ಮಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ನಡೆಯುತ್ತಿದ್ದು, ಚುನಾವಣೆ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗ ವ್ಯಾಪಕ ಕ್ರಮ ಕೈಗೊಂಡಿದೆ. ಈ ನಿಟ್ಟಿನಲ್ಲಿ, ಕರ್ತವ್ಯಲೋಪ ಎಸಗುವ ಚುನಾವಣಾ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ದ.ಕ. ಜಿಲ್ಲಾಧಿಕಾರಿ ಮುಂದಾಗಿರುವ ಘಟನೆ ನಡೆದಿದೆ.
ಮೂಡಬಿದಿರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಡುವ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ಸ್ಥಳಗಳಲ್ಲಿ ಅಳವಡಿಸಿರುವ ಬ್ಯಾನರ್‌ಗಳು ಹಾಗೂ ಬಂಟಿಂಗ್‌ಗಳನ್ನು ತೆರವುಗೊಳಿಸದೇ ಇರುವ ಹಿನ್ನೆಲೆಯಲ್ಲಿ ಮೂಡಬಿದಿರೆ ಚುನಾವಣಾಧಿಕಾರಿಗೆ ದ.ಕ. ಜಿಲ್ಲಾಧಿಕಾರಿ ಅವರು ಕಾರಣ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.
“ಮಾ. 27ರಿಂದ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದೆ. ಅದರಂತೆ ಸಾರ್ವಜನಿಕ/ಖಾಸಗಿ ಸ್ಥಳಗಳಲ್ಲಿ ಹಾಗೂ ವಾಹನಗಳಲ್ಲಿ ಅಳವಡಿಸಿರುವ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಬ್ಯಾನರ್, ಫ್ಲೆಕ್ಸ್, ಪೋಸ್ಟರ್ ಇತ್ಯಾದಿಗಳನ್ನು ಮಾದರಿ ನೀತಿ ಸಂಹಿತೆ ಘೋಷಣೆಯಾದ 24 ಗಂಟೆಗಳೊಳಗೆ ತೆರವುಗೊಳಿಸುವ ಬಗ್ಗೆ ಸೂಚನೆ ನೀಡಲಾಗಿತ್ತು. ಆದರೆ ಮೂಡಬಿದಿರೆ ವ್ಯಾಪ್ತಿಗೆ ಒಳಪಡುವ ಸ್ಥಳಗಳಲ್ಲಿ ಹಾಗೂ ವಾಹನಗಳಲ್ಲಿ ಅಳವಡಿಸಿರುವ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಬ್ಯಾನರ್‌ಗಳು, ಪೋಸ್ಟರ್‌ಗಳನ್ನು ತೆರವುಗೊಳಿಸದೆ ಇರುವುದು ಕಂಡುಬಂದಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೆ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಆದ್ದರಿಂದ ತಮ್ಮ ವಿರುದ್ಧ ಕಾನೂನು ಕ್ರಮವನ್ನು ಯಾಕೆ ಕೈಗೊಳ್ಳಬಾರದು ಎಂಬ ಕುರಿತು ಕಾರಣ ಕೇಳಿ ಎ. 8ರಂದು ದ.ಕ. ಜಿಲ್ಲಾಧಿಕಾರಿಯವರು ಮೂಡಬಿದಿರೆ ಚುನಾವಣಾಧಿಕಾರಿಯವರಿಗೆ ನೋಟಿಸ್ ನೀಡಿದ್ದಾರೆ.