ಮಂಗಳೂರು: ಇಲಾಖೆಯ ಸಮವಸ್ತ್ರ ಧರಿಸಿದ ಬಳಿಕ ಅದರ ಘನತೆ, ಗೌರವವನ್ನು ಕಾಯುವುದು ನಮ್ಮ ಕರ್ತವ್ಯ ಎಂದು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಡಾ| ವೇದಮೂರ್ತಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ವತಿಯಿಂದ ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಗುರುವಾರ ಆಯೋಜಿಸಲಾದ ವಾರ್ಷಿಕ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪೊಲೀಸ್ ಹಾಗೂ ಗೃಹರಕ್ಷಕ ದಳ ಇಲಾಖೆಯಲ್ಲಿ ಯಾವುದೇ ಭೇದಭಾವ ಇಲ್ಲವಾಗಿದ್ದು, ಹಲವಾರು ಪೊಲೀಸ್ ಠಾಣೆಗಳಲ್ಲಿ ಗೃಹರಕ್ಷಕ ದಳದ ಸಿಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸರಕಾರದಿಂದ ದೊರೆಯುವ ಗೌರವಧನ ಕಡಿಮೆಯಾಗಿದ್ದರೂ ನಿಷ್ಕಾಮ ರೀತಿಯಲ್ಲಿ ಗೃಹರಕ್ಷಕ ದಳ ಸಿಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ವಾರ್ಷಿಕ ತರಬೇತಿ ಯನ್ನು ಉತ್ತಮವಾಗಿ ಪಡೆದುಕೊಂಡಿರುವ ಗೃಹ ರಕ್ಷಕದಳದ ಸಿಬಂದಿ, ತರಬೇತಿಯ ಸದುಪಯೋಗ ಹಾಗೂ ಉತ್ತಮ ನಿರ್ವಹಣೆಯಾಗಿರುವುದು ಶ್ಲಾಘನೀಯ ಎಂದರು.
ಉಡುಪಿ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ಕೆ. ಪ್ರಶಾಂತ್ ಶೆಟ್ಟಿ ಮಾತನಾಡಿ, ಕಡಿಮೆ ಗೌರವ ಧನವಿದ್ದರೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಗೃಹ ರಕ್ಷಕ ದಳದ ಸಿಬಂದಿ ಸೇವೆ ಶ್ಲಾಘನೀಯ. ಪ್ರತಿ ಸಿಬಂದಿ ತಮ್ಮ ಇಲಾಖೆಯ ಬಗ್ಗೆ ಹೆಮ್ಮೆಪಡಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ| ಮುರಲೀ ಮೋಹನ ಚೂಂತಾರು ಅವರು, 100 ಗೃಹ ರಕ್ಷಕರಿಗೆ 10 ದಿನಗಳ ಕಾಲ ಉತ್ತಮ ತರಬೇತಿ ನೀಡಿ ಸಾಮಾಜಿಕ ಸೇವೆಗಾಗಿ ಅವರನ್ನು ನೀಡಲಾಗಿದೆ. ನಾವು ಮಾಡುವ ಪ್ರತಿಯೊಂದು ಕಾರ್ಯವನ್ನು ಸಮಾಜ ನೋಡುತ್ತಿದ್ದು, ನಾವು ನಮ್ಮ ಘನತೆ, ಗೌರವವನ್ನು ಉಳಿಸಿಕೊಳ್ಳಬೇಕು. ರಾಜ್ಯದಲ್ಲಿ 25,000 ಗೃಹರಕ್ಷಕರಿದ್ದು, ಜಿಲ್ಲೆಯಲ್ಲಿ 1,000 ಗೃಹ ರಕ್ಷಕರಿದ್ದಾರೆ. ತರಬೇತಿಯ ಮೂಲಕ ಪುನಃ 100 ಗೃಹ ರಕ್ಷಕರನ್ನು ಸೇವೆಗೆ ನಿಯುಕ್ತಿ ಗೊಳಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಡೆಪ್ಯೂಟಿ ಕಮಾಂಡೆಂಟ್ ರಮೇಶ್ ಸ್ವಾಗತಿಸಿ, ಸೆಕೆಂಡ್ ಇನ್ ಕಮಾಂಡ್ ಮಹಮ್ಮದ್ ಇಸ್ಮಾಯಿಲ್ ವಂದಿಸಿದರು. ಬೆಳ್ತಂಗಡಿ ಘಟಕ ಯುನಿಟ್ ಹೆಡ್ ಜಯಾನಂದ ನಿರೂಪಿಸಿದರು. ಉತ್ತಮ ಪಥಸಂಚಲನದಲ್ಲಿ ವೈಯಕ್ತಿಕವಾಗಿ ಪ್ರಸಾದ್, ಸಬೀನಾ ಪ್ರಶಸ್ತಿ ಪಡೆದುಕೊಂಡರು.