Advertisement
ರಾಜಧಾನಿಯ ಶೇಕಡಾ ಅರ್ಧದಷ್ಟು ಮತದಾರರು ಈ ಬಾರಿಯೂ ತಮ್ಮ ಹಕ್ಕು ಚಲಾಯಿಸುವ ಕರ್ತವ್ಯವನ್ನು ತೋರಿದಂತೆ ಕಾಣಲಿಲ್ಲ. ಆಯೋಗದ ಜಾಗೃತಿ, ವ್ಯಾಪಕ ಪ್ರಚಾರದ ಜತೆಗೆ ಮತದಾನದ ಅವಧಿಯಲ್ಲಿ ಮಳೆರಾಯ ಕೂಡ ಅಡ್ಡಿಪಡಿಸದೆ ಕೃಪೆ ತೋರಿದರೂ ಜನ ಉತ್ಸಾಹದಿಂದ ಮತದಾನದಲ್ಲಿ ಪಾಲ್ಗೊಳ್ಳಲ್ಲದೆ ನಿರುತ್ಸಾಹ ಮುಂದುವರಿಸಿದ್ದು, ಶೇ.60ರಷ್ಟು ಮತದಾನ ಗಡಿ ದಾಟುವ ನಿರೀಕ್ಷೆಯೂ ಹುಸಿಯಾಯಿತು.
Related Articles
Advertisement
ಆರಂಭದಲ್ಲಿ ಭಾರಿ ಉತ್ಸಾಹ: ಗುರುವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ನಗರದ ಬಹುತೇಕ ಮತಗಟ್ಟೆಗಳ ಬಳಿ ಮತದಾರರು ಸಾಲುಗಟ್ಟಿ ನಿಲ್ಲಲಾರಂಭಿಸಿದರು. ವಾಯುವಿಹಾರಕ್ಕೆ ತೆರಳಿದವರು, ದೇವಸ್ಥಾನಕ್ಕೆ ಹೊರಟವರು, ತಮ್ಮ ಊರುಗಳತ್ತ ಮುಖ ಮಾಡಿದವರು, ಪ್ರವಾಸಕ್ಕೆ ಸಜ್ಜಾಗಿದ್ದವರು ಮತಗಟ್ಟೆಗಳತ್ತ ದೌಡಾಯಿಸಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು. ಹಾಗಾಗಿ ಬೆಳಗ್ಗೆ 7ರಿಂದ 9ರವರೆಗೆ ಬಿರುಸಿನ ಮತದಾನ ಕಂಡುಬಂತು. ಬೆಳಗ್ಗೆ 11 ಗಂಟೆವರೆಗೂ ಮತದಾರರು ಉತ್ಸಾಹದಿಂದಲೇ ತಮ್ಮ ಹಕ್ಕು ಚಲಾಯಿಸಿದರು.
ಕ್ರಮೇಣ ನೀರಸ: ಬಿಸಿಲಿನ ತಾಪ ಏರುತ್ತಿದ್ದಂತೆ ಮತಗಟ್ಟೆಗಳ ಬಳಿ ಸರತಿ ಸಾಲು ಕೂಡ ಕರಗುತ್ತಾ ಬಂದಿತು. ಮಧ್ಯಾಹ್ನ 12ರಿಂದ ಸಂಜೆ 3.30ರವರೆಗೆ ಮತದಾನ ಆಮೆಗತಿಗೆ ತಿರುಗಿತು. ಹಲವು ಮತಗಟ್ಟೆಗಳು ಕೆಲ ಹೊತ್ತು ಮತದಾರರಿಲ್ಲದೆ ಭಣಗುಡುತ್ತಿದ್ದ ದೃಶ್ಯವೂ ಕಂಡುಬಂತು. ಸಂಜೆ 4ರ ಹೊತ್ತಿಗೆ ಬಿಸಿಲಿನ ಝಳ ತಗ್ಗುತ್ತಿದ್ದಂತೆ ಮತದಾನ ಚುರುಕಾಗುವ ನಿರೀಕ್ಷೆ ಹುಟ್ಟಿಸಿತ್ತು. ಆದರೆ ಸಂಜೆ 5.30ರ ಹೊತ್ತಿಗೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದರಿಂದ ಕೊನೆಯ ಹಂತದಲ್ಲೂ ಬಿರುಸಿನ ಮತದಾನ ಕಾಣಲಿಲ್ಲ. ಹಾಗಾಗಿ ರಾಜಧಾನಿಯಲ್ಲಿ ಫಸ್ಟ್ ಕ್ಲಾಸ್ ಮತದಾನವಾಗುವ ನಿರೀಕ್ಷೆ ಈ ಬಾರಿಯೂ ಮರೀಚಿಕೆಯಾಗಿಯೇ ಉಳಿದಂತಾಯಿತು.
