Advertisement

ಹಕ್ಕುಪತ್ರ ಸಿಕ್ಕರೂ ಮನೆ ಕಟ್ಟಲು ಇಲಾಖೆ ಆಕ್ಷೇಪ

10:14 PM Jan 29, 2020 | mahesh |

ಪುತ್ತೂರು: ಬಡವರಿಗೆ ಕಂದಾಯ ಇಲಾಖೆ ಮೂಲಕ ಜಾಗದ ಹಕ್ಕುಪತ್ರ ಸಿಕ್ಕಿದರೂ ಮನೆ ಕಟ್ಟಲು ಅರಣ್ಯ ಇಲಾಖೆಯ ಆಕ್ಷೇಪಣೆಯಿಂದ ಸಮಸ್ಯೆಯಾಗುತ್ತಿರುವ ಕುರಿತು ತಾ.ಪಂ. ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾ. ಪಂ. ಸಾಮಾನ್ಯ ಸಭೆ ಬುಧವಾರ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ತಾಲೂಕಿನ ಕೊಳ್ತಿಗೆ, ಒಳಮೊಗ್ರು, ಗೋಳಿತೊಟ್ಟು ಸಹಿತ ಹಲವು ಭಾಗಗಳಲ್ಲಿ ಬಡಮಂದಿಗೆ ಹಕ್ಕು ಪತ್ರವನ್ನು ಕಂದಾಯ ಇಲಾಖೆ ನೀಡಿದೆ. ಸರಕಾರಿ ಜಾಗದ ಪಹಣಿ ಇರುವಾಗಲೂ ಈಗ ಅದಕ್ಕೆ ಅರಣ್ಯ ಇಲಾಖೆ ಆಕ್ಷೇಪಣೆ ಮಾಡುತ್ತಿದೆ ಎಂದು ತಾ. ಪಂ. ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಕೊಳ್ತಿಗೆ ಗ್ರಾಮದಲ್ಲಿ 18 ಮಂದಿಗೆ ಕಂದಾಯ ಇಲಾಖೆ ಹಕ್ಕುಪತ್ರ ನೀಡಿದೆ. ಸರಕಾರಿ ಜಾಗಕ್ಕೆ ಆಕ್ಷೇಪಣೆ ಮಾಡುವ ಮೂಲಕ ಅರಣ್ಯ ಇಲಾಖೆ ತನ್ನ ಉದ್ಧಟತನ ಪ್ರದರ್ಶಿಸುತ್ತಿದೆ. ಇದರಿಂದ ಹಕ್ಕುಪತ್ರ ಪಡೆದವರು ಅಸಹಾಯಕರಾಗಿದ್ದು, ಅವರ ಜೀವನ ಬೀದಿಗೆ ಬೀಳುವಂತಾಗಿದೆ ಎಂದು ಸದಸ್ಯರಾದ ರಾಮ ಪಾಂಬಾರು, ಉಷಾ ಅಂಚನ್‌, ಹರೀಶ್‌ ಬಿಜತ್ರೆ, ಆಶಾ ಲಕ್ಷ್ಮಣ, ತೇಜಸ್ವಿನಿ ಕಟ್ಟಪುಣಿ, ಜಿ.ಪಂ. ಸದಸ್ಯರಾದ ಪಿ.ಪಿ. ವರ್ಗೀಸ್‌, ಸರ್ವೋತ್ತಮ ಗೌಡ ಪಕ್ಷಾತೀತವಾಗಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಯಾವ ನ್ಯಾಯ?
ಗೋಳಿತೊಟ್ಟು ಹಾಗೂ ಒಳಮೊಗ್ರು ಗ್ರಾಮಗಳಲ್ಲಿಯೂ ಇದೇ ರೀತಿ ಹಕ್ಕುಪತ್ರ ಪಡೆದವರಿಗೆ ಅರಣ್ಯ ಇಲಾಖೆಯಿಂದ ಅನ್ಯಾಯವಾಗಿದೆ ಎಂದು ಹೇಳಿದ ಸದಸ್ಯರು, ದಾಖಲೆ ಪರಿಶೀಲನೆ ಮಾಡಿ ಕಂದಾಯ ಇಲಾಖೆ ಹಕ್ಕುಪತ್ರ ನೀಡಿದೆ. ಈಗ ಹಕ್ಕುಪತ್ರ ರದ್ದು ಮಾಡುವುದು ಯಾವ ನ್ಯಾಯ. ಹಾಗಾದರೆ ಹಕ್ಕುಪತ್ರಕ್ಕೆ ಬೆಲೆ ಇಲ್ಲವೇ? ಅರಣ್ಯ ಇಲಾಖೆಯಿಂದ ಬಡ ಜನತೆ ಬದುಕು ಹಾಳಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಬ್ಬಿಸಬೇಡಿ
ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌ ಮಾತನಾಡಿ, ಬದಲಿ ವ್ಯವಸ್ಥೆ ಮಾಡುವ ತನಕ ಹಕ್ಕುಪತ್ರ ಪಡೆದವರನ್ನು ಎಬ್ಬಿಸುವ ಕೆಲಸ ಮಾಡಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು. ಅರಣ್ಯ ಇಲಾಖೆ ಆಕ್ಷೇಪ ವ್ಯಕ್ತಪಡಿಸುವ ಕುರಿತು ಅಧಿಕಾರಿಯನ್ನು ಪ್ರಶ್ನಿಸಿದ ಅಧ್ಯಕ್ಷರು ನೀವ್ಯಾಕೆ ಮೊದಲು ಆಕ್ಷೇಪಣೆ ಮಾಡಿಲ್ಲ? ಈಗ ಆಕ್ಷೇಪಣೆ ಮಾಡುತ್ತಿರುವುದು ಏಕೆ ಎಂದರು. ಈ ಕುರಿತು ನಮಗೆ ಮಾಹಿತಿಯೇ ಇರಲಿಲ್ಲ. ಕಂದಾಯ ಇಲಾಖೆ ಹಕ್ಕುಪತ್ರ ನೀಡಿರುವುದು ನಮಗೆ ಗೊತ್ತೇ ಇಲ್ಲ ಎಂದ ಅರಣ್ಯ ಅಧಿಕಾರಿ, ಬದಲಿ ವ್ಯವಸ್ಥೆ ಮಾಡದೆ ಬಡ ಮಂದಿಯನ್ನು ಸ್ಥಳದಿಂದ ಎಬ್ಬಿಸುವುದರ ವಿರುದ್ಧ ನಿರ್ಣಯ ಕೈಗೊಳ್ಳಲಾಯಿತು.

