ಕಾಶ್ಮೀರ: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಸಂಗೀಯೋತೆ ಗ್ರಾಮದಲ್ಲಿ ಈದುಲ್ ಫಿತ್ರ ಹಬ್ಬದಾಚರಣೆ ನಡೆಯಲಿಲ್ಲ. ಇತ್ತೀಚೆಗಷ್ಟೇ ಉಗ್ರರ ದಾಳಿಯಿಂದ ಐವರು ಭಾರತೀಯ ಯೋಧರು ಮೃತಪಟ್ಟ ಹಿನ್ನೆಲೆಯಲ್ಲಿ ಶನಿವಾರ ಗ್ರಾಮಸ್ಥರು ಈ ನಿರ್ಧಾರ ಮಾಡಿದ್ದರು.
“ನಮ್ಮ ಗ್ರಾಮದಲ್ಲಿ ನಿಯೋಜಿತರಾಗಿದ್ದ ರಾಷ್ಟ್ರೀಯ ರೈಫಲ್ಸ್ ಘಟಕಕ್ಕೆ ಸೇರಿದ ಯೋಧರು ಅಸುನೀಗಿದ ಹಿನ್ನೆಲೆಯಲ್ಲಿ ಶನಿವಾರ ಈದ್ ಆಚರಿಸದೇ ಇರಲು ನಾವು ಸೇರಿ ತೀರ್ಮಾನಿಸಿದೆವು.
ಕೇವಲ ನಮಾಜ್ ಮಾತ್ರ ಮಾಡಿದೆವು. ಮೃತ ಯೋಧರ ಕುಟುಂಬಕ್ಕೆ ನಮ್ಮ ಸಂತಾಪಗಳು’ ಎಂದು ಸಂಗೀಯೋತೆ ಪಂಚಾಯತ್‌ನ ಸರಪಂಚ ಮುಖೀ¤ಯಾಜ್ ಖಾನ್ ಹೇಳಿದರು.
ಗುರುವಾರ ಸಂಜೆ 7 ಗಂಟೆಗೆ ಸಂಗೀಯೋತೆ ಗ್ರಾಮದಲ್ಲಿ ರಾಷ್ಟ್ರೀಯ ರೈಫಲ್ಸ್‌ನಿಂದ ಇಫ್ತಾರ್ ಕೂಟ ಆಯೋಜಿಸಲಾಗಿತ್ತು. ಇದಕ್ಕಾಗಿ ರಾಷ್ಟ್ರೀಯ ರೈಫಲ್ಸ್‌ನ ಪ್ರಧಾನ ಕಚೇರಿ ಬಾಲಾಕೋಟ್‌ನ ಬಸೂನಿಯಿಂದ ಹಣ್ಣುಗಳು ಸೇರಿದಂತೆ ಆಹಾರ ಸಾಮಗ್ರಿಗಳನ್ನು ಸೇನಾ ಟ್ರಕ್‌ನಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ಭಾರಿ ಮಳೆಯಿತ್ತು, ಬೆಳಕೂ ಕಡಿಮೆಯಿತ್ತು. ಮಾರ್ಗಮಧ್ಯೆ ಏಳು ಮಂದಿ ಉಗ್ರರು ಟ್ರಕ್ ಮೇಲೆ ದಾಳಿ ನಡೆಸಿದರು. ಈ ವೇಳೆ ಸ್ಥಳದಲ್ಲಿ ಐವರು ಯೋಧರು ಅಸುನೀಗಿದರು. ಒಬ್ಬ ಯೋಧನಿಗೆ ತೀವ್ರವಾಗಿ ಗಾಯಗಳಾಗಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಗ್ರರು ಸ್ಟೀಲ್ ಬುಲೆಟ್‌ಗಳನ್ನು ಬಳಸಿರುವುದು ಕಂಡುಬಂದಿದೆ.
