Advertisement

ಡಿಪೋ ಆಯ್ತು; ಬಸ್‌ ನಿಲ್ದಾಣವೂ ಸುಸಜ್ಜಿತವಾಗಲಿ

10:04 AM Jul 15, 2019 | Suhan S |

ಬೈಲಹೊಂಗಲ: ಪಟ್ಟಣದಲ್ಲಿ ಸುಸಜ್ಜಿತ 4 ಕೋಟಿ ರೂ. ವೆಚ್ಚದ ಕೆಎಸ್‌ಆರ್‌ಟಿಸಿ ಬಸ್‌ ಡಿಪೋ ನಿರ್ಮಾಣ ಕಾಮಗಾರಿ ಶೇ.70ರಷ್ಟು ಕಾಮಗಾರಿ ಪೂರ್ಣಗೊಳಿಸಿದೆ.

Advertisement

ಬೈಲಹೊಂಗಲ-ಬೆಂಗಳೂರು, ಉಳವಿ, ಕೊಲ್ಲಾಪುರ, ಖೀಳೆಗಾಂವ, ಯಲ್ಲಮ್ಮನಗುಡ್ಡ, ಸವದತ್ತಿ, ಕಿತ್ತೂರ, ಸೇರಿದಂತೆ ನಾನಾ ಪ್ರವಾಸಿ ತಾಣಗಳಿಗೆ ಸಾಗುವ ಪ್ರಯಾಣಿಕರಿಗೆ ನಗರಕ್ಕೆ ತೆರಳಲು ಸಂಪರ್ಕ ಕೊಂಡಿ ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣವಾಗಿದ್ದು, ದಿನಂಪ್ರತಿ ಸಾವಿರಾರು ಪ್ರಯಾಣಿಕರು ಇಲ್ಲಿಂದ ತೆರಳುತ್ತಾರೆ.

ನೂತನ ಕೆಎಸ್‌ಆರ್‌ಟಿಸಿ ಡಿಪೋ ನಿರ್ಮಾಣ ಕಾರ್ಯಕ್ಕೆ ಅಂದಿನ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 2018ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಸುಮಾರು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಿಪೋ ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದೆ. 4 ಎಕರೆ ಜಾಗದಲ್ಲಿ ನಿರ್ಮಿಸಲಾಗುತ್ತಿರುವ ಪ್ರದೇಶದಲ್ಲಿ ಆವರಣ ಗೋಡೆ ನಿರ್ಮಾಣ ಕಾರ್ಯ, ರಸ್ತೆ, ಶೆಲ್ಟರ್‌, ಸಿಬ್ಬಂದಿ ವಿಶ್ರಾಂತಿ ಗೃಹ, ಶೌಚಾಲಯ, ಸ್ನಾನ ಗೃಹ,ವಿದ್ಯುತ್‌ ಸಂಪರ್ಕ ವ್ಯವಸ್ಥೆ, ಪ್ರಯಾಣಿಕರಿಗೆ ಉತ್ತಮ ಆಸನ ವ್ಯವಸ್ಥೆ, ಒಳ ಚರಂಡಿ ಕಾರ್ಯ ಕೈಗೊಳ್ಳಲಾಗಿದ್ದು, ಗೋಡೆಗಳಿಗೆ ಆಕರ್ಷಕ ಬಣ್ಣದ ಮೂಲಕ ನಿಲ್ದಾಣಕ್ಕೆ ನವೀನ ರೂಪ ನೀಡಲಾಗುತ್ತಿದೆ. ಶೀಟ್ ಹಾಗೂ ಟೈಲ್ಸ್ ಅಳವಡಿಕೆ ಕಾರ್ಯ ನಡೆದಿದೆ ಎಂದು ನಿಗಮದ ಘಟಕ ವ್ಯವಸ್ಥಾಪಕ ಚೇತನ ಸಾಣಿಕೊಪ್ಪ ಉದಯವಾಣಿಗೆ ಮಾಹಿತಿ ನೀಡಿದರು.

ಘಟಕದ ಆದಾಯವೇಷ್ಟು?: ಬೈಲಹೊಂಗಲ ಡಿಪೋಕ್ಕೆ ಸಂಬಂಧಿಸಿದಂತೆ ಬೈಲಹೊಂಗಲ, ಕಿತ್ತೂರ, ಸವದತ್ತಿ, ಗೋಕಾಕ ತಾಲೂಕಿಗೆ ಬಸ್‌ಗಳನ್ನು ಓಡಿಸಲಾಗುತ್ತಿದೆ. ಸುಮಾರು 140 ಬಸ್‌ಗಳು ಡಿಪೋಕ್ಕೆ ಸೇರಿದ್ದು, 131 ಮಾರ್ಗಗಳ ಮೂಲಕ ಬಸ್‌ ಬಿಡಲಾಗುತ್ತಿದೆ. ಪ್ರತಿ ತಿಂಗಳು 10 ರಿಂದ 14 ಲಕ್ಷ ರೂ. ಆದಾಯವನ್ನು ಘಟಕ ಹೊಂದಿದೆ.

