Advertisement

ಪಶುಸಂಗೋಪನ ಇಲಾಖೆ; ವೈದ್ಯಾಧಿಕಾರಿ ಸಹಿತ ಬಹುತೇಕ ಹುದ್ದೆ ಖಾಲಿ!

09:00 AM Oct 13, 2022 | Team Udayavani |

ಉಡುಪಿ: ಜಿಲ್ಲೆಯ ಪಶುಸಂಗೋಪನ ಇಲಾಖೆಯಲ್ಲಿ ಮಂಜೂರಾಗಿರುವ ಹುದ್ದೆಗಳಲ್ಲಿ ಭರ್ತಿಗಿಂತ ಖಾಲಿಯೇ ಹೆಚ್ಚಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಪಶುವೈದ್ಯರ ಸೇವೆಯನ್ನು ಸಮರ್ಪಕವಾಗಿ ನೀಡಲು ಇಲಾಖೆಗೆ ಸಾಧ್ಯವಾಗುತ್ತಿಲ್ಲ.

Advertisement

ಪಶುವೈದ್ಯಾಧಿಕಾರಿ ಹುದ್ದೆ ಮಾತ್ರವಲ್ಲದೆ ಹಿರಿಯ, ಕಿರಿಯ ಪಶುವೈದ್ಯಾಧಿಕಾರಿ ಹುದ್ದೆ, ಜಾನುವಾರು ಅಧಿಕಾರಿ, ಹಿರಿಯ ಪಶು ವೈದ್ಯಕೀಯ ಪರೀಕ್ಷಕ, ಪಶು ವೈದ್ಯಕೀಯ ಪರೀಕ್ಷಕ, “ಡಿ’ ದರ್ಜೆ ನೌಕರ ಹೀಗೆ ಎಲ್ಲ ವಿಭಾಗದಲ್ಲಿ ಮಂಜೂರಾದ ಹುದ್ದೆಗಳಲ್ಲಿ ಭರ್ತಿಯಾಗಿರುವುದಕ್ಕಿಂತ ಖಾಲಿ ಹುದ್ದೆಯೇ ಹೆಚ್ಚಿದೆ.

ಜಿಲ್ಲೆಗೆ 22 ಮುಖ್ಯ ಪಶು ವೈದ್ಯಾಧಿಕಾರಿಗಳ ಹುದ್ದೆ ಮಂಜೂರಾಗಿದ್ದು ಅದರಲ್ಲಿ 12 ಮಾತ್ರ ಭರ್ತಿಯಾಗಿವೆ. 10 ಖಾಲಿಯಿದೆ. ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ)ಯ 8 ಹುದ್ದೆಯಲ್ಲಿ 6 ಖಾಲಿಯಿವೆ. ಹಿರಿಯ ಪಶುವೈದ್ಯಕೀಯ ಪರೀಕ್ಷಕರ 46 ಹುದ್ದೆಯಲ್ಲಿ 34 ಖಾಲಿಯಿದೆ. 33 ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗಳಲ್ಲಿ 24 ಖಾಲಿಯಿವೆ. 141 “ಡಿ’ ದರ್ಜೆಯ ನೌಕರರ ಹುದ್ದೆಯಲ್ಲಿ 134 ಹುದ್ದೆ ಖಾಲಿಯಾಗಿವೆ. ಒಟ್ಟಾರೆಯಾಗಿ ವಿವಿಧ ವಿಭಾಗದಲ್ಲಿ ಜಿಲ್ಲೆಗೆ ಮಂಜೂರಾಗಿರುವ 357 ಹುದ್ದೆಯಲ್ಲಿ 80 ಮಾತ್ರ ಭರ್ತಿಯಾಗಿದ್ದು, 277 ಖಾಲಿಯಿವೆ.