ಉಗ್ರರ ಪತ್ತೆಗಾಗಿ ತೀವ್ರ ಶೋಧ: ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಅರೆಸೇನಾ ಪಡೆಯು ಘಟನೆ ನಡೆದ ಪ್ರದೇಶದ ಸುತ್ತಮುತ್ತ ಉಗ್ರರ ಪತ್ತೆಗಾಗಿ ತೀವ್ರ ಶೋಧ ಕಾರ್ಯಾಚರಣೆ ಕೈಗೊಂಡಿದೆ. ಶೋಧ ಕಾರ್ಯಕ್ಕಾಗಿ ಸುಮಾರು 2,000 ಕಮಾಂಡೋಗಳನ್ನು ನಿಯೋಜಿಸಲಾಗಿದೆ. ದಾಳಿಗೆ ಸಂಬಂಧಿಸಿದಂತೆ ಗುಪ್ತಚರ ದಳವು (ಐಬಿ) ಕೇಂದ್ರ ಗೃಹ ಸಚಿವಾಲಯ ಮತ್ತು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದೊಂದಿಗೆ ವರದಿಯನ್ನು ಹಂಚಿಕೊಂಡಿದೆ ಎಂದು ರಕ್ಷಣ ಮೂಲಗಳು ತಿಳಿಸಿವೆ.
ಡ್ರೋನ್‌ಗಳ ಬಳಕೆ: ಉಗ್ರರ ಪತ್ತೆಗಾಗಿ ಡ್ರೋನ್‌ಗಳು, ಕುಶಾಗ್ರ ನಾಯಿಗಳನ್ನು ಬಳಸಲಾಗುತ್ತಿದೆ. ಇಡೀ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿವೆ. ವಿಚಾರಣೆಗಾಗಿ ಇದುವರೆಗೂ 14 ಮಂದಿಯನ್ನು ಬಂಧಿಸಲಾಗಿದೆ. ಸ್ಥಳಕ್ಕೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಷ್ಟ್ರೀಯ ಭದ್ರತಾ ಪಡೆಯ (ಎನ್‌ಎಸ್‌ಜಿ) ಉನ್ನತ ಅಧಿಕಾರಿಗಳು ಭೇಟಿ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೋಧರ ಅಂತ್ಯಕ್ರಿಯೆ: ದಾಳಿಯಲ್ಲಿ ಹುತಾತ್ಮರಾದ ಪಂಜಾಬ್‌ನ ನಾಲ್ವರು ಯೋಧರಾದ ಹವಲ್ದಾರ್ ಮನ್‌ದೀಪ್ ಸಿಂಗ್, ಲ್ಯಾನ್ಸ್ ನಾಯಕ್ ಕುಲವಂತ್ ಸಿಂಗ್, ಸಿಪಾಯಿ ಹರಿಕೃಷ್ಣ ಸಿಂಗ್ ಮತ್ತು ಸಿಪಾಯಿ ಸೇವಕ್ ಸಿಂಗ್ ಹಾಗೂ ಒಡಿಶಾದ ಲ್ಯಾನ್ಸ್ ನಾಯಕ್ ದೇಬಶಿಶ್ ಬಸ್ವಾಲ್ ಅವರ ಅಂತ್ಯಕ್ರಿಯೆಯು ಸಕಲ ಮಿಲಿಟರಿ ಗೌರವಗಳೊಂದಿಗೆ ಅವರ ಹುಟ್ಟೂರಿನಲ್ಲಿ ಶನಿವಾರ ನೆರವೇರಿತು. ಪಂಜಾಬ್ ಸರಕಾರ ಮಡಿದ ಯೋಧರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದೆ.
ದೇಶದ ಎಲ್ಲ ಮುಸ್ಲಿಮರಿಗೆ ರಮ್ಜಾನ್ ಹಬ್ಬದ ಶುಭಾಶಯಗಳು. ನಮ್ಮ ಸಮಾಜದಲ್ಲಿ ಸೌಹಾರ್ದತೆ ಮತ್ತು ಸಹಾನುಭೂತಿಯ ಮನೋಭಾವ ಹೆಚ್ಚಲಿ. ಪ್ರತಿಯೊಬ್ಬರ ಆರೋಗ್ಯ ಮತ್ತು ಯೋಗ ಕ್ಷೇಮಕ್ಕಾಗಿ ನಾನು ಪ್ರಾರ್ಥಿಸುತ್ತೇನೆ.
ನರೇಂದ್ರ ಮೋದಿ, ಪ್ರಧಾನಿ