Advertisement

ಪಾಲಿಕೆ 32ನೇ ವಾರ್ಡ್‌ಗೆ ಉಪ ಚುನಾವಣೆ

01:21 PM Jun 17, 2017 | Team Udayavani |

ಮೈಸೂರು: ಮಹಾ ನಗರಪಾಲಿಕೆಯ 32ನೇ ವಾರ್ಡ್‌ ಉಪಚುನಾವಣೆಗೆ ವೇದಿಕೆ ಸಿದ್ಧವಾಗಿರುವ ಬೆನ್ನಲ್ಲೆ ಮೂರು ಪಕ್ಷಗಳಲ್ಲಿ ಬಿರುಸಿನ ರಾಜಕೀಯ ಚಟುವಟಿಕೆಗಳು ಆರಂಭಗೊಂಡಿದ್ದು, ಸೂಕ್ತ ಅಭ್ಯರ್ಥಿಗಳ ಆಯ್ಕೆಗಾಗಿ ಅಂತಿಮ ಹಂತದ ಕಸರತ್ತು ಶುರುವಾಗಿದೆ.

Advertisement

ಈ ಹಿಂದೆ 32ನೇ ವಾರ್ಡ್‌ ಸದಸ್ಯರಾಗಿದ್ದ ಸಿ.ಮಹದೇಶ್‌(ಅವ್ವಾ ಮಾದೇಶ್‌) ಜೆಡಿಎಸ್‌ನಿಂದ 2008 ಹಾಗೂ 2013ರಲ್ಲಿ ಸತತ 2 ಬಾರಿ ಆಯ್ಕೆಯಾಗಿದ್ದರು. ಆದರೆ ಹುಣಸೂರಿನಲ್ಲಿ ನಡೆದ ಜೋಡಿ ಕೊಲೆ ಪ್ರಕರಣದಲ್ಲಿ ಮಹದೇಶ್‌ ಹಾಗೂ ಆತನ ಸಹಚರರಿಗೆ 2016ರ ಫೆ.26ರಂದು ಜೀವಾವಧಿ ಶಿಕ್ಷೆ ಪ್ರಕಟವಾಗಿದ್ದ ಹಿನ್ನೆಲೆ ಸದಸ್ಯ ಸ್ಥಾನ ವಜಾಗೊಂಡು ಈ ಸ್ಥಾನ ತೆರವಾಗಿತ್ತು.

ಹೀಗಾಗಿ ಹಲವು ದಿನಗಳ ಹಿಂದೆಯೇ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕಿತ್ತಾದರೂ ಕೆಲ ತಾಂತ್ರಿಕ ಕಾರಣಗಳಿಂದ ಇದು ಸಾಧ್ಯವಾಗಿರಲಿಲ್ಲ. ಆದರೆ, ಇದೀಗ 32ನೇ ವಾರ್ಡ್‌ಗೆ ಉಪಚುನಾವಣೆ ಪ್ರಕಟಗೊಂಡಿದ್ದು, ಜು. 2 ರಂದು ಮತದಾನ ನಡೆಯಲಿದೆ ಹಾಗೂ ಜು.5ರಂದು ಮತ ಎಣಿಕೆ ನಡೆಯಲಿದೆ.

ಟಿಕೆಟ್‌ ಆಕಾಂಕ್ಷಿಗಳ ಪಟ್ಟಿ: ಚುನಾವಣೆಗೆ ಸ್ಪರ್ಧಿಸಲು ಮೂರು ರಾಜಕೀಯ ಪಕ್ಷಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಒಂದೆಡೆ ಟಿಕೆಟ್‌ ಆಕಾಂಕ್ಷಿಗಳು ಟಿಕೆಟ್‌ ಪಡೆಯಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದರೆ, ಇನ್ನೊಂದೆಡೆ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಮುಖಂಡರುಗಳು ಸಭೆ ನಡೆಸಿ ಅಂತಿಮ ತೀರ್ಮಾನಕೈಗೊಳ್ಳಲಿದ್ದಾರೆ. ಈಗಾಗಲೇ ಉಪಚುನಾವಣಾ ವೇಳಾಪಟ್ಟಿ ಪಕಟವಾಗಿರುವ ಹಿನ್ನೆಲೆ ಮೂರು ಪಕ್ಷಗಳು ಮುಂದಿನ 2-3 ದಿನದಲ್ಲಿ ತಮ್ಮ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದಾರೆ.

