Advertisement

ಇಂಧನ ಇಲಾಖೆಗೆ ಕಾಯಕಲ್ಪ ನೀಡಲು ಮುಂದಾದ ಸರಕಾರ

10:21 PM Sep 08, 2021 | Team Udayavani |

ರಾಜ್ಯದ ಇಂಧನ ಇಲಾಖೆಯಲ್ಲಿ ಹೊಸತನದ ಉಪಕ್ರಮಗಳ ಪರ್ವ ಆರಂಭಗೊಂಡಿದೆ. ಮೊದಲ ಹಂತದಲ್ಲಿ ಕೆಲವೊಂದು ಜನಪ್ರಿಯ ಯೋಜನೆಗಳನ್ನು ಕೈಗೆತ್ತಿಕೊಂಡಿರುವ ಸರಕಾರ ರಾಜ್ಯದ ಗ್ರಾಮಾಂತರ ಪ್ರದೇಶಗಳಲ್ಲಿರುವ ವಿದ್ಯುತ್‌ ಸಂಪರ್ಕ ರಹಿತ ಸುಮಾರು 3 ಲಕ್ಷ ಮನೆಗಳಿಗೆ ಮುಂದಿನ ನೂರು ದಿನಗಳ ಒಳಗಾಗಿ ವಿದ್ಯುತ್‌ ಸಂಪರ್ಕ ಕಲ್ಪಿಸುವ “ಬೆಳಕು’ ಯೋಜನೆಯನ್ನು ಘೋಷಿಸಿದೆ.

Advertisement

ವಿವಿಧ ಕಾರಣಗಳಿಂದಾಗಿ ಇನ್ನೂ ವಿದ್ಯುತ್‌ ಸಂಪರ್ಕ ಇಲ್ಲದೆ ಕತ್ತಲಲ್ಲೇ ಉಳಿದಿರುವ ಈ ಮನೆಗಳಿಗೆ ಬೆಳಕು ಹರಿಸುವ ಸರಕಾರದ ಉದ್ದೇಶ ನಿಜಕ್ಕೂ ಶ್ಲಾಘನೀಯ. ಆದರೆ ಈ ಯೋಜನೆ ನಿರೀಕ್ಷಿತ ಗುರಿ ತಲುಪಿತೇ? ಎಂಬುದು ಸದ್ಯ ಗ್ರಾಮೀಣ ಜನರನ್ನು ಕಾಡುತ್ತಿರುವ ಪ್ರಶ್ನೆ. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಅದರಲ್ಲೂ ಗುಡ್ಡಗಾಡು ಮತ್ತು ಅರಣ್ಯ ತಪ್ಪಲಿನ ಪ್ರದೇಶಗಳಲ್ಲಿ ನೆಲೆಯಾಗಿರುವ ಅವೆಷ್ಟೋ ಬಡಕುಟುಂಬಗಳ ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸುವುದು ಸುಲಭದ ಮಾತೇನಲ್ಲ. ಯಾವೊಂದೂ ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಇನ್ನೂ ಕಡುಬಡತನ­ದಲ್ಲಿಯೇ ಇರುವ ಇಂಥ ಕುಟುಂಬಗಳ ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸಿಕೊಟ್ಟು ಆ ಮನೆಗಳನ್ನು ಬೆಳಗುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಈ ಮಹತ್ವಾಕಾಂಕ್ಷೆಯ ಯೋಜನೆಯ ಜಾರಿಯನ್ನು ಸವಾಲಾಗಿ ಸ್ವೀಕರಿಸಿರುವ ಇಲಾಖೆ 100 ದಿನಗಳಲ್ಲಿ ನಿರೀಕ್ಷಿತ ಗುರಿಯನ್ನು ಸಾಧಿಸುವ ವಿಶ್ವಾಸದಲ್ಲಿದೆ.

