ಬೀದರ: ಕಂದಾಯ/ಭೂ ದಾಖಲೆಗಾಗಿ ರೈತರು ಅಲೆದಾಡುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಜಾರಿಗೊಳಿಸಿರುವ “ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಮಾ. 12ರಂದು ಚಾಲನೆ ದೊರೆಯಲಿದ್ದು, ಜಿಲ್ಲೆಯಲ್ಲಿಯೂ ಯೋಜನೆ ಅನುಷ್ಠಾನಕ್ಕೆ ಜಿಲ್ಲಾಡಳಿತ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ಈ ಜನೋಪಯೋಗಿ ಕಾರ್ಯಕ್ರಮದಿಂದ ಕಂದಾಯ ದಾಖಲೆಗಳು ಶುಲ್ಕವಿಲ್ಲದೇ ಕೈಸೇರುವ ಜತೆಗೆ ಬೋಗಸ್ ತಡೆ ಸಾಧ್ಯವಾಗಲಿದೆ. ಕಂದಾಯ ಇಲಾಖೆ ಮೂಲಕ ನೀಡಲಾಗುವ ಪಹಣಿ, ಸರ್ವೇ ನಕ್ಷೆ , ಆದಾಯ ಮತ್ತು ಜಾತಿ ಪ್ರಮಾಣಪತ್ರ ದಾಖಲೆಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವ ಈ ಯೋಜನೆ ಆರಂಭಕ್ಕೆ ಉಸ್ತುವಾರಿ ಸಚಿವರು ಮತ್ತು ಶಾಸಕರುಗಳು ಚಾಲನೆ ನೀಡಲಿದ್ದಾರೆ.
ಆಯಾ ಗ್ರಾಮ ಮಟ್ಟದ ಲೆಕ್ಕಿಗರ ಮೂಲಕ ಫಲಾನುಭವಿಗಳಿಗೆ ತಲುಪಿಸಲು ಆಡಳಿತದಿಂದ ಪೂರಕ ಸಿದ್ಧತೆ ಕೈಗೊಳ್ಳಲಾಗಿದೆ. ರೈತರ ಹಕ್ಕು ನಿರ್ಧರಿಸುವ ಮೂಲ ಕಂದಾಯ ದಾಖಲೆಗಳಾದ ಪಹಣಿ, ಜಾತಿ-ಆದಾಯ ಪ್ರಮಾಣಪತ್ರವನ್ನು “ಇ-ಆಡಳಿತ ಇಲಾಖೆಯಿಂದ ಕುಟುಂಬವಾರು ಪಡೆದು ಮತ್ತು ಮೋಜಣಿ ತಂತ್ರಾಂಶದಿಂದ ಸರ್ವೇ ನಕ್ಷೆ (ಅಟ್ಲಾಸ್) ಮುದ್ರಿಸಿ, ಆ ದಾಖಲೆಗಳನ್ನು ಪ್ಲಾಸ್ಟಿಕ್ ಲಕೋಟೆಯಲ್ಲಿರಿಸಿ ಪ್ರತಿ ರೈತ ಕುಟುಂಬದ ಮನೆ ಬಾಗಿಲಿಗೆ ತಲುಪಿಸಲಾಗುತ್ತಿದೆ.
