Advertisement

ಶಿಕ್ಷಣ ವಂಚಿತರಾಗುವ ಭಯದಲ್ಲಿ ಖಿನ್ನತೆ

10:58 PM Sep 07, 2020 | mahesh |

ಬೆಳ್ತಂಗಡಿ: ತೀವ್ರ ಬಡತನ, ದಶಕಗಳಿಂದ ಅನಾರೋಗ್ಯ ಪೀಡಿತರಾಗಿ ಮಲಗಿರುವ ತಂದೆ. ತಾಯಿ ಕೂಲಿನಾಲಿ ಮಾಡಿದರೂ ಒಪ್ಪೊತ್ತು ಊಟಕ್ಕೂ ತತ್ವಾರ. ಅಂತಹ ಬಡ ಕುಟುಂಬದ ಮಕ್ಕಳು ಶಿಕ್ಷಣ ವಂಚಿತರಾಗುವ ಭಯದಲ್ಲಿ ಖಿನ್ನತೆಗೆ ಒಳಗಾದ ಘಟನೆ ಬೆಳ್ತಂಗಡಿ ತಾಲೂಕಿನಲ್ಲಿ ಕಂಡುಬಂದಿದೆ. ಪುದುವೆಟ್ಟು ಗ್ರಾ.ಪಂ. ವ್ಯಾಪ್ತಿಯ ಮಿಯಾರು ಗ್ರಾಮದ ಕೆಮ್ಮಟೆ ಕುಂಟ್ಯಾನ ಅಲೆಪ್ಪಾಯ ಮನೆ ಪರಿಸರದಲ್ಲಿ ವಾಸವಾಗಿರುವ 2 ಬಡಕುಟುಂಬಗಳ ವಿದ್ಯಾರ್ಥಿನಿಯರ ಕಥೆಯಿದು.

Advertisement

ಅಲ್ಸರ್‌ ಬಾಧಿತ ತಂದೆ
ಪೆರು 12 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. ತಾಯಿ ಲಕ್ಷ್ಮೀ ಕುಟುಂಬವನ್ನು ಸಲಹಬೇಕಿದೆ. ಇಬ್ಬರು ಪುತ್ರಿಯರು. ಓರ್ವ ವಿದ್ಯಾರ್ಥಿನಿ (17) ಬೆಳ್ತಂಗಡಿ ಸರಕಾರಿ ಪ.ಪೂ. ಕಾಲೇಜಿನಲ್ಲಿ ಇನ್ನು ದ್ವಿತೀಯ ಪಿಯುಸಿ (ವಿಜ್ಞಾನ), ಮತ್ತೂಬ್ಬಳು ಕೆಮ್ಮಟೆ ಹಿ.ಪ್ರಾ. ಶಾಲೆ ಯಲ್ಲಿ 5ನೇ ತರಗತಿ ವಿದ್ಯಾರ್ಥಿನಿ. ವಿದ್ಯಾರ್ಥಿನಿಯು ಮರುದಾಖಲಾತಿಗೆ ಗೈರು ಹಾಜರಾದ ಕಾರಣ ಕಾಲೇಜಿನ ಪ್ರಾಂಶುಪಾಲ ಸುಕುಮಾರ ಜೈನ್‌, ಉಪನ್ಯಾಸಕರಾದ ಆನಂದ ಡಿ., ಶೀನಾ ನಾಡೋಳಿ ಹಾಗೂ ಮೋಹನ್‌ ಭಟ್‌ ಅವರು ವಾರದ ಹಿಂದೆ ಆಕೆಯ ಮನೆಗೆ ಭೇಟಿ ನೀಡಿದ್ದು ಅಲ್ಲಿನ ಪರಿಸ್ಥಿತಿ ಕಂಡು ದಂಗಾದರು. ಆ ಸಂದರ್ಭ ವಿದ್ಯಾರ್ಥಿನಿಯರು ವಿಕ್ಷಿಪ್ತವಾಗಿ ವರ್ತಿಸುವುದನ್ನು ಕಂಡ ಶಿಕ್ಷಕರು ಅದನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಸಮಾಲೋಚನೆಗೆ ಮುಂದಾದರು. ಮಾಹಿತಿ ಕಲೆಹಾಕಿದಾಗ ತಂದೆಯ ಅನಾರೋಗ್ಯ, ಆರ್ಥಿಕ ಮುಗ್ಗಟ್ಟು ಅವರ ಈ ಸ್ಥಿತಿಗೆ ಕಾರಣ ವೆಂಬುದು ಗೊತ್ತಾಯಿತು.

