Advertisement

ಗುತ್ತಿಗೆ ಸಿಬಂದಿಗೆ ಲೋಕೋಪಯೋಗಿ ಇಲಾಖೆ ಮೊರೆ!

09:59 PM May 15, 2019 | Team Udayavani |

ಪುತ್ತೂರು: ಲೋಕೋಪಯೋಗಿ ರಸ್ತೆಗಳನ್ನು ಸುಸ್ಥಿತಿಯಲ್ಲಿಡುವ ಮಹತ್ವದ ಜವಾಬ್ದಾರಿ ನಿರ್ವಹಿಸುತ್ತಿದ್ದ ಗ್ಯಾಂಗ್‌ಮನ್‌ ಸಿಬಂದಿ ಹುದ್ದೆಯನ್ನು ಸರಕಾರದ ಮಟ್ಟದಲ್ಲಿ ರದ್ದು ಗೊಳಿಸಿರುವುದರಿಂದ ಇಲಾಖೆ ಒಂದಷ್ಟು ಅಪಖ್ಯಾತಿ ಎದುರಿಸುತ್ತಿದೆ. ಇದನ್ನು ದೂರ ಮಾಡುವ ನಿಟ್ಟಿನಲ್ಲಿ ಇಲಾಖೆ ಗುತ್ತಿಗೆ ಸಿಬಂದಿಯ ಮೊರೆ ಹೋಗಿದೆ.

Advertisement

ಮಳೆಗಾಲ ಆರಂಭವಾದರೆ ಸಾಕು, ಹಾರೆ ಪಿಕ್ಕಾಸು ಹಿಡಿದುಕೊಂಡು ರಸ್ತೆಯ ಎರಡೂ ಭಾಗಗಳ ಚರಂಡಿಗಳನ್ನು ನಿರ್ವಹಣೆ ಮಾಡುತ್ತಿದ್ದ ಲೋಕೋಪಯೋಗಿ ಇಲಾಖೆ ಗ್ಯಾಂಗ್‌ಮನ್‌ ಸಿಬಂದಿ ಹುದ್ದೆಗೆ ಇತಿಶ್ರೀ ಹಾಡಲಾಗಿದೆ. ಇದರ ಪರಿಣಾಮ ಚರಂಡಿಗಳಲ್ಲಿ ಮಣ್ಣು ತುಂಬಿ ರಸ್ತೆಗಳಲ್ಲಿ ಹರಡುವ, ಮಳೆಗಾಲದಲ್ಲಿ ಚರಂಡಿಯಿಂದ ರಸ್ತೆಯಲ್ಲಿ ನೀರು ಹರಿಯುವ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ. ಪಿಡಬ್ಲ್ಯುಡಿ ಇಲಾಖೆಯಲ್ಲಿನ ಗ್ಯಾಂಗ್‌ಮನ್‌ಗಳು ನಿವೃತ್ತಿಯಾದ ಅನಂತರ ಆ ಹುದ್ದೆಯನ್ನೇ ರದ್ದು ಮಾಡಿರುವುದು ಇದಕ್ಕೆಲ್ಲ ಕಾರಣ.

ವಿಭಾಗದಲ್ಲಿದ್ದರು 60 ಮಂದಿ
ಮುಖ್ಯವಾಗಿ ರಸ್ತೆ ಬದಿಯ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿದುಹೋಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಪಿಡಬ್ಲ್ಯುಡಿ ಗ್ಯಾಂಗ್‌ಮನ್‌ಗಳು ನೋಡಿಕೊಳ್ಳುತ್ತಿದ್ದರು.