ಜೆಡಿಎಸ್‌: ಉಪಚುನಾವಣೆಗೆ ಸ್ಪರ್ಧಿಸಲು ಜೆಡಿಎಸ್‌ನಲ್ಲಿ ಹೆಚ್ಚಿನ ಆಕಾಂಕ್ಷಿಗಳಿದ್ದು ಇವರಲ್ಲಿ ಜೆಡಿಎಸ್‌ ನಗರ ಪ್ರಧಾನ ಕಾರ್ಯದರ್ಶಿ ಎಸ್‌ಬಿಎಂ ಮಂಜು ಪ್ರಮುಖರಾಗಿದ್ದು, ಇವರೊಂದಿಗೆ ಜೆಡಿಎಸ್‌ ಕಾರ್ಯಕರ್ತರಾದ ಗುರುರಾಜ್‌, ಮಂಜು ಸೇರಿದಂತೆ ಇನ್ನಿತರರು ಸಹ ಟಿಕೆಟ್‌ ಪಡೆಯುವ ತವಕದಲ್ಲಿದ್ದಾರೆ. ಆಕಾಂಕ್ಷಿಗಳಿಂದ ಅರ್ಜಿ ಪಡೆದು ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುವುದು ಎಂದು ಜೆಡಿಎಸ್‌ ನಗರಾಧ್ಯಕ್ಷ ಕೆ.ಹರೀಶ್‌ಗೌಡ ತಿಳಿಸಿದರು.

Advertisement

ಕಾಂಗ್ರೆಸ್‌: ಆಡಳಿತಾರೂಢ ಕಾಂಗ್ರೆಸ್‌ನಲ್ಲೂ ಉಪಚುನಾವಣೆಗೆ ಸ್ಪರ್ಧಿಸಲು ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗಿದೆ. ಮುಖ್ಯವಾಗಿ 32ನೇ ವಾರ್ಡ್‌ ವ್ಯಾಪ್ತಿಯಲ್ಲಿರುವ ಪ್ರಬಲ ಆಕಾಂಕ್ಷಿಗಳು ಸೇರಿದಂತೆ ಒಟ್ಟು 7-8 ಮಂದಿ ಟಿಕೆಟ್‌ ಪಡೆಯುವ ಉತ್ಸಾಹದಲ್ಲಿದ್ದಾರೆ. ಆದರೆ ಇವರಲ್ಲಿ ಯಾರಿಗೆ ಟಿಕೆಟ್‌ ನೀಡಬೇಕೆಂಬ ಬಗ್ಗೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಮಾಜಿ ಮೇಯರ್‌ಗಳು ಹಾಗೂ ಪ್ರಮುಖರೊಂದಿಗೆ ಚರ್ಚಿಸಿ ಅವರ ಅಭಿಪ್ರಾಯ ಸಂಗ್ರಹಿಸಿ ಟಿಕೆಟ್‌ ನೀಡಲಾಗುವುದು ಎಂದು ಕಾಂಗ್ರೆಸ್‌ ನಗರಾಧ್ಯಕ್ಷ ಆರ್‌.ಮೂರ್ತಿ ಹೇಳಿದರು.

ಬಿಜೆಪಿ: ಉಪಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಲ್ಲಿ 11 ಮಂದಿ ಆಕಾಂಕ್ಷಿಗಳಿದ್ದು, ಮುಖ್ಯವಾಗಿ ಬಾಲಸುಬ್ರಹ್ಮಣ್ಯಂ, ಕರವೇ ಜಿಲ್ಲಾಧ್ಯಕ್ಷ ಕೆ.ಮಾದೇಶ್‌, ಪ್ರೇಮ್‌ಕುಮಾರ್‌, ಮಾದೇವ್‌ ಪ್ರಮುಖರಾಗಿದ್ದಾರೆ. ಇವರಲ್ಲಿ ಬಾಲಸುಬ್ರಹ್ಮಣ್ಯಂ ಅವರು ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡಿದ್ದರು. ಹೀಗಾಗಿ ಈ ಬಾರಿ ಕೆ.ಮಾದೇಶ್‌ ಅಥವಾ ಪೇಮ್‌ಕುಮಾರ್‌ಗೆ ಟಿಕೆಟ್‌ ನೀಡುವ ಸಾಧ್ಯತೆ ಹೆಚ್ಚಾಗಿದೆ. ಆದರೆ ಇರುವ ಟಿಕೆಟ್‌ ಆಕಾಂಕ್ಷಿಗಳಲ್ಲಿ ಯಾರಿಗೆ ಟಿಕೆಟ್‌ ನೀಡಬೇಕೆಂಬುದು ಜೂ.17ರಂದು ಅಂತಿಮಗೊಳಿಸಲಾಗುವುದು ಎಂದು ಬಿಜೆಪಿ ನಗರಾಧ್ಯಕ್ಷ ಡಾ.ಬಿ.ಎಚ್‌.ಮಂಜುನಾಥ್‌ ಮಾಹಿತಿ ನೀಡಿದರು.