ಪಿಡಿಎಫ್‌ನಲ್ಲಿದ್ದ ದಾಖಲೆಗಳನ್ನು ಆಯಾ ಜಿಲ್ಲೆಯಲ್ಲಿಯೇ ಮುದ್ರಣಾಲಯಗಳಲ್ಲಿ (ಎ 4 ಅಳತೆ ಹಾಳೆಗಳಲ್ಲಿ) ಮುದ್ರಿಸಲಾಗಿದೆ. ದಾಖಲೆಗಳುಳ್ಳ ಲಕೋಟೆ ತಹಶೀಲ್ದಾರ್ ಹಂತದಲ್ಲಿ ಕುಟುಂಬ ಮತ್ತು ಗ್ರಾಮವಾರು ವಿಂಗಡಣೆ ಮಾಡಲಾಗಿದ್ದು, ಮಾ. 12ರಂದು ಗ್ರಾಮ ಲೆಕ್ಕಾ ಧಿಕಾರಿಗಳು ರೈತರಿಗೆ ವಿತರಣೆ ಮಾಡಲಿದ್ದಾರೆ. ಈ ಹಿಂದೆ ರೈತರು ಕಂದಾಯ ದಾಖಲೆ ಪಡೆಯಬೇಕಾದರೆ ಕಚೇರಿ, ನೆಮ್ಮದಿ ಕೇಂದ್ರಗಳಿಗೆ ಸುತ್ತಾಡಬೇಕಾಗಿತ್ತು. ಆದರೀಗ ಸರ್ಕಾರ ಇದನ್ನು ತಪ್ಪಿಸಿ ಕಂದಾಯ ಇಲಾಖೆಯನ್ನೇ ಅನ್ನದಾತರ ಮನೆಗೆ ಕೊಂಡೊಯ್ಯುತ್ತಿದೆ. ಇದರಿಂದ ರೈತರಲ್ಲಿ ಆಸ್ತಿ ಬಗ್ಗೆ ಜಾಗೃತಿ ಇರಲಿದೆ. ಜತೆಗೆ ಶುಲ್ಕ ಇಲ್ಲದೇ ದಾಖಲೆಗಳು ಸಿಗಲಿವೆ, ಬೋಗಸ್ ಆಗುವುದು ತಪ್ಪಲಿದೆ. ಅಷ್ಟೇ ಅಲ್ಲ ದಾಖಲೆಯಲ್ಲಿ ತಪ್ಪಾಗಿದ್ದರೆ ಅಥವಾ ಅಪ್‌ಡೆಟ್ ಅಗತ್ಯವಿದ್ದರೂ ಅವರ ಗಮನಕ್ಕೆ ಬರಲಿದೆ.
“ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಯಡಿ ಬೀದರ ಜಿಲ್ಲೆಯಲ್ಲಿ 2,13,689 ರೈತರನ್ನು ಗುರುತಿಸಲಾಗಿದ್ದು, 22526 ಪಹಣಿ, 38302 ಸರ್ವೇ ನಕ್ಷೆ , 77581 ಜಾತಿ ಪ್ರಮಾಣಪತ್ರ ಹಾಗೂ 9171 ಜಾತಿ ಪ್ರಮಾಣಪತ್ರ ದಾಖಲೆ ಪಿಡಿಎಫ್‌ನಲ್ಲಿ ಜನರೇಟ್ ಮಾಡಲಾಗಿದೆ. ಮುದ್ರಿತ ಎಲ್ಲ ದಾಖಲೆ ಲಕೋಟೆಯಲ್ಲಿರಿಸಿದ್ದು, ಈಗಾಗಲೇ ಆಯಾ ಗ್ರಾಮವಾರು ಸಮರ್ಪಕ ವಿತರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬೀದರ ಜಿಲ್ಲೆಯಲ್ಲಿ “ಕಂದಾಯ ದಾಖಲೆ ಮನೆ ಬಾಗಿಲಿಗೆ’ ಯೋಜನೆಗೆ ಮಾ. 12ರಂದು ಚಾಲನೆ ನೀಡಲಾಗುತ್ತಿದ್ದು, ಜಿಲ್ಲಾಡಳಿತದಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ರೈತರ ಹಕ್ಕು ನಿರ್ಧರಿಸುವ ಎಲ್ಲ ನಾಲ್ಕು ದಾಖಲೆ ಮುದ್ರಿಸಿ, ಲಕೋಟೆಯಲ್ಲಿರಿಸಿ ರೈತರ ಕೈಗೆ ತಲುಪಿಸಲಾಗುವುದು. ಈಗಾಗಲೇ ಆಯಾ ತಹಶೀಲ್ದಾರ್ ಹಂತದಲ್ಲಿ ಗ್ರಾಮವಾರು ಸಾಗಾಣಿಕೆ ಆಗಿದ್ದು, ಗ್ರಾಮ ಲೆಕ್ಕಿಗರು ವಿತರಣೆ ಮಾಡಲಿದ್ದಾರೆ. ಪ್ರತಿ ಗ್ರಾಮದಲ್ಲಿ 200-300 ರೈತ ಕುಟುಂಬಗಳಿವೆ. ಒಂದೇ ದಿನ ಎಲ್ಲರಿಗೂ ಮುಟ್ಟಿಸುವ ಗುರಿ ಸಾಧನೆಗೆ ಪ್ರಯತ್ನಿಸಲಾಗುವುದು.
-ಶಿವಕುಮಾರ ಶೀಲವಂತ, ಅಪರ ಜಿಲ್ಲಾಧಿಕಾರಿ, ಬೀದರ
-ಶಶಿಕಾಂತ ಬಂಬುಳಗೆ