ಗಣ್ಯರಿಂದ ಮತದಾನ: ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಶಾ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಆರ್‌ಎಸ್‌ಎಸ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ, ಎಬಿವಿಪಿ ಕಾರ್ಯದರ್ಶಿ ಎ.ಬಿ.ರಘು ನಂದನ್, ಸಚಿವೆ ಡಾ.ಜಯಮಾಲಾ ಇತರರು ಮತದಾನ ಮಾಡಿದರು.
ಹೆಜ್ಜೆನು ದಾಳಿ, ಮತದಾನ ಸ್ಥಗಿತ: ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿ ಕಾರಹಳ್ಳಿ ಮತಗಟ್ಟೆ ಸಂಖ್ಯೆ 84 ಹಾಗೂ 85ರಲ್ಲಿ ಇದ್ದಕ್ಕಿದ್ದಂತೆ ಹೆಜ್ಜೆನು ದಾಳಿ ನಡೆಸಿದ ಪರಿಣಾಮ ಕೆಲಕಾಲ ಮತದಾನ ಸ್ಥಗಿತಗೊಳಿಸಲಾಗಿತ್ತು. ಸುಮಾರು ಸಂಜೆ 4.30ರ ಸಮಯದಲ್ಲಿ ನಂದಿಬೆಟ್ಟ ರಸ್ತೆಯ ಪಕ್ಕದಲ್ಲಿರುವ ಜೇನುಗಳು ಇದ್ದಕ್ಕಿದ್ದಂತೆ ದಾಳಿ ಮಾಡಿ ಮತದಾನಕ್ಕೆ ಸಾಲಿನಲ್ಲಿ ನಿಂತಿದ್ದ 10 ರಿಂದ 15 ಜನರಿಗೆ ಕಚ್ಚಿವೆ. ಅಲ್ಲದೇ, ಸಮೀಪದಲ್ಲಿದ್ದ ದನಕರುಗಳಿಗೂ ಕಚ್ಚಿವೆ. ಮತದಾರರು ದಿಕ್ಕಾಪಾಲಾಗಿ ಓಡಿದ್ದಾರೆ.
