಡಿಎಸ್‌ ಸಾಧನೆ ಅಷ್ಟಕ್ಕಷ್ಟೇ. ಹೀಗಾಗಿ, ಆ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳು ಸ್ಪರ್ಧೆ ಮಾಡುವ ಪ್ರಮೇಯವೇ ಇರಲಿಲ್ಲ. ಆದರೆ, ರಾಮನಗರ, ಮಂಡ್ಯ, ಶಿವಮೊಗ್ಗ ಕ್ಷೇತ್ರಗಳು ಜೆಡಿಎಸ್‌ಗೆ ಲಭಿಸಿದ್ದು ಸಂಘಟನಾತ್ಮಕವಾಗಿ ಪಕ್ಷದ ಬೆಳವಣಿಗೆಗೆ ಕಾರಣವಾಗಲಿದೆ. ಕಾಂಗ್ರೆಸ್‌ಗೆ ಇದರಿಂದ ರಾಜಕೀಯವಾಗಿ ನಷ್ಟವೇ ಎಂಬ ಮಾತುಗಳು ಕೇಳಿಬರುತ್ತಿವೆ.

Advertisement

ಇದೀಗ ಶಿವಮೊಗ್ಗ , ಮಂಡ್ಯ ಕ್ಷೇತ್ರ ಉಪ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವುದರಿಂದ ಸಹಜವಾಗಿ 2019 ರ ಚುನಾವಣೆಗೂ ಬಿಟ್ಟುಕೊಡಬೇಕಾಗುತ್ತದೆ. ಆಗ ಚಿಕ್ಕಬಳ್ಳಾಪುರ, ತುಮಕೂರು, ಮೈಸೂರು  ಕ್ಷೇತ್ರಗಳಿಗೂ ಜೆಡಿಎಸ್‌ನಿಂದ ಬೇಡಿಕೆ ಇಡುವ ಸಾಧ್ಯತೆಯಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಹಾಗೊಮ್ಮೆ 2019ರ ಚುನಾವಣೆಯಲ್ಲೂ ಜೆಡಿಎಸ್‌ ಬಯಸಿದ ಕ್ಷೇತ್ರಗಳು ಲಭಿಸಿದರೆ ಜೆಡಿಎಸ್‌ ಪ್ರಾಬಲ್ಯ ಮತ್ತಷ್ಟು ವಿಸ್ತರಿಸುವುದರಲ್ಲಿ ಅನುಮಾನವಿಲ್ಲ.ಮುಳುವಾದ ಕಾರ್ಯತಂತ್ರ ಜೆಡಿಎಸ್‌ನಲ್ಲಿ ಎರಡನೇ ಸಾಲಿನ ನಾಯಕರಾಗಿದ್ದ ಮಧು ಬಂಗಾರಪ್ಪ ವಿಧಾನಸಭೆ ಚುನಾವಣೆಯಲ್ಲಿ ಸೊರಬ ಕ್ಷೇತ್ರದಿಂದ ಸ್ಪರ್ಧಿಸಿ ಸಹೋದರ ಬಿಜೆಪಿ ಅಭ್ಯರ್ಥಿ ಕುಮಾರ್‌ ಬಂಗಾರಪ್ಪ ವಿರುದ್ಧ ಸೋಲು ಅನುಭವಿಸಿ ಆಘಾತ ಅನುಭವಿಸಿದ್ದರು.  ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮಧು ಬಂಗಾರಪ್ಪ ಅವರನ್ನು ಹಣಿಯುವ ಸಲುವಾಗಿಯೇ ಕುಮಾರ್‌ ಬಂಗಾರಪ್ಪ ಅವರನ್ನು ಬಿಜೆಪಿಗೆ ಕರೆತಂದು ಟಿಕೆಟ್‌ ನೀಡಿದ್ದರು.

ಆದರೆ. ಇದೀಗ ಆ ತಂತ್ರಗಾರಿಕೆ ಯಡಿಯೂರಪ್ಪ ಅವರಿಗೆ ಮುಳುವಾಗಿದ್ದು, ತಮ್ಮ ಪುತ್ರನ ವಿರುದ್ಧ ಮಧು ಬಂಗಾರಪ್ಪ ಕಣಕ್ಕಿಳಿಯುತ್ತಿದ್ದಾರೆ.  ಈಡಿಗ, ಒಕ್ಕಲಿಗ, ಮುಸ್ಲಿಂ, ದಲಿತ, ಹಿಂದುಳಿದ ಮತಗಳ ಮೇಲೆ ಕಣ್ಣಿಟ್ಟು ಕಾರ್ಯತಂತ್ರ ರೂಪಿಸಿ ಮಧು ಬಂಗಾರಪ್ಪ ಅವರನ್ನು ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಿರುವುದರಿಂದ ಹೋರಾಟ ತೀವ್ರವಾಗಿಯೇ  ಇರಲಿದೆ.

