ಚಿಕ್ಕಬಳ್ಳಾಪುರ: ಉಪ ಚುನಾವಣೆ ಫಲಿತಾಂಶ ಸೋಮವಾರ ಹೊರ ಬೀಳಲಿರುವ ಹಿನ್ನೆಲೆಯಲ್ಲಿ ಹಾಗೂ ಮತ ಎಣಿಕೆ ಕೇಂದ್ರದ ಬಳಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, 700 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ ಖರೆ ತಿಳಿಸಿದರು.
ನಗರದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸೋಮವಾರ ಮತ ಎಣಿಕೆ ನಡೆಯಲಿರುವ ಹಿನ್ನೆಲೆಯಲ್ಲಿ ಕೈಗೊಂಡಿರುವ ಭದ್ರತಾ ಕ್ರಮಗಳ ಕುರಿತು ಭಾನುವಾರ ತಮ್ಮನ್ನು ಸಂಪರ್ಕಿಸಿದ
“ಉದಯವಾಣಿ’ಯೊಂದಿಗೆ ಮಾತನಾಡಿದ ಅವರು, ಅಹಿತಕರ ಘಟನೆಗಳು ನಡೆಯದಂತೆ ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು.
ಬಂದೋಬಸ್ತ್ ಹೀಗಿದೆ: ಮತ ಎಣಿಕೆ ಕೇಂದ್ರದ ಸುತ್ತಮುತ್ತ ಹಾಗೂ ಕ್ಷೇತ್ರದಲ್ಲಿ ಈಗಾಗಲೇ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಮದ್ಯ ಮಾರಾಟ ಹಾಗೂ ಸಾಗಾಟದ ಮೇಲೆಯು ಜಿಲ್ಲಾಡಳಿತ ನಿಷೇಧ ಹೇರಿದೆ. ಮತ ಎಣಿಕೆ ಸಂದರ್ಭದಲ್ಲಿ ಭದ್ರತೆಗಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಭದ್ರತೆಗಾಗಿ 1ಎಸ್ಪಿ, 3 ಡಿವೈಎಸ್‌ಪಿ, 10 ಸಿಪಿಐ, 21 ಪಿಎಸ್‌ಐ, 8 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ 5 ಕೆಎಸ್‌ಆರ್‌ಪಿಯ ತುಕಡಿ ಜೊತೆಗೆ 1 ಬಿಎಸ್‌ಎಫ್ ಕಂಪನಿಯನ್ನು ಮತ ಎಣಿಕೆ ಕೇಂದ್ರದ ಬಳಿ ನಿಯೋಜಿಸಲಾಗಿದೆ. ಕೇಂದ್ರದೊಳಗೆ ಗುರುತಿನ ಚೀಟಿ ಇರುವವರಿಗೆ ಮಾತ್ರ ಒಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ತಡೆಗೋಡೆಗಳ ನಿರ್ಮಾಣ: ರಾಜಕೀಯ ಪಕ್ಷಗಳ ಅದರಲ್ಲೂ 9 ಮಂದಿ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿರುವ ಉಪ ಚುನಾವಣೆಯ ಫಲಿತಾಂಶ ತಿಳಿಯಲು ಕ್ಷೇತ್ರದ ಜನ ಕಾತುರದಿಂದ ಇದ್ದು, ಮತ್ತೂಂದೆಡೆ ಮತ ಎಣಿಕೆ ಕೇಂದ್ರದ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸುವ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ನಿಯಂತ್ರಿಸಲು ನಗರದ ಬಿಬಿ ರಸ್ತೆಯಲ್ಲಿ ತಡೆಗೋಡೆಗಳನ್ನು ನಿರ್ಮಿಸಿರುವ ಜಿಲ್ಲಾಡಳಿತ, ನಗರದ ಸರ್ಕಾರಿ ಪ್ರೌಢ ಶಾಲೆಯ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಿದೆ.
ಮತ ಎಣಿಕೆ ಕೇಂದ್ರದ ಹೊರಗೆ ಹಾಗೂ ಒಳಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಿರುವ ಇಲಾಖೆ ಮತ ಎಣಿಕೆ ಕೇಂದ್ರದೊಳಗೆ ಬರುವ ಪ್ರತಿಯೊಬ್ಬರನ್ನು ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆ ನಡೆಸಿಯೇ ಒಳಗೆ ಬಿಡಲು ನಿರ್ಧರಿಸಿದೆ.
ಉಪ ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿರುವ ಸರ್ಕಾರಿ ಪ್ರೌಢ ಶಾಲೆ ಸುತ್ತಮುತ್ತ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ತ್ ಹಾಕಲಾಗಿದೆ. ಸುಮಾರು 700 ಕ್ಕೂ ಹೆಚ್ಚು ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
-ಅಭಿನವರೆ ಖರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