Advertisement

ಅಪನಗದೀಕರಣದಿಂದ ದೇಶದ ಆರ್ಥಿಕ ಸ್ಥಿತಿ ಅಧೋಗತಿ

12:19 PM Nov 10, 2018 | Team Udayavani |

ಮೈಸೂರು: ನೋಟು ಅಮಾನ್ಯಿಕರಣಕ್ಕೆ 2ವರ್ಷದ ಹಿನ್ನೆಲೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್‌ ಸಮಿತಿ ವತಿಯಿಂದ ನಗರದ ಗಾಂಧಿಚೌಕದಲ್ಲಿ ಪತ್ರಿಭಟನೆ ನಡೆಸಲಾಯಿತು.

Advertisement

ಪತ್ರಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್‌, ಅಮೆರಿಕಾ, ಯೂರೋಪ್‌ ರಾಷ್ಟ್ರಗಳಲ್ಲಿ 150, 200 ವರ್ಷಗಳಾದರೂ ಅಲ್ಲಿನ ಸರ್ಕಾರಗಳು ನೋಟು ಅಮಾನ್ಯಿಕರಣ ಮಾಡಿಲ್ಲ. ಆದರೆ, ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೇ ನೋಟು ಅಮಾನ್ಯಿಕರಣ ಮಾಡಿದ್ದರಿಂದ ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗಿಳಿದಿದೆ ಎಂದು ದೂರಿದರು.

ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿಗೆ ನೋಟು ಅಮಾನ್ಯಿಕರಣ ಮಾಡುವ ವಿಚಾರ ತಿಳಿದಿರಲಿಲ್ಲ. ಭಾರತೀಯ ರಿಸರ್ವ್‌ ಬ್ಯಾಂಕ್‌ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ ನೋಟು ಅಮಾನ್ಯಿಕರಣಕ್ಕೆ ಶಿಫಾರಸು ಮಾಡಿದರೆ, ಕೇಂದ್ರ ಸರ್ಕಾರ ಸಚಿವ ಸಂಪುಟದಲ್ಲಿ ಆ ಬಗ್ಗೆ ಚರ್ಚಿಸಿ ತೀರ್ಮಾನ ತೆಗೆದುಕೊಂಡ ಬಳಿಕ ಅಧಿಸೂಚನೆ ಹೊರಡಿಸಬೇಕು.

ಈ ಯಾವ ಸಂವಿಧಾನಿಕ ನಡಾವಳಿಗಳನ್ನು ಪಾಲಿಸದ ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ಕತ್ತಲಲ್ಲಿಟ್ಟು ರಾತ್ರೋರಾತ್ರಿ ಘೋಷಿಸಿದ ನೋಟು ಅಮಾನ್ಯಿಕರಣದಿಂದ ದೇಶದ ಜನತೆ ಇಂದಿಗೂ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ ಎಂದರು. ಮಾಜಿ ಶಾಸಕ ಸೋಮಶೇಖರ್‌ ಮಾತನಾಡಿ,
ಪ್ರಧಾನಿ ನರೇಂದ್ರಮೋದಿ ನೋಟು ಅಮಾನ್ಯಿಕರಣದಂತಹ ಬಹುದೊಡ್ಡ ತಪ್ಪು ಮಾಡಿ ಅದನ್ನು ಮುಚ್ಚಿಕೊಳ್ಳಲು ಸುಳ್ಳುಗಳನ್ನು ಹೇಳುತ್ತಾ ಬಂದಿದ್ದಾರೆ.

ನೋಟು ಅಮಾನ್ಯಿಕರಣದಿಂದ ಕಪ್ಪುಹಣ, ಖೋಟಾ ನೋಟು ಹಾವಳಿ ನಿಯಂತ್ರಣಕ್ಕೆ ಬರಲಿದ್ದು, ದೇಶದ ಅರ್ಥ ವ್ಯವಸ್ಥೆ ಸರಿಪಡಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದರಾದರೂ ಯಾವುದೂ ಆಗಲಿಲ್ಲ. ಬದಲಿಗೆ ಡಾಲರ್‌ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಸಾಗಿದ್ದು, ಅಗತ್ಯ ವಸ್ತುಗಳ ದರ ನಿಯಂತ್ರಣಕ್ಕೆ ಬಾರದೆ ದೇಶದ ಅರ್ಥವ್ಯವಸ್ಥೆ ಅಧೋಗತಿಗಿಳಿದಿದೆ ಎಂದು ಟೀಕಿಸಿದರು.

Advertisement

ಮಾಜಿ ಸಂಸದ ವಿಜಯಶಂಕರ್‌ ಮಾತನಾಡಿ, ಪ್ರಧಾನಿ ನರೇಂದ್ರಮೋದಿಯವರ ನೋಟು ಅಮಾನ್ಯಿಕರಣದಿಂದ ದೇಶದಲ್ಲಿ ಬಡ, ಮಧ್ಯಮ ವರ್ಗದವರು ಮತ್ತು ದೇಶದ 40 ಕೋಟಿ ಕಾರ್ಮಿಕರ ಜೀವನ ದುಸ್ತರವಾಗಿದೆ. ರಾಷ್ಟ್ರದ ಜಿಡಿಪಿ ದರ ಕುಸಿತ ಉಂಟಾಯಿತು.

ಯಾವುದೇ ಮುಂಜಾಗ್ರತಾ ಕ್ರಮವಿಲ್ಲದೆ, ಆರ್ಥಿಕ ಚಿಂತನೆ ನಡೆಸದೆ ಮಾಡಿದ ನೋಟು ಅಮಾನ್ಯಿಕರಣದಿಂದ ಹಣದುಬ್ಬರಕ್ಕೆ ಕಾರಣವಾಗಿದೆ. ಬ್ಯಾಂಕುಗಳು ದಿವಾಳಿ ಅಂಚಿಗೆ ತಲುಪಿದ್ದು, ಮಹಾತ್ಮ ಗಾಂಧಿಯವರು ಉಪ್ಪಿನ ಮೇಲೆ ತೆರಿಗೆ ಹಾಕಿದ್ದಕ್ಕೆ ಸತ್ಯಾಗ್ರಹ ಮಾಡಿದ್ದರು. ಆದರೆ, ತಿನ್ನುವ ಅನ್ನಕ್ಕೂ ತೆರಿಗೆ ಹಾಕಿರುವ ಪ್ರಧಾನಿ ಮೋದಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭಿವೃದ್ಧಿ ವಿಚಾರವಾಗಿ ಮತ ಕೇಳುವ ನೈತಿಕತೆ ಇಲ್ಲ ಎಂದು ದೂರಿದರು.

ಪ್ರತಿಭಟನೆಯಲ್ಲಿ  ಮಾಜಿ ಶಾಸಕ ವಾಸು, ಕೆಪಿಸಿಸಿ ವಕ್ತಾರರಾದ ಎಚ್‌.ಎ.ವೆಂಕಟೇಶ್‌, ಎಂ.ಲಕ್ಷ್ಮಣ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್‌, ನಗರ ಕಾಂಗ್ರೆಸ್‌ ಅಧ್ಯಕ್ಷ ಆರ್‌.ಮೂರ್ತಿ, ಜಿಲ್ಲಾ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ನಂದಿನಿ ಚಂದ್ರಶೇಖರ್‌ ಮೊದಲಾದವರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next