ವಿದ್ಯುತ್‌ ಶುಲ್ಕ ಸೋರಿಕೆಯನ್ನು ತಡೆಗಟ್ಟಲು ಸರಕಾರ ಪ್ರೀಪೇಯ್ಡ ವಿದ್ಯುತ್‌ ಮೀಟರ್‌ ಅಳವಡಿಕೆಯನ್ನು ಇನ್ನಷ್ಟು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸಲುದ್ದೇಶಿಸಿದೆ. ಕಳೆದ ಕೆಲವು ವರ್ಷಗಳಿಂದ ಈ ಪ್ರಕ್ರಿಯೆ ಜಾರಿಯಲ್ಲಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಈ ಅತ್ಯಾಧುನಿಕ ಮೀಟರ್‌ಗಳು ಅಳವಡಿಕೆಯಾಗಿಲ್ಲ. ಸರಕಾರಿ ಕಚೇರಿಗಳಿಂದ ಭಾರೀ ಪ್ರಮಾಣದಲ್ಲಿ ವಿದ್ಯುತ್‌ ಬಿಲ್‌ ಪಾವತಿಯಾಗಬೇಕಿರುವ ಹಿನ್ನೆಲೆಯಲ್ಲಿ ಆದ್ಯತೆಯ ಮೇಲೆ ಸರಕಾರಿ ಕಚೇರಿಗಳಲ್ಲಿ ಪ್ರೀಪೇಯ್ಡ ವಿದ್ಯುತ್‌ ಮೀಟರ್‌ಗಳನ್ನು ಅಳವಡಿಸಲು ತೀರ್ಮಾನಿಸಿದೆ. ರಾಜ್ಯದೆಲ್ಲೆಡೆಯ ಜನರ ಸಾಮಾನ್ಯ ಬೇಡಿಕೆಯಾಗಿರುವ ವಿದ್ಯುತ್‌ ಸಬ್‌ಸ್ಟೇಷನ್‌ಗಳ ಸ್ಥಾಪನೆಗೆ ಮುಂದಾಗಿರುವ ಸರಕಾರ ಮುಂದಿನ 100 ದಿನಗಳ ಅವಧಿಯಲ್ಲಿ ಉತ್ತರ ಕರ್ನಾಟಕದ ವಿವಿಧೆಡೆ 60ಕ್ಕೂ ಅಧಿಕ ಸಬ್‌ಸ್ಟೇಶನ್‌ಗಳನ್ನು ಸ್ಥಾಪಿಸಲಿದೆ. ರಾಜ್ಯದ ವಿದ್ಯುತ್‌ ಪೂರೈಕೆ ಕಂಪೆನಿಗಳನ್ನು ಮತ್ತು ಗ್ರಾಹಕರನ್ನು ನಿರಂತರವಾಗಿ ಕಾಡುತ್ತಿರುವ ಟ್ರಾನ್ಸ್‌ಫಾರ್ಮರ್‌ ಸಮಸ್ಯೆ­ಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಇಲಾಖೆ, ದುರಸ್ತಿಯಾಗದ ಸ್ಥಿತಿಯಲ್ಲಿರುವ ಟ್ರಾನ್ಸ್‌ಫಾರ್ಮರ್‌ಗಳ ಬದಲಾವಣೆ­ಗಾಗಿ ಟ್ರಾನ್ಸ್‌ಫಾರ್ಮರ್‌ ಬ್ಯಾಂಕ್‌ ತೆರೆಯಲು ಯೋಜನೆಯೊಂದನ್ನು ರೂಪಿಸಿದೆ. ಇದರಡಿಯಲ್ಲಿ ಕೆಟ್ಟು ಹೋದ ಟ್ರಾನ್ಸ್‌ಫಾರ್ಮರ್‌ಗಳನ್ನು 24 ತಾಸುಗಳ ಒಳಗಾಗಿ ಬದಲಾಯಿಸಲು ಇಲಾಖೆ ಚಿಂತನೆ ನಡೆಸಿದೆ.

ಈ ಎಲ್ಲ ವಿನೂತನ ಯೋಜನೆಗಳ ಮೂಲಕ ರಾಜ್ಯ ಸರಕಾರ ಇಂಧನ ಇಲಾಖೆಗೆ ಕಾಯಕಲ್ಪ ನೀಡಲು ಮುಂದಡಿ ಇಟ್ಟಿದೆ. ಸರಕಾರದ ಈ ನಿರ್ಧಾರಗಳು ಸ್ವಾಗತಾರ್ಹವಾಗಿದ್ದು ಇಲಾಖೆಯ ಈ ಯೋಜನೆ, ಚಿಂತನೆಗಳನ್ನು ಅನುಷ್ಠಾನಗೊಳಿಸುವ ಮಹತ್ತರ ಹೊಣೆಗಾರಿಕೆ ಇಲಾಖೆಯ ಅಧಿಕಾರಿಗಳ ಮೇಲಿದೆ. ಇವುಗಳ ಸಮರ್ಪಕ ಮತ್ತು ವ್ಯವಸ್ಥಿತ ಅನುಷ್ಠಾನಕ್ಕೆ ಅಗತ್ಯ ಹಣಕಾಸು ನೆರವನ್ನು ಸರಕಾರ ಒದಗಿಸುವ ಮೂಲಕ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next