ಭರವಸೆಯ ಹೊಂಗಿರಣ
ಪರಿಸ್ಥಿತಿಯನ್ನು ಅವಲೋಕಿಸಿ ಸಾಂತ್ವನ ಹೇಳಿದ ಶಿಕ್ಷಕರು, ಮುಂದಿನ ಶೈಕ್ಷಣಿಕ ವರ್ಷಕ್ಕೆ ಸ್ಥಳದಲ್ಲೇ ದಾಖಲು ಮಾಡಿಕೊಳ್ಳುವುದಾಗಿ ಮಕ್ಕಳಿಗೆ ಭರವಸೆ ನೀಡಿದರು. ಮನೆಯಲ್ಲಿ ಆನ್‌ಲೈನ್‌ ಪಾಠ ಇತ್ಯಾದಿಗಳಿಗೆ ಅನುಕೂಲಗಳು ಇಲ್ಲದ್ದರಿಂದ ಕಿರಿಯ ಬಾಲಕಿಗೆ ಆಕೆಯ ಶಾಲಾ ಶಿಕ್ಷಕರ ಮೂಲಕ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳಲು ಕ್ರಮ ಕೈಗೊಳ್ಳಲಾಯಿತು. ಇದಾದ ಅನಂತರ ವಿದ್ಯಾರ್ಥಿನಿಯರ ಆಗುಹೋಗುಗಳ ಬಗ್ಗೆ ಶಿಕ್ಷಕರು ಪ್ರತಿನಿತ್ಯ ಸ್ಥಳೀಯರಿಂದ ಮಾಹಿತಿ ಕಲೆಹಾಕುತ್ತಿರುವುದಲ್ಲದೆ ದೂರವಾಣಿ ಮೂಲಕ ಧೈರ್ಯ ತುಂಬುತ್ತಿದ್ದಾರೆ. ಶಿಕ್ಷಣ ತಮ್ಮ ಪಾಲಿಗೆ ಗಗನ ಕುಸುಮವಾದೀತೆಂಬ ಭಯದಿಂದ ಖನ್ನರಾಗಿದ್ದ ವಿದ್ಯಾರ್ಥಿಗಳಲ್ಲಿ ಈಗ ಭರವಸೆ ಮೂಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಕುಟುಂಬದ ಜೀವನೋಪಾಯ ಹಾಗೂ ಮಕ್ಕಳ ಶೈಕ್ಷಣಿಕ ಭವಿಷ್ಯದ ಹಿತದೃಷ್ಟಿಯಿಂದ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಸರಕಾರದ ಸೂಕ್ತ ಸಹಾಯದ ಆವಶ್ಯಕತೆ ಇದೆ.

ಮನೆ, ಕುಟುಂಬದ ಸ್ಥಿತಿಯಿಂದ ಮಕ್ಕಳು ಖನ್ನತೆಗೆ ಒಳಗಾಗಿರಬಹುದು. ಈ ಕುರಿತು ಸಂಬಂಧಪಟ್ಟ ಶಾಲಾ ಪ್ರಾಂಶುಪಾಲರ ಬಳಿ ಚರ್ಚಿಸಿ ನಿಗದಿತ ಶುಲ್ಕ ಮಾತ್ರ ಪಡೆದು ಮಕ್ಕಳ ಶಿಕ್ಷಣಕ್ಕೆ ಪೂರಕ ಸಹಕಾರ ಒದಗಿಸಲಾಗುವುದು.
– ಮಹಮ್ಮದ್‌ ಇಮ್ತಿಯಾಝ್, ಉಪನಿರ್ದೇಶಕರು, ಪ.ಪೂ. ಶಿಕ್ಷಣ ಇಲಾಖೆ

ವಿದ್ಯಾರ್ಥಿನಿಯರ ತಾಯಿ ಕೂಲಿ ಕೆಲಸ ಮಾಡುತ್ತಿದ್ದು, ತಂದೆಯ ಅನಾರೋಗ್ಯ, ಇಬ್ಬರೂ ಹೆಣ್ಣು ಮಕ್ಕಳ ಮಾನಸಿಕ ಸಮಸ್ಯೆಯಿಂದಾಗಿ ಅದಕ್ಕೂ ಸಂಚಕಾರ ಬಂದಿದೆ. ವಿದ್ಯಾರ್ಥಿನಿಯರ ಮಾನಸಿಕ ಸಮಸ್ಯೆಗೆ ಮೂಲ ಕಾರಣ ಕಡುಬಡತನವೇ ಆಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಕಾಲೇಜು ವತಿಯಿಂದ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಆರೋಗ್ಯ ಪರಿಸ್ಥಿತಿ ವಿಚಾರಿಸಿ ಶಿಕ್ಷಕರು ಜತೆಗೂಡಿ ತಕ್ಕ ಮಟ್ಟಿಗೆ ಸಹಾಯಹಸ್ತ ನೀಡಿದ್ದೇವೆ.
– ಸುಕುಮಾರ್‌ ಜೈನ್‌, ಪ್ರಾಂಶುಪಾಲರು, ಸರಕಾರಿ ಪ.ಪೂ. ಕಾಲೇಜು ಬೆಳ್ತಂಗಡಿ

Advertisement
Advertisement

Udayavani is now on Telegram. Click here to join our channel and stay updated with the latest news.

Next