Advertisement

ತೋಟಗಾರಿಕೆ ಇಲಾಖೆ ವಿಕೇಂದ್ರೀಕರಣ: ಬೈಂದೂರು, ಕಾಪು, ಹೆಬ್ರಿಗೆ ಪ್ರತ್ಯೇಕ ಕಚೇರಿ

12:44 AM Dec 22, 2022 | Team Udayavani |

ಕುಂದಾಪುರ: ಎರಡು ತಾಲೂಕುಗಳಿಗೆ ಸಂಬಂಧಪಟ್ಟಂತೆ ಕಾರ್ಯಾಚರಿಸುತ್ತಿದ್ದ ತೋಟ ಗಾರಿಕೆ ಇಲಾಖೆ ಕಚೇರಿ ಇನ್ನು ಮುಂದೆ ರಾಜ್ಯದ 57 ಹೊಸ ತಾಲೂಕುಗಳಲ್ಲಿ ಪ್ರತ್ಯೇಕವಾಗಿ ಕಾರ್ಯಾರಂಭಿಸಲಿವೆ.

Advertisement

ಹೊಸ ತಾಲೂಕುಗಳಲ್ಲಿ ಜಿ.ಪಂ. ಅಧೀನದ ಯಾವುದಾದರೂ ಬಳಕೆ ಮಾಡದ ಕಟ್ಟಡಗಳನ್ನು ಉಪಯೋಗಿಸಿಕೊಳ್ಳುವಂತೆ, ಕಟ್ಟಡ ಇಲ್ಲದಿದ್ದರೆ ಲೋಕೋಪಯೋಗಿ ಇಲಾಖೆಗೆ ಹೊಸ ಕಟ್ಟಡ ನಿರ್ಮಾ ಣಕ್ಕೆ ಅಂದಾಜು ಪ್ರಸ್ತಾವನೆ ತಯಾರಿಸಿ ಸಲ್ಲಿಸುವಂತೆಯೂ ನಿರ್ದೇಶಕರು ತಿಳಿಸಿದ್ದಾರೆ. ಇದ ರನ್ವಯ ಉಡುಪಿ ಜಿಲ್ಲೆಯಲ್ಲಿ ಬೈಂದೂರು, ಹೆಬ್ರಿ, ಕಾಪುವಿಗೆ ಪ್ರತ್ಯೇಕ ಇಲಾಖಾ ಕಚೇರಿ ದೊರೆಯಲಿದೆ.

ಹೊಸ ಹುದ್ದೆ ಅನುಮಾನ
ಅವಿಭಜಿತ ತಾಲೂಕುಗಳಿಂದ ಎಷ್ಟು ಹೋಬಳಿಗಳನ್ನು ತೆಗೆದು ಹೊಸ ತಾಲೂಕುಗಳಿಗೆ ಸೇರಿಸಲಾಗಿದೆ ಎಂಬ ಬಗ್ಗೆ ಪರಿಶೀಲಿಸಿ, ಅದೇ ಹೋಬಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಹೊಸ ತಾಲೂಕುಗಳಿಗೆ ನಿಯೋಜನೆ ಮಾಡಲಾಗುತ್ತದೆ. ಈ ಮೂಲಕ ಆಡಳಿತಾತ್ಮಕ ವೆಚ್ಚ ತಗ್ಗಿಸುವ ಯೋಚನೆ ಸರಕಾರದ್ದು. ಹೊಸ ತಾಲೂಕುಗಳಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಶ್ರೇಣಿಯ ಅಧಿಕಾರಿಗಳು ಬೇಕೇ ಬೇಡವೇ ಎಂದು ತೀರ್ಮಾನವಾಗಿಲ್ಲ. ಅಲ್ಲಿ ಕೆಲಸದ ಒತ್ತಡ ಕಡಿಮೆ ಇರುವುದರಿಂದ ಕಚೇರಿ ಅಧೀಕ್ಷಕರ ಹುದ್ದೆ ಅಗತ್ಯ ಇಲ್ಲವೆಂದು ನಿರ್ಧರಿಸಲಾಗಿದೆ. ಒಬ್ಬ ಪ್ರಥಮ ದರ್ಜೆ ಸಹಾಯಕ, 2 ದ್ವಿತೀಯ ದರ್ಜೆ ಸಹಾಯಕರು, ಇತರ ಕೆಳಹಂತದ ಹುದ್ದೆಗಳನ್ನು ಸೃಷ್ಟಿಸಿ ನೇಮಕಾತಿ ನಡೆಯಲಿದೆ.

