ಬೆಂಗಳೂರು: ಶಿಕ್ಷಣ ಇಲಾಖೆ ಭ್ರಷ್ಟಾಚಾರದಿಂದ ತುಂಬಿ ಹೋಗಿದ್ದು, ಲಂಚ ನೀಡದೆ ಕೆಲಸವಾಗುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆರೋಪಿಸಿದರು.
ನಗರದ ಶಿಕ್ಷಕರ ಸದನದಲ್ಲಿ ನಡೆದ “ರಾಜ್ಯಮಟ್ಟದ ಪ್ರಥಮ ಶೈಕ್ಷಣಿಕ ಸಮ್ಮೇಳನ’ಉದ್ಘಾಟಿಸಿ ಮಾತನಾಡಿದ ಅವರು, ಇಲಾಖೆಯಲ್ಲಿ ವರ್ಗಾವಣೆ ಹೆಸರಿನಲ್ಲಿ ನಡೆಯುತ್ತಿದ್ದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ನನ್ನ ಅವಧಿಯಲ್ಲಿಯೇ ವರ್ಗಾವಣೆ ಕಾಯ್ದೆ ಜಾರಿಯಾದರೂ ಇಂದು ಅದು ಅದೋಗತಿ ತಲುಪಿದೆ ಎಂದರು.
ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ನೆಮ್ಮದಿಯಿಂದ ಪಾಠ ಮಾಡದಂತಹ ವಾತಾವರಣವಿದ್ದು, ಕೆಲವು ಶಿಕ್ಷಕರು ಮಾಡಿದ ತಪ್ಪುಗಳಿಂದ ಇಡೀ ಶಿಕ್ಷಕ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸರ್ಕಾರಿ ಶಾಲಾ ಶಿಕ್ಷಕರು ಸರಿಯಾಗಿ ಪಾಠ ಮಾಡುವುದಿಲ್ಲ ಎಂಬ ಭಾವನೆ ಜನರಲ್ಲಿ ಮೂಡಿದೆ. ಹೀಗಾಗಿ ಉತ್ತಮವಾಗಿ ಕೆಲಸ ಮಾಡಿ, ಹೆಚ್ಚಿನ ಮಕ್ಕಳು ಸರ್ಕಾರಿ ಶಾಲೆಗಳಿಗೆ ದಾಖಲಾಗುವಂತೆ ಮಾಡಬೇಕಿದೆ ಎಂದು ಹೇಳಿದರು.
ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾದರೆ ಪ್ರಾಥಮಿಕ ಶಾಲಾ ಶಿಕ್ಷಕರು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಹೀಗಾಗಿ ಶಾಲೆಗಳಲ್ಲಿ ಮಕ್ಕಳ ಹಾಜರಾತಿ ಸಂಖ್ಯೆ ಕಡಿಮೆಯಾಗದಂತೆ ಅಗತ್ಯ ಕ್ರಮವಹಿಸಬೇಕು ಎಂದು ಎಚ್ಚರಿಕೆ ನೀಡಿದರು.
ಶಿಕ್ಷಕರ ಮುಂಬಡ್ತಿ ಪ್ರಮಾಣ ಶೇ.50ರಷ್ಟು ಹೆಚ್ಚಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಜತೆಗೆ ಬಡ್ತಿಗಾಗಿ ಇರುವ ಪರೀಕ್ಷೆ ರದ್ದು, ಗುಣಾತ್ಮಕ ಶಿಕ್ಷಣಕ್ಕಾಗಿ ಎಲ್ಲ 6 ವಿಷಯಗಳನ್ನು ಸೃಜಿಸುವುದು, 200 ಮಕ್ಕಳಿಗಿಂತ ಹೆಚ್ಚು ದಾಖಲಾತಿ ಯಿರುವ ಶಾಲೆಗಳಿಗೆ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಮುಂಬಡ್ತಿ ವಿಷಯದ ಚರ್ಚಿಸಲು ಸಂಘದ ಸದಸ್ಯರ ನಿಯೋಗವನ್ನು ಮುಖ್ಯಮಂತ್ರಿ ಗಳ ಬಳಿಗೆ ಕರೆದುಕೊಂಡು ಹೋಗುತ್ತೇನೆ ಎಂದು ಭರವಸೆ ನೀಡಿದರು. ಸಂಘದ ರಾಜ್ಯಾಧ್ಯಕ್ಷ ಎಸ್. ವಾಯ್, ಸೊರಟಿ ಮಾತನಾಡಿದರು.