ಬೆಂಗಳೂರು: ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ಅಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ ಮೇರೆಗೆ ಹೆಚ್ಚುವರಿ ಗುತ್ತಿಗೆ ಪೌರಕಾರ್ಮಿಕರಿಗೆ ನ್ಯಾಯ ಒದಗಿಸಲು ಮುಂದಾಗಿರುವ ಬಿಬಿಎಂಪಿ, 60 ವರ್ಷ ಮೇಲ್ಪಟ್ಟು ನಿವೃತ್ತರಾಗುವ ಕಾರ್ಮಿಕರ ಸ್ಥಾನಕ್ಕೆ ಹೆಚ್ಚುವರಿಯಾಗಿರುವ 3441 ಪೌರಕಾರ್ಮಿಕರನ್ನು ನಿಯೋಜಿಸಿಕೊಳ್ಳಲು ಚಿಂತನೆ ನಡೆಸಿದೆ.
ಪೌರಕಾರ್ಮಿಕರನ್ನು ಕೆಲಸದಿಂದ ತೆಗೆಯುವ ವಿಚಾರ ಸಂಬಂಧ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮೇಯರ್ ಹಾಗೂ ಉಪಮುಖ್ಯಮಂತ್ರಿಗಳು ಸಭೆ ನಡೆಸಿ, ಹೆಚ್ಚುವರಿ ಪೌರಕಾರ್ಮಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಭರವಸೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಕ್ರಮಕ್ಕೆ ಮುಂದಾಗಿರುವ ಪಾಲಿಕೆ, 60 ವರ್ಷ ಮೀರಿದ ಕೆಲಸ ಮಾಡಲು ಅಶಕ್ತರಾಗಿರುವ ಪೌರಕಾರ್ಮಿಕರ ಸ್ಥಾನಕ್ಕೆ ಹೆಚ್ಚುವರಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಕುರಿತ ಚರ್ಚೆಗಳು ನಡೆದಿವೆ.
ಇದರೊಂದಿಗೆ ದಕ್ಷಿಣ ವಲಯ ಹೊರತುಪಡಿಸಿ ಉಳಿದ 7 ವಲಯಗಳಲ್ಲಿ ಈಗಾಗಲೇ ಅಧಿಕಾರಿಗಳ ಸಭೆ ನಡೆಸಿರುವ ಮೇಯರ್ ಆರ್.ಸಂಪತ್‌ರಾಜ್, 60 ವರ್ಷ ಮೇಲ್ಪಟ್ಟ, ಪೌರಕಾರ್ಮಿಕ ವೃತ್ತಿ ಮಾಡಲು ಅಶಕ್ತರಾದವರ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜತೆಗೆ ಅವರ ಜಾಗದಲ್ಲಿ ಹೆಚ್ಚುವರಿ ಪೌರಕಾರ್ಮಿಕರನ್ನು ನೇಮಿಸಿಕೊಳ್ಳುವಂತೆಯೂ ಸೂಚಿಸಿದ್ದಾರೆ.
ಆಟೋ ಟಿಪ್ಪರ್‌ಗಳ ಆಡಿಟ್: ಪಾಲಿಕೆಗೆ ತಪ್ಪು ಮಾಹಿತಿ ನೀಡಿ ಆಟೋ ಟಿಪ್ಪರ್‌ಗಳ ಹೆಸರಿನಲ್ಲಿ ನಕಲಿ ಬಿಲ್ ಪಡೆಯುತ್ತಿರುವವರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಬಿಬಿಎಂಪಿ ಪ್ರತಿ ವಾರ್ಡ್‌ನಲ್ಲಿರುವ ಆಟೋ ಟಿಪ್ಪರ್‌ಗಳ ಆಡಿಟ್ ನಡೆಸಲು ನಿರ್ಧರಿಸಿದೆ.
ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚಿನ ಆಟೋ ಟಿಪ್ಪರ್‌ಗಳು ನಿತ್ಯ ತ್ಯಾಜ್ಯ ವಿಲೇವಾರಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿವೆ ಎನ್ನಲಾಗುತ್ತಿದೆ. ಆದರೆ, ಆ ಪೈಕಿ 500ಕ್ಕೂ ಹೆಚ್ಚಿನ ಆಟೋ ಟಿಪ್ಪರ್‌ಗಳಿಗೆ ಸುಳ್ಳು ದಾಖಲೆಗಳನ್ನು ನೀಡಿ ಬಿಲ್ ಪಡೆಯಲಾಗುತ್ತಿದೆ ಎಂಬ ದೂರುಗಳಿವೆ. ಆ ಹಿನ್ನೆಲೆಯಲ್ಲಿ ಆಟೋ ಟಿಪ್ಪರ್‌ಗಳ ಲೆಕ್ಕಪರಿಶೋಧನೆ ನಡೆಸಲು ಅಧಿಕಾರಿಗಳು ವಾರ್ಡ್ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ರಾಜರಾಜೇಶ್ವರಿನಗರದ ಜೆ.ಪಿ.ಪಾರ್ಕ್ ವಾರ್ಡ್‌ನಲ್ಲಿ ಪ್ರಾಯೋಗಿಕವಾಗಿ ಆಟೋ ಟಿಪ್ಪರ್‌ಗಳ ಲೆಕ್ಕಪರಿಶೋಧನೆ ನಡೆಸಲಾಗುವುದು. ಆನಂತರದಲ್ಲಿ ಎಲ್ಲ ವಾರ್ಡ್‌ಗಳಲ್ಲಿಯೂ ನಡೆಸಲಾಗುವುದು. ಆ ಮೂಲಕ ಆಟೋ ಟಿಪ್ಪರ್‌ಗಳ ಹೆಸರಲ್ಲಿ ನಡೆಯುತ್ತಿರುವ ಅಕ್ರಮ ಪತ್ತೆ ಮಾಡಲಾಗುವುದು.
-ಆರ್.ಸಂಪತ್‌ರಾಜ್, ಮೇಯರ್