Advertisement

ಕುಡಿವ ನೀರಿನ ಸಮಸ್ಯೆ ಆಲಿಸಿದ ಜಿಲ್ಲಾಧಿಕಾರಿ

01:29 PM May 18, 2019 | Team Udayavani |

ಹಾವೇರಿ: ಜಿಲ್ಲೆಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಕುಡಿಯುವ ನೀರಿನ ಸಮಸ್ಯೆ ಪರಿಶೀಲಿಸಿ, ಸಾರ್ವಜನಿಕರ ಕುಂದು ಕೊರತೆ ಆಲಿಸಿದರು.

Advertisement

ತಾಲೂಕಿನ ಕೋಳೂರ, ಕರ್ಜಗಿ, ಸವಣೂರ ತಾಲೂಕಿನ ಹಿರೇಮುಗದೂರು, ಕೆ.ಬಿ. ತಿಮ್ಮಾಪುರ, ಕಡಕೋಳ, ಶಿರಬಡಗಿ ಹಾಗೂ ಸವಣೂರ ನಗರಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಪೂರೈಕೆ ಕುರಿತಂತೆ ಪರಿಶೀಲಿಸಿದರು.

ಅಧಿಕಾರಿಗಳಿಗೆ ನಿರ್ದೇಶನ : ಪ್ರತಿ ದಿನ ಹಳ್ಳಿಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಮಾಹಿತಿ ಪಡೆದು ತ್ವರಿತವಾಗಿ ಸ್ಪಂದಿಸಬೇಕು ಹಾಗೂ ಸ್ವತಃ ತಮಗೆ ಮಾಹಿತಿ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಉದ್ಯೋಗ ಖಾತ್ರಿಯಡಿ ಕೈಗೊಂಡಿರುವ ಕಡಕೋಳ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಪರಿಶೀಲನೆ ನಡೆಸಿದರು. ಇದೇ ಮಾದರಿಯಲ್ಲಿ ಮಳೆಗಾಲದಲ್ಲಿ ನೀರು ಸಂಗ್ರಹಿಸಲು ಅನುಕೂಲವಾಗುವಂತೆ ಕರೆಗಳ ಪುನಶ್ಚೇತನ, ಕೆರೆಗಳಿಗೆ ನೀರು ಹರಿದು ಬರುವ ಕಾಲುವೆಗಳ ಪುನಶ್ಚೇತನ ಕಾಮಗಾರಿ ಹೆಚ್ಚಿನ ಪ್ರಮಾಣದಲ್ಲಿ ಕೈಗೊಳ್ಳುವಂತೆ ಸ್ಥಳೀಯ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಸೂಚನೆ ನೀಡಿದರು.

ಸವಣೂರ ಮತ್ತು ಶಿರಬಡಗಿ, ಕೆ.ಬಿ.ತಿಮ್ಮಾಪುರ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಗ್ರಾಮಸ್ಥರೊಂದಿಗೆ ಕುಡಿಯುವ ನೀರಿನ ಸಮಸ್ಯೆ ಹಾಗೂ ಪೂರೈಕೆ ಕುರಿತಂತೆ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಗ್ರಾಮಸ್ಥರ ಅಹವಾಲು ಆಲಿಸಿದರು.

Advertisement

ಸವಣೂರ ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಕುಡಿಯುವ ನೀರಿನ ಪೂರೈಕೆ ಕುರಿತಂತೆ ವಿವರವಾಗಿ ಪರಿಶೀಲಿಸಿದರು. ಸ್ಥಳೀಯ ನಾಗರಿಕರಿಂದ ಮಾಹಿತಿ ಪಡೆದುಕೊಂಡರು.

ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಹರ್ಷಲ್ ನಾರಾಯಣ, ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ವಾಸಣ್ಣ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಅಭಿಯಂತರ ವಿನಾಯಕ ಹುಲ್ಲೂರ, ಹಾವೇರಿ ತಾಪಂ ಕಾರ್ಯನಿರ್ವಾಹಣಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಹಾಗೂ ವಿವಿಧ ಅಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next