ಕಾಂಗ್ರೆಸ್‌ ಬುಡ ಅಲ್ಲಾಡುತ್ತಾ ?
ಉಪ ಚುನಾವಣೆಯಲ್ಲಿ ಸ್ಥಳೀಯ ನಾಯಕರ ವಿರೋಧದ ನಡುವೆಯೂ ಮಂಡ್ಯ, ರಾಮನಗರ, ಶಿವಮೊಗ್ಗ ಜೆಡಿಎಸ್‌ಗೆ ಬಿಟ್ಟುಕೊಡುವ ತೀರ್ಮಾನ ಕಾಂಗ್ರೆಸ್‌ ಬುಡ ಅಲ್ಲಾಡಿಸುತ್ತಾ ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ. ಜೆಡಿಎಸ್‌ ವಿರುದ್ಧ ಕಳೆದ ಚುನಾವಣೆಗಳಲ್ಲಿ ಹೋರಾಟ ಮಾಡಿ ಪೊಲೀಸ್‌ ಠಾಣೆ ಮೆಟ್ಟಿಲು ಏರಿದ್ದ ಘಟನೆಗಳು ಇದ್ದರೂ ಇದೀಗ ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಟ್ಟಿರುವುದರಿಂದ ಅಲ್ಲಿನ ಕಾಂಗ್ರೆಸ್‌ ಕಾರ್ಯಕರ್ತರು ದಿಕ್ಕು ತೋಚದಚಂತಾಗಿ “ಅನಾಥ’ ಭಾವ ಎದುರಿಸುವಂತಾಗಿದೆ. ಪರೋಕ್ಷವಾಗಿ ಇದು ಪಕ್ಷದ ಬೇರು ಸಡಿಲಗೊಳಿಸುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಬಿಎಸ್‌ವೈ ರಾಮುಲು ಹಣಿಯುವ ತಂತ್ರ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹಾಗೂ ಎರಡನೇ ಸಾಲಿನ ಪ್ರಭಾವಿ ನಾಯಕ ಶ್ರೀರಾಮುಲು ಅವರನ್ನು ಕಟ್ಟಿಹಾಕುವುದು ಹಾಗೂ ಮುಂದೆ ರಾಜ್ಯ ರಾಜಕೀಯದಲ್ಲಿ ಇಬ್ಬರೂ ನಾಯಕರನ್ನು ಹಣಿಯುವ ಸಲುವಾಗಿಯೇ ಕಾಂಗ್ರೆಸ್‌-ಜೆಡಿಎಸ್‌ ಜತೆಗೂಡಿ  ಈ ತಂತ್ರಗಾರಿಕೆ ಹಣಿದಿದೆ.  ಶಿವಮೊಗ್ಗದಲ್ಲಿ ಯಡಿಯೂರಪ್ಪ ಪುತ್ರ ರಾಘವೇಂದ್ರ ವಿರುದ್ಧ ಮಧು ಬಂಗಾರಪ್ಪ, ಬಳ್ಳಾರಿಯಲ್ಲಿ ಶ್ರೀರಾಮಲು ಸಹೋದರಿ ಶಾಂತಾ ವಿರುದ್ಧ ನಾಯಕ ಸಮುದಾಯದ ಪ್ರಬಲ ನಾಯಕ ವಿ.ಎಸ್‌.ಉಗ್ರಪ್ಪ ಅವರನ್ನು ಕಣಕ್ಕಿಳಿಸಲಾಗಿದೆ. ಉಪ ಚುನಾವಣೆಯಲ್ಲಿ ಐದೂ ಕ್ಷೇತ್ರ ಗೆದ್ದು ಸಮ್ಮಿಶ್ರ ಸರ್ಕಾರ ಗಟ್ಟಿಗೊಳಿಸಿಕೊಳ್ಳುವುದು ಜತೆಗೆ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಗೂ ಬಾಧಕವಾಗದಂತೆ ನೋಡಿಕೊಳ್ಳುವುದು ಇದರ ಹಿಂದಿದೆ.  ಈ ಎಲ್ಲ ಕಾರ್ಯತಂತ್ರದ ರೂವಾರಿಗಳು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next