ಸಿಬಂದಿ ಕೊರತೆ
ಈಗ ಇರುವ ಕಚೇರಿಗಳಲ್ಲೇ ಸಿಬಂದಿ ಕೊರತೆಯಿದೆ. ಇನ್ನು ಹೊಸದಾಗಿ ರಚನೆಯಾಗುವ ಕಚೇರಿಗಳಿಗೂ ಇರುವ ಸಿಬಂದಿಯನ್ನೇ ಆಚೀಚೆ ಮಾಡಿ ನಿಯೋಜನೆ ಮಾಡಲು ಇಲಾಖೆ ತೀರ್ಮಾನಿಸಿದಂತಿದೆ. ಹೊಸದಾಗಿ ಕೆಲವೇ ಹುದ್ದೆಗಳು ಸೃಷ್ಟಿಯಾಗಲಿವೆ. ಹಾಗಿರುವಾಗ ಸಿಬಂದಿ ಕೊರತೆ ನಿವಾರಣೆಯಾಗದೇ ಮತ್ತೆ ಹೊಸ ಕಚೇರಿ ತೆರೆದು ಅಲ್ಲೂ ಸಿಬಂದಿ ಕೊರತೆಯಾದರೆ ಜನರಿಂದ ಛೀಮಾರಿ ಎದುರಿಸಬೇಕಾಗುತ್ತದೆ. ಜನರಿಗೆ ಅಗತ್ಯವಿರುವ ಕೆಲಸ ಕಾರ್ಯಗಳು ಇಲಾಖೆಯಲ್ಲಿ ಆಗುವುದಿಲ್ಲ ಎನ್ನುವ ಅಪವಾದ ಎದುರಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆ ಗಮನಹರಿಸಬೇಕಿದೆ.

ಬೇಡಿಕೆ
ಹೊಸದಾಗಿ ರಚನೆಯಾದ ತಾಲೂಕುಗಳಿಂದ, ಶಾಸಕರಿಂದ, ಹೋರಾಟಗಾರರಿಂದ, ರೈತರಿಂದ, ಸಂಘಟನೆಗಳಿಂದ ಪ್ರತ್ಯೇಕ ಕಚೇರಿ ರಚನೆಗೆ ಅನೇಕ ಸಮಯದಿಂದ ಬೇಡಿಕೆ ಇತ್ತು. ತಾಲೂಕು ರಚನೆಯಾಗಿ ಇಷ್ಟು ವರ್ಷಗಳ ಅನಂತರ ಇಲಾಖೆ ಕಚೇರಿ ವಿಭಾಗಿಸಲು ಹೊರಟಿದೆ.

Advertisement

ಒಂದೇ ಕಚೇರಿ, ಅನುದಾನ
ಈವರೆಗೆ ಅವಿಭಜಿತ ತಾಲೂಕುಗಳಲ್ಲಿ ಒಂದೇ ಕಚೇರಿಯಿದ್ದು ಸಿಬಂದಿಗೆ ನಿರ್ವಹಣೆ ಹೊರೆಯಾಗುತ್ತಿತ್ತು. ಅದಕ್ಕಿಂತ ಹೆಚ್ಚು ಗಮನಿಸಬೇಕಾದ ಅಂಶ ಎಂದರೆ ಎರಡು ತಾಲೂಕಿಗೆ ಪ್ರತ್ಯೇಕ ಅನುದಾನ ಬರುತ್ತಿರಲಿಲ್ಲ. ಇದರಿಂದ ಫ‌ಲಾನುಭವಿಗಳಿಗೆ ಹಂಚುವುದು ಕಷ್ಟವಾಗುತ್ತಿತ್ತು. ಫ‌ಲಾನುಭವಿಗಳ ಆಯ್ಕೆ, ಅನುದಾನ ವಿಂಗಡನೆ ಇತ್ಯಾದಿಗಳನ್ನು ಸಮಾನವಾಗಿ ಮಾಡಬೇಕಿತ್ತು. ಈ ಎಲ್ಲ ಕಷ್ಟ ಇನ್ನು ದೂರವಾಗಲಿದೆ.

ಕಟ್ಟಡ ಹುಡುಕಲು ಸೂಚನೆ
ಹೊಸದಾಗಿ ರಚನೆಯಾದ ತಾಲೂಕುಗಳಲ್ಲಿ ಪ್ರತ್ಯೇಕ ಕಚೇರಿ ನಿರ್ಮಿಸಲು ಕಟ್ಟಡ ಹುಡುಕಲು ಇಲಾಖೆಯಿಂದ ಸೂಚನೆ ಬಂದಿದೆ. ಅದರಂತೆ ಕಾರ್ಯನಿರ್ವಹಿಸಲಾಗುತ್ತಿದೆ.
  - ನಿಧೀಶ್‌ ಹೊಳ್ಳ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು, ಕುಂದಾಪುರ

ದ.ಕ. ಜಿಲ್ಲೆಯ ಕಡಬ, ಉಳ್ಳಾಲ, ಮೂಲ್ಕಿ, ಮೂಡುಬಿದಿರೆ ಮತ್ತು ಉಡುಪಿ ಜಿಲ್ಲೆಯ ಬೈಂದೂರು, ಬ್ರಹ್ಮಾವರ, ಕಾಪು, ಹೆಬ್ರಿಯಲ್ಲಿ ನೂತನ ಕಚೇರಿಗಳಾಗಲಿವೆ.
 - ಭುವನೇಶ್ವರಿ, ಉಪನಿರ್ದೇಶಕಿ ಉಡುಪಿ/ 
– ಪ್ರವೀಣ್‌, ಹಿರಿಯ ಸಹಾಯಕ ನಿರ್ದೇಶಕ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next