ಬೆಂಗಳೂರು: ಸಾರಿಗೆ ಇಲಾಖೆಯಲ್ಲಿ ವರ್ಗಾವಣೆ ಹಾವಳಿ ತಪ್ಪಿಸಲು ಇಲಾಖೆಗೆ ಪ್ರತ್ಯೇಕ ವರ್ಗಾವಣೆ ನೀತಿ ಜಾರಿಗೆ ತರಲು ಚಿಂತನೆ ನಡೆಸಿದ್ದು, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಮಾದರಿಯಲ್ಲಿ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಆಲೋಚನೆ ನಡೆದಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
ಈ ಕುರಿತು ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಇಲಾಖೆಯಲ್ಲಿ ಬೇಕಾಬಿಟ್ಟಿಯಾಗಿ ನಡೆಯುತ್ತಿರುವ ವರ್ಗಾವಣೆ ದಂಧೆಗೆ ಕಡಿವಾಣ ಹಾಕಲು ನೂತನ ವರ್ಗಾವಣೆ ನೀತಿ ಜಾರಿಗೆ ಆಲೋಚಿಸಲಾಗಿದೆ.
ರಾಜ್ಯದಲ್ಲಿ ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಹೊರತು ಪಡೆಸಿ ಉಳಿದ ಎಲ್ಲ ಇಲಾಖೆಗಳಲ್ಲಿ ಪ್ರತಿ ವರ್ಷ ನಿಯಮಿತ ವರ್ಗಾವಣೆ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಸಾರಿಗೆ ಇಲಾಖೆಯಲ್ಲಿಯೂ ಒಟ್ಟು ಸಿಬ್ಬಂದಿಯ ಶೇ.5 ರಷ್ಟು ವರ್ಗಾವಣೆ ಮಾಡಲು ಅವಕಾಶವಿದೆ. ಆದರೆ, ವರ್ಗಾವಣೆ ಅವಧಿ ಮುಗಿದ ನಂತರವೂ ವರ್ಷವಿಡೀ ವರ್ಗಾವಣೆ ನಡೆಯುವಂತಾಗಿದೆ. ಇದರಿಂದ ಸಾರಿಗೆ ಇಲಾಖೆಯಲ್ಲಿ ನಿರ್ದಿಷ್ಟ ಕೆಲಸ ಮಾಡಲು ಸಾಧ್ಯವಾಗದಿರುವುದರಿಂದ ವರ್ಗಾವಣೆ ನೀತಿ ಜಾರಿಗೆ ಇಲಾಖೆ ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ನಿರ್ದಿಷ್ಟ ಘಟಕಗಳಿಗೆ ಬೇಡಿಕೆ: ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿ ರಾಜ್ಯದ ನಿರ್ದಿಷ್ಟ ಸಾರಿಗೆ ಘಟಕಗಳಲ್ಲಿಯೇ ಸೇವೆ ಸಲ್ಲಿಸಲು ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸುತ್ತಿರು ವುದರಿಂದ ಬೇರೆ ಘಟಕಗಳಲ್ಲಿ ಸಿಬ್ಬಂದಿ ಕೊರತೆಯುಂಟಾಗುತ್ತಿದೆ. ದಾವಣಗೆರೆ, ಶಿವಮೊಗ್ಗ, ಬೆಳಗಾವಿ, ಬಾಗಲಕೋಟೆ, ಹಾಸನ ಕೆಎಸ್‌ಆರ್‌ಟಿಸಿ ಘಟಕಗಳಿಗೆ ವರ್ಗಾವಣೆಗೆ ಬೇಡಿಕೆ ಇರುವುದರಿಂದ ಆ ಘಟಕಗಳು ನಿರ್ದಿಷ್ಠ ಸಿಬ್ಬಂದಿಗಿಂತ ಹೆಚ್ಚಿನ ಸಿಬ್ಬಂದಿ ಕೆಲಸ ಮಾಡುವಂತಾಗಿದೆ.
ಅದರ ಪರಿಣಾಮ ಕೆಲವು ಸಾರಿಗೆ ಘಟಕಗಳಲ್ಲಿ ಕೆಲಸ ಮಾಡಲು ಸಿಬ್ಬಂದಿ ಕೊರತೆ ಎದುರಿಸುವಂತಾಗಿದೆ ಎಂದರು. ಸಾರಿಗೆ ಇಲಾಖೆಯಲ್ಲಿ ಮುಖ್ಯವಾಗಿ ಅಂತರ್ ನಿಗಮ ವರ್ಗಾವಣೆ ಮಾಡುವಂತೆ ಬೇಡಿಕೆ ಹೆಚ್ಚಿದೆ. ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿನ ನಾಲ್ಕು ನಿಗಮಗಳಲ್ಲಿ ಪ್ರತ್ಯೇಕವಾಗಿ ನೇಮಕ ಮಾಡಿಕೊಳ್ಳುವುದರಿಂದ ವೇತನದಲ್ಲಿ ವ್ಯತ್ಯಾಸವಿರುತ್ತದೆ. ಬಿಎಂಟಿಸಿಯಲ್ಲಿ ಹೆಚ್ಚಿನ ಸಂಬಳಕ್ಕೆ ನೇಮಕ ಮಾಡಿಕೊಂಡಿದ್ದರೆ, ಈಶಾನ್ಯ ಕರ್ನಾಟಕ ಸಾರಿಗೆಯಲ್ಲಿ ಕಡಿಮೆ ಸಂಬಳಕ್ಕೆ ಸಿಬ್ಬಂದಿ ನೇಮಕಗೊಂಡಿರುತ್ತಾರೆ.
ಹೀಗಾಗಿ ವೇತನದಲ್ಲಿ ವ್ಯತ್ಯಾಸವಿರುವುದರಿಂದ ಅಂತರ್ ನಿಗಮ ವರ್ಗಾವಣೆ ಮಾಡುವುದು ಕಷ್ಟವಾಗಲಿದೆ. ಸಮಾನಾಂತರ ಸಂಬಳ ಹೊಂದಿರುವ ಉದ್ಯೋಗಿಗಳ ಸಹಮತದ ವರ್ಗಾವಣೆಗೆ ಬೇಡಿಕೆ ಬಂದರೆ, ಈ ಬಗ್ಗೆ ಪರಿಗಣಿಸುವ ಕುರಿತು ಆಲೋಚನೆ ನಡೆಸಲಾಗುತ್ತಿದೆ ಎಂದು ಹೇಳಿದರು. ನೂತನ ವರ್ಗಾವಣೆ ನೀತಿ ಹಾಗೂ ಕೌನ್ಸೆಲಿಂಗ್ ವ್ಯವಸ್ಥೆಯನ್ನು ಮುಂದಿನ ಸಾರ್ವತ್ರಿಕ ವರ್ಗಾವಣೆ ಹೊತ್ತಿಗೆ ಜಾರಿಗೆ ತರಲಾಗುವುದು ಎಂದರು.