Advertisement

ಜಿಲ್ಲಾಧಿಕಾರಿ ಸಭೆ; ದಲಿತರ ಆಕ್ರೋಶ,ಸಭೆ ಬಹಿಷ್ಕರಿಸಿ ಹೊರನಡೆದ ಡಿಸಿ

07:05 AM Aug 03, 2017 | Team Udayavani |

ಮಂಗಳೂರು: ದಲಿತರಿಗೆ ಮೀಸಲಾಗಿರುವ ಡಿಸಿ ಮನ್ನಾ ಭೂಮಿಯನ್ನು ದಲಿತರಿಗೆ ಹಂಚಿಕೆ ಮಾಡದೆ ಜಿಲ್ಲಾಧಿಕಾರಿ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ದಲಿತ ಸಂಘಟನೆಯ ಮುಖಂಡರು ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ಇದರಿಂದ ಆಕ್ರೋಶಿತರಾದ ಜಿಲ್ಲಾಧಿಕಾರಿ ಡಾ| ಜಗದೀಶ್‌ ಅವರು ಸಭೆಯನ್ನು ಬಹಿಷ್ಕರಿಸಿ ಹೊರನಡೆದರು.

Advertisement

ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅವರ ಕಚೇರಿ ಸಭಾಂಗಣದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳ ಕುಂದುಕೊರತೆ ಸಭೆ ನಡೆಯಿತು. ಡಿಸಿ ಮನ್ನಾ ಜಾಗವನ್ನು ದಲಿತರಿಗೆ ಹಂಚಿಕೆ ಮಾಡುವಂತೆ ಆಗ್ರಹ ವ್ಯಕ್ತವಾದಾಗ ಸ್ಪಷ್ಟನೆ ನೀಡಿದ ಜಿಲ್ಲಾಧಿಕಾರಿಯವರು, ಡಿಸಿ ಮನ್ನಾ ಭೂಮಿ ಬಗ್ಗೆ ಸರಕಾರ‌ದ ಮಟ್ಟದಲ್ಲಿ ಸ್ಪಷ್ಟ ಮಾರ್ಗಸೂಚಿ ಇಲ್ಲ. ಈ ಬಗ್ಗೆ ಸ್ಪಷ್ಟ ಆದೇಶ ನೀಡುವಂತೆ ಸರಕಾರ‌ಕ್ಕೆ ಬರೆಯಲಾಗಿದೆ ಎಂದರು. 

ಇದರಿಂದ ಆಕ್ರೋಶಗೊಂಡ‌ ದಲಿತ ಮುಖಂಡರು ಏರು ದನಿಯಲ್ಲಿ ಮಾತನಾಡಿ, ಜಿಲ್ಲಾ ಧಿಕಾರಿ ದಲಿತರನ್ನು ನಿರ್ಲಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದರು. ಬೆಳ್ತಂಗಡಿಯ ದಲಿತ ಸಂಘರ್ಷ ಸಮಿತಿ ಮುಖಂಡ ಚಂದು ಮಾತನಾಡಿ, ಬ್ರಿಟಿಷ್‌ ಸರಕಾರ‌ದಲ್ಲೇ ಡಿಸಿ ಮನ್ನಾ ಭೂಮಿ ಕಾದಿರಿಸಿದ ಬಗ್ಗೆ ದಾಖಲೆ ಇದೆ. ಆದರೆ ಕಳೆದ ಮೂರು ದಶಕಗಳಿಂದ ನಾವು ಹೋರಾಟ ಮಾಡುತ್ತಿದ್ದರೂ ನಮ್ಮ ಜಿಲ್ಲೆಯ ದಲಿತರಿಗೆ ಈ ಭೂಮಿಯನ್ನು ಹಂಚಿಕೆ ಮಾಡದೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಆರೋಪಿಸಿದರು.

ಸಮಸ್ಯೆಯನ್ನು ಜಿಲ್ಲಾ ಧಿಕಾರಿಯೇ ಖುದ್ದು ಬಗೆಹರಿಸಬೇಕು. ಸರಕಾರ‌ಕ್ಕೆ ಬರೆಯುತ್ತೇನೆ ಎನ್ನುವುದರಿಂದ ನ್ಯಾಯ ದೊರೆಯದು ಎಂದು ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಅಸಮಾಧಾನಗೊಂಡ ಜಿಲ್ಲಾಧಿಕಾರಿ, “ಸಮಾಧಾನದಿಂದ ಸಭೆ ನಡೆಸುವುದಾದರೆ ನಾನು ಇರುತ್ತೇನೆ, ಇಲ್ಲವಾದಲ್ಲಿ ಹೊರನಡೆಯುತ್ತೇನೆ’ ಎಂದರು. ಮುಖಂಡರ ಆಕ್ರೋಶ ಮುಂದುವರಿದುದರಿಂದ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿ ಜಿಲ್ಲಾಧಿಕಾರಿ ಹೊರನಡೆದರು.

Advertisement

Udayavani is now on Telegram. Click here to join our channel and stay updated with the latest news.

Next