ಗೋಣಿಕೊಪ್ಪಲು: ಅಕ್ಟೋಬರ್ 8ರಂದು ನಡೆಯುವ ದಸರಾ ಜನೋತ್ಸವದ ಶೋಭಾಯಾತ್ರೆಯಂದು ದಶಮಂಟಪಗಳ ಸಂಚಾರಕ್ಕೆ ಅನುಕೂಲವಾಗುವಂತೆ ಹೊಂಡ ಬಿದ್ದ ರಸ್ತೆಯ ಗುಂಡಿ ಮುಚ್ಚಲು ಲೋಕೋಪಯೋಗ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಶಾಸಕ ಕೆ.ಜಿ ಬೋಪಯ್ಯ ಅವರು ಸೂಚಿಸಿದರು.
ಕಾವೇರಿ ಕಲಾವೇದಿಕೆಯಲ್ಲಿ ನಡೆದ ತಾಲ್ಲೂಕು ಅಧಿಕಾರಿಗಳ ಮಟ್ಟದ ಸಭೆಯಲ್ಲಿ ದಸರಾ ಜನೋತ್ಸವದ ಶೋಭಯಾತ್ರೆಯಂದು ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗದಂತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಪೋಲಿಸರನ್ನು ನಿಯೋಜಿಸಬೇಕು ಎಂದು ಡಿವೈಎಸ್ಪಿ ಜಯಕುಮಾರ್ ಅವರಿಗೆ ತಿಳಿಸಿದರು.
ಟ್ರಾಫಿಕ್ ಸಮಸ್ಯೆ ಎದುರಾಗದಂತೆ ವಾಹನ ಸಂಚಾರಕ್ಕೆ ಬದಲಿ ಮಾರ್ಗವನ್ನು ಅನುಸರಿಸಲು ಕ್ರಮ ಕೈಗೊಳ್ಳುವಂತೆ ಮತ್ತು ಚೆಸ್ಕಂ ಇಲಾಖೆಯವರು ವಿದ್ಯುತ್ ಸಮಸ್ಯೆ ಎದುರಾಗದಂತೆ ಹಾಗೂ ದಶಮಂಟಪಗಳ ಸಂಚಾರದ ಸಮಯದಲ್ಲಿ ವಿದ್ಯುತ್‌ನಿಂದ ಯಾವುದೇ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕೆಂದು ಚೆಸ್ಕಂ ಅಧಿಕಾರಿಗಳಿಗೆ ಸಲಹೆ ನೀಡಿದರು. ಇದರಂತೆ ಆರೋಗ್ಯ ಇಲಾಖೆ, ಅಬಕಾರಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ವ್ಯವಸ್ಥಿತವಾಗಿ ದಸರಾ ಜನೋತ್ಸವಕ್ಕೆ ಸ್ಪಂದಿಸಬೇಕು ಎಂದು ಹೇಳಿದರು.
ಈ ಸಂದರ್ಭ ಮಾತನಾಡಿದ ಡಿವೈಎಸ್ಪಿ ಜಯಕುಮಾರ್ ದಶಮಂಟಪಗಳ ಶೋಭಯಾತ್ರೆಯಂದು ಡಿಜೆ ಅಳವಡಿಸುವ ಮಂಟಪಗಳು ಶಬ್ದ ಮಾಲಿನ್ಯವಾಗದಂತೆ ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಅಳವಡಿಸಿಕೊಳ್ಳಲು ದಶಮಂಟಪ ಸಮಿತಿ ಸದಸ್ಯರನ್ನು ಮನವೊಲಿಸಬೇಕು ಎಂದು ಹೇಳಿದರು. ತಾಲೂ)ಕು ದಂಡಾಧಿಕಾರಿ ಕೆ.ಎ. ಪುರಂದರ್ ಮಾತನಾಡಿ ತಾಲ್ಲೂಕಿನ ಇಲಾಖೆಯ ಅಧಿಕಾರಿಗಳು ದಶಮಂಟಪ ಶೋಭಾಯಾತ್ರೆಯಲ್ಲಿ ಪೂರಕವಾಗಿ ಸ್ಪಂದಿಸುವಂತೆ ತಿಳಿಸಿದರು.
ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಕೆ. ಬೋಪಣ್ಣ, ರಾಜ್ಯ ಚೇಂಬರ್ ಆಫ್ ಕಾಮರ್ಸ್ ನಿರ್ದೇಶಕ ಕಾಡೇಮಾಡ ಗಿರೀಶ್ ಗಣಪತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರ ಅಧಿಕಾರಿ ದರ್ಶ, ಡಿ.ವೈ.ಎಸ್.ಪಿ ಜಯಕುಮಾರ್, ಶ್ರೀ. ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕೆ.ಜಿ. ರಾಮಕೃಷ್ಣ, ಪ್ರಾಧಾನ ಕಾರ್ಯದರ್ಶಿ ಜಿಮ್ಮ ಸುಬ್ಬಯ್ಯ ಸೇರಿದಂತೆ ದಸರಾ ಸಮಿತಿ ಪದಾಧಿಕಾರಿಗಳು ತಾಲ್ಲುಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.