ಘಟಕದಿಂದ ಶಾಲಾ, ಕಾಲೇಜಿನ ವಿದ್ಯಾರ್ಥಿಗಳಿಗೆ 18 ಸಾವಿರ ಬಸ್‌ ಪಾಸ್‌ ನೀಡಲಾಗಿದೆ. 1400 ಅಂಗವಿಕಲರ ಪಾಸ್‌ ವಿತರಿಸಲಾಗಿದ್ದು, ನಾಗರಿಕರಿಗೆ ದಿನಂಪ್ರತಿ ಸಂಚರಿಸಲು ನೀಡಲಾಗುವ ರಿಯಾಯಿತಿ ಪಾಸ್‌ ವಿತರಣೆಯಿಂದ 12 ಲಕ್ಷ ರೂ. ದಿಂದ 14 ಲಕ್ಷ ರೂ. ಘಟಕಕ್ಕೆ ಆದಾಯವಿದೆ ಎಂದು ಘಟಕ ವ್ಯವಸ್ಥಾಪಕರು ತಿಳಿಸಿದರು.

Advertisement

ಬಸ್‌ ನಿಲ್ದಾಣ ಕಾಮಗಾರಿ ವಿಳಂಬ: ಇಲ್ಲಿಯ ಬಸ್‌ ನಿಲ್ದಾಣ ಬಹಳಷ್ಟು ಹಳೆಯದಾಗಿದ್ದು, 3 ಎಕರೆ ಪ್ರದೇಶದಲ್ಲಿ ಇದೇ ಸ್ಥಳದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ನೂತನ ಬಸ್‌ ನಿಲ್ದಾಣ ಕಾಮಗಾರಿ ನಡೆಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ ಹಣ ಮಂಜೂರಾಗದ ಕಾರಣ ಬಸ್‌ ನಿಲ್ದಾಣ ಕಾಮಗಾರಿ ಪ್ರಾರಂಭಗೊಂಡಿಲ್ಲ. ಸುಮಾರು 15 ಕೋಟಿ ರೂ. ನಿಲ್ದಾಣ ನಿರ್ಮಾಣಕ್ಕೆ ಸರಕಾರ ನೀಡಿದಲ್ಲಿ ಉತ್ತರ ಕರ್ನಾಟಕದಲ್ಲಿ ಮಾದರಿ ಬಸ್‌ ನಿಲ್ದಾಣವಾಗುವದರಲ್ಲಿ ಸಂಶಯವಿಲ್ಲ.

ಶೀಘ್ರ ಪೂರ್ಣಗೊಳಿಸಿ: ಈಗಾಗಲೇ ಡಿಪೋ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುತ್ತ ಬಂದಿದೆ. ಈ ಕಾಮಗಾರಿಯೊಂದಿಗೆ ಬಸ್‌ ನಿಲ್ದಾಣ ಕಾಮಗಾರಿ ಆರಂಭಿಸಿದ್ದರೆ ಎರಡೂ ಕಾಮಗಾರಿ ಬೇಗ ಮುಗಿದು ಜನರಿಗೆ ಅನುಕೂಲವಾಗುತ್ತಿತ್ತು. ಆದರೆ ಬಸ್‌ ನಿಲ್ದಾಣ ಕಾಮಗಾರಿ ಇನ್ನು ಪ್ರಾರಂಭಗೊಂಡಿಲ್ಲ. ಇದರಿಂದ ತಗ್ಗು ಗುಂಡಿಗಳು ನಿರ್ಮಾಣವಾಗಿ ನಾಗರಿಕರು, ಸವಾರರು ತೊಂದರೆ ಅನುಭವಿಸುವಂತಾಗಿದೆ. ರಭಸದ ಮಳೆಗೆ ಬಸ್‌ ನಿಲ್ದಾಣದ ಒಳಗೂ ನೀರು ಆವರಿಸುತ್ತದೆ. ಆದ್ದರಿಂದ ನಿಲ್ದಾಣ ಕಾಮಗಾರಿಯನ್ನು ಅತೀ ಶೀಘ್ರ ಪೂರ್ಣಗೊಳಿಸಿ ಶೀಘ್ರ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಸಿಬ್ಬಂದಿ ನಿಯೋಜಿಸಿ: ಇಲ್ಲಿಯ ನೂತನ ಡಿಪೋ ಬಳಿ ಕೆಲವೊಮ್ಮೆ ಖಾಸಗಿ ದ್ವಿಚಕ್ರ ವಾಹನ ನಿಲುಗಡೆ, ದನಕರುಗಳನ್ನು ಬಿಡುವುದನ್ನು ತಡೆಯಲು ಭದ್ರತಾ ಸಿಬ್ಬಂದಿ ನಿಯೋಜಿಸಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ. ಡಿಪೋ ರಸ್ತೆ ಡಾಂಬರೀಕರಣ ಮಾಡಲಾಗಿದ್ದು, ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯ ಮಾಡಿದರೆ ಸುಗಮವಾಗುತ್ತದೆ. ಬೈಲಹೊಂಗಲ ಘಟಕ ವ್ಯಾಪ್ತಿಗೆ ಕಿತ್ತೂರ ಕೂಡ ಬರುವುದರಿಂದ ಈ ಘಟಕ ಕಾರ್ಯ ವ್ಯಾಪ್ತಿ ಹೆಚ್ಚಾಗಿದೆ. ಕಿತ್ತೂರ ಘಟಕ ಪ್ರತ್ಯೇಕ ಮಾಡಬೇಕೆಂಬ ಕೂಗು ಕೇಳಿ ಬರುತ್ತಿದೆ.

 

•ಸಿ.ವೈ.ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next