ಪಶು ವೈದ್ಯಾಧಿಕಾರಿಗಳೇ ಇಲ್ಲ

ಮುಖ್ಯ ಪಶು ವೈದ್ಯಾಧಿಕಾರಿ, ಹಿರಿಯ ಪಶು ವೈದ್ಯಾಧಿಕಾರಿ, ಪಶುವೈದ್ಯಾಧಿಕಾರಿ, ಹಿರಿಯ, ಕಿರಿಯ ಪಶುವೈದ್ಯಕೀಯ ಪರೀಕ್ಷಕರು ಸೇರಿದಂತೆ ಒಟ್ಟು 143 ಹುದ್ದೆಯಲ್ಲಿ 44 ಭರ್ತಿಯಾಗಿದ್ದು, 99 ಖಾಲಿಯಿವೆ. ಗ್ರಾಮೀಣ ಭಾಗದಲ್ಲಿ ಪಶುವೈದ್ಯರು ಅತೀ ಅವಶ್ಯವಾಗಿ ಇರಬೇಕು. ಗ್ರಾಮೀಣ ಭಾಗದಲ್ಲಿ ಪಶುಗಳಿಗೆ ಏನೇ ಸಮಸ್ಯೆ ಬಂದರೂ ಸ್ಥಳೀಯ ಪಶುವೈದ್ಯಕೀಯ ಚಿಕಿತ್ಸಾಲಯವನ್ನು ಸಂಪರ್ಕಿಸುತ್ತಾರೆ. ಸದಾ ವೈದ್ಯರಿಲ್ಲ ಎಂಬ ಧ್ವನಿ ಕೇಳಿಬರುತ್ತಿರುತ್ತದೆ. ಸರಕಾರ ಈ ನಿಟ್ಟಿನಲ್ಲಿ ತುರ್ತು ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರು ಆಗ್ರಹಿಸಿದ್ದಾರೆ.

Advertisement

400 ಪಶುವೈದ್ಯರ ಭರ್ತಿ ಸಾಧ್ಯತೆ

ಜಾನುವಾರುಗಳಿಗೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡಲು ಪಶು ವೈದ್ಯಾಧಿಕಾರಿಗಳ ಹುದ್ದೆ ಖಾಲಿ ಇರುವ ಕಡೆಗಳಲ್ಲಿ ಹತ್ತಿರದ ಪಶುವೈದ್ಯ ಸಂಸ್ಥೆಯಿಂದ ಅಧಿಕಾರಿ ಅಥವಾ ಸಿಬಂದಿಯನ್ನು ನಿಯೋಜನೆ ಮೇರೆಗೆ ಕಾರ್ಯ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಸಂಚಾರಿ ಆ್ಯಂಬುಲೆನ್ಸ್‌ ಮೂಲಕವೂ ಗ್ರಾಮೀಣ ಭಾಗದಲ್ಲಿ ಸೇವೆ ನೀಡಲು ವ್ಯವಸ್ಥೆ ಮಾಡಲಾಗುತ್ತಿದೆ. ರಾಜ್ಯದಲ್ಲಿ 400 ಪಶು ವೈದ್ಯಾಧಿಕಾರಿಗಳ ಭರ್ತಿ ಸಂಬಂಧ ಸರಕಾರ ಕ್ರಮ ತೆಗೆದುಕೊಳ್ಳುತ್ತಿದೆ. ಹಾಗೆಯೇ 250 ಕಿರಿಯ ಪಶುವೈದ್ಯಕೀಯ ಪರೀಕ್ಷಕರನ್ನು ನೇಮಕ ಮಾಡಿಕೊಳ್ಳಲು ಕ್ರಮ ಆಗುತ್ತಿದೆ. ಇದರಲ್ಲಿ ಉಡುಪಿ ಜಿಲ್ಲೆಯ ಕೆಲವು ಹುದ್ದೆ ಭರ್ತಿಯಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಎರವಲು ಸೇವೆ: ಪಶುವೈದ್ಯಾಧಿಕಾರಿಗಳ ಕೊರತೆಯ ಬಗ್ಗೆ ಈಗಾಗಲೇ ಇಲಾಖೆಯ ಗಮನಕ್ಕೆ ತಂದಿದ್ದೇವೆ. ಅಲ್ಲದೆ ಪ್ರತೀ ಬಾರಿಯೂ ಸಭೆಯಲ್ಲಿ ಈ ವಿಷಯ ಪ್ರಸ್ತಾವಿಸುತ್ತಿದ್ದೇವೆ. ವೈದ್ಯಾಧಿಕಾರಿಗಳು ಇಲ್ಲದೇ ಸಮರ್ಪಕ ಸೇವೆ ನೀಡುವುದು ಕಷ್ಟ. ಈಗ ಇಬ್ಬರು ಮಾತ್ರ ಇದ್ದು, ತುರ್ತು ಸಂದರ್ಭಗಳಲ್ಲಿ ಅವರ ಎರವಲು ಸೇವೆ ಪಡೆಯುತ್ತಿದ್ದೇವೆ. –ಡಾ| ಶಂಕರ್‌ ಶೆಟ್ಟಿ, ಉಪ ನಿರ್ದೇಶಕರು, ಪಶುಸಂಗೋಪನ ಇಲಾಖೆ

Advertisement

Udayavani is now on Telegram. Click here to join our channel and stay updated with the latest news.

Next