Advertisement

ಬೆಳ್ತಂಗಡಿಯ ಧುಂಬೆಟ್ಟಿಗೆ ಪರಿಣಿತರ ತಂಡ; ಕಾಡಾನೆ ಹಾವಳಿ: ಕೃಷಿಕರ ಮೊರೆಗೆ ಇಲಾಖೆ ಸ್ಪಂದನೆ

12:58 AM Mar 14, 2022 | Team Udayavani |

ಬೆಳ್ತಂಗಡಿ: ತಾಲೂಕಿನ ಹಲವೆಡೆ ಕಾಡಾನೆಗಳು ಕೃಷಿ ಚಟುವಟಿಕೆಗಳ ಮೇಲೆ ದಾಳಿ ನಡೆಸುತ್ತಿರುವ ಪರಿಣಾಮ ಶಾಶ್ವತ ಪರಿಹಾರಕ್ಕಾಗಿ ಅರಣ್ಯ ಇಲಾಖೆಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಇಲಾಖೆ ರವಿವಾರ ಆನೆಗಳನ್ನು ಕಾಡಿಗಟ್ಟುವ ಪರಿಣಿತರ ತಂಡವನ್ನು ಬೆಳ್ತಂಗಡಿಗೆ ಕಳುಹಿಸಿದೆ.

Advertisement

ಇಲ್ಲಿನ ಮುಂಡಾಜೆಯ ಧುಂಬೆಟ್ಟು ಪ್ರದೇಶದ ಸ್ಥಳೀಯರು ಹಾಗೂ ಡ್ರೋನ್‌ ಕೆಮರಾ ತಂಡ ಸೇರಿ ಸೋಮವಾರ ಕಾರ್ಯಾಚರಣೆ ಆರಂಭಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಧುಂಬೆಟ್ಟು ಪ್ರದೇಶದಲ್ಲಿ ಕಳೆದ ಹಲವು ದಿನಗಳಿಂದ ಕಾಡಾನೆಗಳು ನಿರಂತರ ದಾಳಿ ಇಡುತ್ತಿದ್ದು, ಲಕ್ಷಾಂತರ ರೂ. ಮೌಲ್ಯದ ಕೃಷಿ ಹಾನಿ ಸಂಭವಿಸಿದೆ. ಕಾಡಾನೆಗಳು ಇಲ್ಲಿನ ಮನೆಗಳ ಸುತ್ತ ಸುಳಿಯುತ್ತಿದ್ದು, ಇದರಿಂದ ಪರಿಸರದ ಜನರಲ್ಲಿ ಭೀತಿ ಉಂಟು ಮಾಡಿತ್ತು.
ಕಾಡಾನೆಗಳ ಹಾವಳಿ ತಡೆಗೆ ಕಳೆದ ಮೂರು ದಿನಗಳ ಹಿಂದೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ದಿನೇಶ್‌ ಕುಮಾರ್‌ ಅವರಿಗೆ ತಾಲೂಕಿನ ಕೃಷಿಕರು ಮನವಿ ಸಲ್ಲಿಸಿದ್ದರು. ತತ್‌ಕ್ಷಣ ಸ್ಪಂದನೆ ನೀಡಿದ ಅವರು ನಾಗರಹೊಳೆಯಿಂದ ಪರಿಣಿತ ಸಿಬಂದಿಯನ್ನು ಕರೆಸಿಕೊಂಡಿದ್ದಾರೆ.

ಡಿಎಫ್ಒ ಅವರ ತಂಡ ಕಾರ್ಗಿಲ್‌ ವನಕ್ಕೆ ಭೇಟಿ ನೀಡಿ ಆನೆ ಹಾವಳಿಯಿಂದ ಉಂಟಾದ ಹಾನಿಯ ವೀಕ್ಷಣೆಯನ್ನು ನಡೆಸಿತು. ಬೇಲಿ ನಿರ್ಮಾಣಕ್ಕೆ ಬೇಕಾಗುವ ಸಹಾಯಧನವನ್ನು ಇಲಾಖೆಯಿಂದ ನೀಡುವ ಕುರಿತು ಭರವಸೆ ನೀಡಿದರು.

ಎಸಿಎಫ್ ಸುಬ್ರಹ್ಮಣ್ಯ ರಾವ್‌, ಬಂಟ್ವಾಳ ವಲಯ ಅರಣ್ಯಾಧಿಕಾರಿ ರಾಜೇಶ್‌ ಬಳಿಗಾರ, ಬೆಳ್ತಂಗಡಿಯ ಉಪ ವಲಯ ಅರಣ್ಯಾಧಿಕಾರಿಗಳಾದ ಯತೀಂದ್ರ, ರವೀಂದ್ರ ಅಂಕಲಗಿ, ರವೀಂದ್ರ ಕೆ., ಭವಾನಿ ಶಂಕರ್‌, ಅರಣ್ಯ ರಕ್ಷಕರಾದ ಶರತ್‌ ಶೆಟ್ಟಿ, ಪಾಂಡುರಂಗ ಕಮತಿ, ಸ್ಥಳೀಯರಾದ ಸಚಿನ್‌ ಭಿಡೆ, ಕಜೆ ವೆಂಕಟೇಶ್ವರ ಭಟ್‌, ಡಾ| ಅಮಿತ್‌ ಖಾಡಿಲ್ಕರ್‌, ಶಿವಣ್ಣ ಜಯಾನಂದ, ಗಣೇಶ್‌ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

ಡ್ರೋನ್‌ ಕೆಮರಾ ಬಳಕೆ
ಉಪ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕರ ನೇತೃತ್ವದಲ್ಲಿ ಕಾರ್ಯಾಚರಣೆ ಹಗಲಿನ ಹೊತ್ತು ಮಾತ್ರ ನಡೆಯಲಿದೆ. ಕಾಡಾನೆಗಳು ಆಗಮಿಸುವ ಪರಿಸರವನ್ನು ಗುರುತು ಮಾಡಿ, ನಾಗರಹೊಳೆಯ ಪರಿಣಿತರಾದ ಹರೀಶ್‌, ವೆಂಕಟೇಶ ಹಾಗೂ ಮೋಟಪ್ಪ ಅವರು ಸ್ಥಳೀಯರ ಸಹಕಾರದಲ್ಲಿ ಇಲ್ಲಿನ ಹಾಗೂ ಸಮೀಪದ ಗ್ರಾಮಗಳ ಪರಿಸರ ಅರಣ್ಯದ ಕುರಿತು ಪರಿಶೀಲನೆ ನಡೆಸಲಿದ್ದಾರೆ. ಡ್ರೋನ್‌ ಕೆಮರಾ ಪರಿಸರದಲ್ಲಿ ಆನೆಗಳಿರುವ ಗುರುತು ಪತ್ತೆ ಮಾಡಲು ಸಹಕರಿಸಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next