ಮತಗಟ್ಟೆಗಳಲ್ಲಿ ಮೊಬೈಲ್ ಓಡಾಟ ಜೋರು. ಮತಗಟ್ಟೆಯಿಂದ 100 ಮೀ. ಅಂತರದಲ್ಲಿ ಮೊಬೈಲ್ ಬಳಸಬಾರದು ಎಂಬ ಚುನಾವಣಾ ಆಯೋಗದ ಆದೇಶವಿದ್ದರೂ, ನಗರದ ಬಹುತೇಕ ಮತಗಟ್ಟೆಗಳಲ್ಲಿ ಮೊಬೈಲ್ ಆರ್ಭಟ ಜೋರಿತ್ತು. ಮತದಾನಕ್ಕೆ ಬಂದ ಮತದಾರರ ಬಳಿ ಯಾವ ಭದ್ರತಾ ಸಿಬ್ಬಂದಿಗಳು ಮೊಬೈಲ್ ಇದೆಯೋ ಇಲ್ಲವೇ ಎಂಬ ಕುರಿತು ಪರೀಕ್ಷೆ ಮಾಡಲಿಲ್ಲ. ಹೀಗಾಗಿ, ಮತಗಟ್ಟೆಗೆ ನೇರವಾಗಿ ಮೊಬೈಲ್ ಹಿಡಿದೇ ಮತದಾರರು ತೆರಳಿದರು. ಕೆಲವು ಕಡೆಗಳಲ್ಲಿ ತಾನು ಯಾವ ಅಭ್ಯರ್ಥಿಗೆ ಮತದಾನ ಮಾಡಿದ್ದೇನೆ ಎಂಬ ಕುರಿತು ಪೋಟೊ ತೆಗೆದುಕೊಂಡು ಬಂದ ಮತದಾರರು ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದು ವರದಿಯಾಗಿ¨
ಹುಡುಕಾಟ ಶ್ರಮ ತಪ್ಪಿಸಿದ “ಚುನಾವಣಾ’ ಆ್ಯಪ್ ಈ ಹಿಂದೆ ಮತಪಟ್ಟಿಯಲ್ಲಿ ಹೆಸರು ಹುಡುಕಿ ಕೊಡಲು ಎಲ್ಲಾ ತಗಟ್ಟೆಗಳ ಬಳಿ ಚುನಾವಣಾ ಅಧಿಕಾರಿಗಳು, ಸ್ವಯಂಸೇವಾ ಸಿಬ್ಬಂದಿಗಳು, ಪಕ್ಷ ಕಾರ್ಯಕರ್ತರು ಆ ಕ್ಷೇತ್ರ, ವಾರ್ಡ್‌ನ ಮತದಾರರ ದೊಡ್ಡ ಕಾಗದದ ಪಟ್ಟಿ ಹಿಡಿದು ಪರಿಶೀಲಿಸುತ್ತಿದ್ದರು.
ಈ ಪ್ರಕ್ರಿಯೆಗೆ ಸಮಯವೂ ಹಿಡಿಯುತ್ತಿತ್ತು, ಶ್ರಮವು ಹೆಚ್ಚು ಬೇಕಿತ್ತು. ಕೆಲವೊಮ್ಮೆ ಕಣ್ತಪ್ಪಿನಿಂದ ಹೆಸರು ಸಿಗದೇ ಹೋಗಿ ಸಮಸ್ಯೆಯಾಗುತ್ತಿತ್ತು. ಆದರೆ, ಈ ಬಾರಿ ಮತಗಟ್ಟೆ ಬಳಿ ಇರುವ ಸಹಾಯಕ ಸಿಬ್ಬಂದಿಗಳೆಲ್ಲರೂ “ಚುನಾವಣಾ’ ಆ್ಯಪ್ ಹಿಡಿದಿದ್ದು, ಅದರಲ್ಲಿಯೇ ಕ್ಷಣ ಮಾತ್ರದಲ್ಲಿ ಮತಪಟ್ಟಿ ತೆಗೆದು ಮತಗಟ್ಟೆ ಸಂಖ್ಯೆ, ಕ್ರಮಸಂಖ್ಯೆ, ಕೊಠಡಿ ಸಂಖ್ಯೆಯನ್ನು ಬರೆದುಕೊಡುತ್ತಿರುವುದು ನಗರದ ಎಲ್ಲಾ ಮತಗಟ್ಟೆಗಳ ಬಳಿ ಕಂಡುಬಂದಿತು.
ಹೆಸರು ನಾಪತ್ತೆ; ಸಾರ್ವಜನಿಕರ ಆರೋಪ- ಆಕ್ರೋಶ ನಗರದ ಹಲವು ಮತಗಟ್ಟೆ ವ್ಯಾಪ್ತಿಯಲ್ಲಿ ಮತದಾರರ ಹೆಸರು ನಾಪತ್ತೆಯಾದ ಆರೋಪ ಕೇಳಿಬಂತು. ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಒಂದು ಲಕ್ಷ ಹಾಗೂ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 60,000 ಮತದಾರರ ಹೆಸರನ್ನು ಡಿಲೀಟ್ ಮಾಡಲಾಗಿದೆ. ಇದರಲ್ಲಿ ಶೇ.80ರಷ್ಟು ಮತಗಳು ಬಿಜೆಪಿ ಮತಗಳಾಗಿವೆ.
ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿ ಹೆಸರುಗಳನ್ನು ಕೈಬಿಟ್ಟಿದ್ದಾರೆ ಎಂದು ಶಾಸಕ ಎಲ್.ಎ.ರವಿಸುಬ್ರಹ್ಮಣ್ಯ ಆರೋಪಿಸಿದರು. ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಕೆಎಲ್‌ಇ ಕಾಲೇಜಿನ ಮತಗಟ್ಟೆಯಲ್ಲಿ 300ಕ್ಕೂ ಹೆಚ್ಚು ಮಂದಿ ಹೆಸರು ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ ಎಂದು ಆರೋಪಿಸಿದ ಮತದಾರರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಪದ್ಮನಾಭನಗರ ಕ್ಷೇತ್ರದ ಮತಕೇಂದ್ರವೊಂದರಲ್ಲಿ 15 ಮಂದಿ ಹೆಸರು ಕೈಬಿಡಲಾಗಿದೆ ಎಂದು ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಹಲವೆಡೆ ಹೆಸರು ಕೈಬಿಡಲಾಗಿದೆ ಎಂದು ಮತದಾರರು ಮತಗಟ್ಟೆಗಳ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದು ಕಂಡುಬಂತು.
ನಿಲೇಕಣಿ ತಾಯಿ ಹೆಸರು ನಾಪತ್ತೆ ಭಾರತೀಯ ವಿಶೇಷ ಗುರುತಿನ ಪ್ರಾಧಿಕಾರ (ಆಧಾರ್) ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ತಾಯಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾನದಿಂದ ವಂಚಿತರಾಗಿದ್ದಾರೆ. ಗುರುವಾರ ಬೆಳಗ್ಗೆ ನಂದನ್ ನಿಲೇಕಣಿ ಕೋರಮಂಗಲದಲ್ಲಿ ಪತ್ನಿಯೊಂದಿಗೆ ಮತ ಚಲಾಯಿಸಿದರು. ಆದರೆ, ಜತೆಗಿದ್ದ ಅವರ ತಾಯಿಯ ಹೆಸರು ಮತದಾರರ ಪಟ್ಟಿಯಲ್ಲಿ ಬಿಟ್ಟುಹೋಗಿತ್ತು. ಆದ್ದರಿಂದ ಮತ ಹಾಕದೆ ವಾಪಸ್ ಆದರು. ಅಂದಹಾಗೆ, ನಿಲೇಕಣಿ 2014ರಲ್ಲಿ ಇದೇ ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು.
ಚುನಾವಣಾ ಆಯೋಗಕ್ಕೆ ದೂರು ಬೆಂಗಳೂರು: ಗುರುವಾರ ಮತದಾನ ನಡೆದ ಬೆಂಗಳೂರಿನ ಪದ್ಮನಾಭನಗರ, ಚಿಕ್ಕಪೇಟೆ, ಬಿಟಿಎಂ ಲೇಔಟ್, ಜಯನಗರ, ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೂರಾರು ಮತದಾರರ ಹೆಸರನ್ನು ಕೈಬಿಟ್ಟಿದ್ದು, ಇದರಲ್ಲಿ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರಿಗೆ ಬಿಜೆಪಿ ನಿಯೋಗ ಲಿಖೀತ ದೂರು ಸಲ್ಲಿಸಿದ್ದು, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮೈತ್ರಿಕೂಟ ಪಕ್ಷಗಳ ನಾಯಕರ ಒತ್ತಡ ಮೇರೆಗೆ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿಯೂ ಇದೇ ರೀತಿ ಮಾಡಲಾಗಿತ್ತು ಎಂದು ದೂರಿನಲ್ಲಿ ನಿಯೋಗ ತಿಳಿಸಿದೆ.