ರಸ್ತೆ ಹಾಳಾಗದಂತೆ ನೋಡಿಕೊಳ್ಳುತ್ತಿದ್ದ ಇವರ ಕಾಳಜಿಯಿಂದಾಗಿ ರಸ್ತೆಗಳು ಗುಣಮಟ್ಟವನ್ನೂ ಉಳಿಸಿಕೊಳ್ಳುತ್ತಿದ್ದವು. ಕೆಲವು ವರ್ಷಗಳ ಹಿಂದೆ ಪುತ್ತೂರು ಉಪವಿಭಾಗದ ಪಿಡಬ್ಲೂಡಿ ಇಲಾಖೆಯಲ್ಲಿ 60 ಗ್ಯಾಂಗ್‌ಮನ್‌ ಹುದ್ದೆಯಿತ್ತು. ಆದರೆ ಪ್ರತಿ ಗ್ಯಾಂಗ್‌ಮನ್‌ಗಳು ನಿವೃತ್ತಿಯಾದ ಅನಂತರ ಆ ಹುದ್ದೆಗೆ ಹೊಸ ನೇಮಕಗೊಳಿಸುವ ಬದಲು ಹುದ್ದೆ ಅಗತ್ಯ ಇಲ್ಲ ಎನ್ನುವಂತೆ ಹುದ್ದೆಯನ್ನೇ ಸರಕಾರ ರದ್ದು ಮಾಡಿದೆ.

ಲೋಕೋಪಯೋಗಿ ಇಲಾಖೆಯಡಿಯಲ್ಲಿ ಬರುವ ರಸ್ತೆಗಳಿಗೆ 4ರಿಂದ 5 ಗ್ಯಾಂಗ್‌ಮನ್‌ಗಳು ಅಗತ್ಯವಾಗಿದ್ದು, ಪ್ರಸ್ತುತ ಗುತ್ತಿಗೆ ಆಧಾರದಲ್ಲಿ ಚರಂಡಿಗಳನ್ನು ನಿರ್ವಹಣೆ ಮಾಡಲು ಟೆಂಡರ್‌ ಕರೆಯಲಾಗುತ್ತಿದೆ. ಅದು ಮಳೆಗಾಲ ಕಳೆದ ಅನಂತರ ಟೆಂಡರ್‌ ಕರೆಯುವುದರಿಂದ ಸಮಸ್ಯೆಯಾಗುತ್ತಿದೆ. ಚರಂಡಿ ದುರಸ್ತಿ ಕಾಮಗಾರಿ ಗುತ್ತಿಗೆದಾರರಿಗೆ ಸಮಯ ಸಿಕ್ಕಾಗ ನಡೆಸುವ ಕಾಮಗಾರಿಯಾಗಿ ಮಾರ್ಪಟ್ಟಿದೆ.

Advertisement

ಹೊರಗುತ್ತಿಗೆ
ಗ್ಯಾಂಗ್‌ಮ್ಯಾನ್‌ಗಳು ನಿವೃತ್ತಿಯಾದರೆ ಹುದ್ದೆಯೇ ರದ್ದುಗೊಳ್ಳುತ್ತಿರುವುದರಿಂದ ಹೊರಗುತ್ತಿಗೆ ಆಧಾರದಲ್ಲಿ ಚರಂಡಿಗಳನ್ನು ನಿರ್ವಹಣೆ ಮಾಡಲು ಸರಕಾರ ಟೆಂಡರ್‌ನ ಅವಕಾಶ ಕಲ್ಪಿಸುತ್ತಿದೆ. ಈಗ ಗುತ್ತಿಗೆ ಆಧಾರದಲ್ಲಿ ಗ್ಯಾಂಗ್‌ ರಚಿಸುತ್ತಿದ್ದೇವೆ. ಗುತ್ತಿಗೆ ಆಧಾರದಲ್ಲಿ ಸಿಬಂದಿ, ಪಿಕಪ್‌ ವಾಹನವನ್ನು ಬಳಸಿಕೊಂಡು ಮಳೆಗಾಲ ಆರಂಭಕ್ಕೆ ಮೊದಲು ಚರಂಡಿಗಳ ದುರಸ್ತಿ ಕಾರ್ಯ ನಡೆಸಲಾಗುವುದು.
– ಪ್ರಮೋದ್‌ ಕುಮಾರ್‌, ಎಇಇ, ಪಿಡಬ್ಲ್ಯುಡಿ, ಪುತ್ತೂರು

ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next