ಮೂವರಿಗೂ ಪ್ರತಿಷ್ಠೆ: ಜು.2ರಂದು ನಡೆಯಲಿರುವ 32ನೇ ವಾರ್ಡ್‌ ಉಪ ಚುನಾವಣೆ ಬಿಜೆಪಿ, ಜೆಡಿಎಸ್‌ ಹಾಗೂ ಕಾಂಗ್ರೆಸ್‌ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಅಲ್ಲದೆ 2018ರ ವಿಧಾನಸಭೆ ಚುನಾವಣೆ ಹಿನ್ನೆಲೆ ಮೂರೂ ಪಕ್ಷಗಳಿಗೆ ಈ ಉಪಚುನಾವಣೆ ಅತ್ಯಂತ ಮುಖ್ಯವಾಗಿದ್ದು, ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿವೆ.  ನಗರಪಾಲಿಕೆ ಅಧಿಕಾರದ ಅವಧಿ ಮುಂದಿನ 1 ವರ್ಷ 4 ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಹೀಗಾಗಿ ಉಪಚುನಾವಣೆಗೆ ಟಿಕೆಟ್‌ ಪಡೆಯುವ ತವಕದಲ್ಲಿರುವ ಟಿಕೆಟ್‌ ಆಕಾಂಕ್ಷಿಗಳು ಮುಂದಿನ ಚುನಾವಣೆಗೆ ಸ್ಥಾನ ¸‌ದ್ರಪಡಿಸಿಕೊಳ್ಳಲು ಲಾಬಿ ನಡೆಸುತ್ತಿದ್ದಾರೆ.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರು, ಮಾಜಿ ಮೇಯರ್‌ಗಳು ಹಾಗೂ ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗುವುದು. 2-3 ದಿನದಲ್ಲಿ ಯಾರಿಗೆ ಟಿಕೆಟ್‌ ನೀಡಬೇಕೆಂಬುದನ್ನು ನಿರ್ಧರಿಸಿ ಪಕ್ಷದ ವರಿಷ್ಠರಿಗೆ ತಿಳಿಸಲಾಗುವುದು.
-ಆರ್‌.ಮೂರ್ತಿ, ಕಾಂಗ್ರೆಸ್‌ ನಗರಾಧ್ಯಕ್ಷ

ಟಿಕೆಟ್‌ ಆಕಾಂಕ್ಷಿಗಳಿಗೆ ಅರ್ಜಿ ಸಲ್ಲಿಸುವಂತೆ ತಿಳಿಸಲಾಗಿದ್ದು, ಅವರ ಅರ್ಜಿಗಳನ್ನು ಪಡೆದು ಪಕ್ಷದ ವರಿಷ್ಠರು ಹಾಗೂ ಮುಖಂಡರೊಂದಿಗೆ ಚರ್ಚಿಸಿ ಅ¸‌Âರ್ಥಿಯನ್ನು ಅಂತಿಮಗೊಳಿಸಲಾಗುವುದು.
-ಕೆ.ಹರೀಶ್‌ಗೌಡ, ಜೆಡಿಎಸ್‌ ನಗರಾಧ್ಯಕ್ಷ

ಉಪಚುನಾವಣೆಗೆ ಸ್ಪರ್ಧಿಸಲು 11 ಮಂದಿ ಆಕಾಂಕ್ಷಿಗಳಿದ್ದಾರೆ. ಯಾರಿಗೆ ಟಿಕೆಟ್‌ ನೀಡಬೇಕು ಎಂಬುದನ್ನು 2 ದಿನದಲ್ಲಿ ತೀರ್ಮಾನಿಸಿ ಅಭ್ಯರ್ಥಿ ಹೆಸರನ್ನು ಪ್ರಕಟಿಸಲಾಗುವುದು.
-ಡಾ.ಬಿ.ಎಚ್‌.ಮಂಜುನಾಥ್‌, ಬಿಜೆಪಿ ನಗರಾಧ್ಯಕ್ಷ

* ದಿನೇಶ್‌ ಸಿ.

Advertisement

Udayavani is now on Telegram. Click here to join our channel and stay updated with the latest news.

Next