Advertisement

ಮರಳು ಮಾರಾಟದ ಗುತ್ತಿಗೆ ಗ್ರಾ.ಪಂ.ಗೆ ನೀಡಲು ಆಗ್ರಹ
ಸ್ಥಳೀಯ ಜನತೆಗೆ ಅನುಕೂಲವಾಗುವಂತೆ ಗ್ರಾ.ಪಂ.ಗಳಿಗೆ ಮರಳು ಮಾರಾಟದ ಗುತ್ತಿಗೆ ನೀಡುವಂತೆ ಆಗ್ರಹಿಸಿ ತಾ.ಪಂ. ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಗಣಿ ಇಲಾಖೆ ಅಧಿಕಾರಿ ಮರಳು ಮಾರಾಟದ ಕುರಿತು ಮಾಹಿತಿ ನೀಡಿದಾಗ ಗುತ್ತಿಗೆದಾರರು ಬೆಲೆ ನಿಗದಿ ಮಾಡುತ್ತಾರೆ ಎಂಬ ಮಾಹಿತಿ ನೀಡಿದರು. ಇದರಿಂದ ಅಸಮಾಧಾನಗೊಂಡ ಸದಸ್ಯರು ಮರಳು ಮಾರಾಟದ ಗುತ್ತಿಗೆ ಪಡೆದವರು ಬೇಕಾಬಿಟ್ಟಿ ಬೆಲೆ ಏರಿಕೆ ಮಾಡಿದರೆ, ಜನಸಾಮಾನ್ಯರಿಗೆ ತೊಂದರೆಯಾಗುತ್ತದೆ. ಹಾಗಾಗಿ ಸರಕಾರವೇ ಬೆಲೆ ನಿಗದಿ ಮಾಡಬೇಕು ಎಂದು ಜಿ.ಪಂ. ಸದಸ್ಯರಾದ ಪಿ.ಪಿ. ವರ್ಗೀಸ್‌, ಸರ್ವೋತ್ತಮ ಗೌಡ, ತಾ.ಪಂ. ಸದಸ್ಯರಾದ ಉಷಾ ಅಂಚನ್‌, ಆಶಾ ಲಕ್ಷ್ಮಣ್‌ ಆಗ್ರಹಿಸಿದರು.

ಈ ಕುರಿತು ಸರಕಾರವೇ ತೀರ್ಮಾನ ಕೈಗೊಳ್ಳಬೇಕು ಎಂದು ಅಧಿಕಾರಿ ತಿಳಿಸಿದರು. ಕಡಬದಿಂದ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದ್ದು, ಈ ಕುರಿತು ಏನು ಕ್ರಮ ಕೈಗೊಂಡಿದ್ದೀರಿ ಎಂದು ಅಧಿಕಾರಿಯನ್ನು ಸದಸ್ಯರು ಪ್ರಶ್ನಿಸಿದರು. ಈ ಕುರಿತು ಯಾವುದೇ ದೂರು ಬಂದಿಲ್ಲ ಎಂದು ಅಧಿಕಾರಿ ತಿಳಿಸಿದರು. ದೂರು ಬಂದರೆ ಮಾತ್ರ ನೀವು ಕ್ರಮ ಕೈಗೊಳ್ಳುವುದೇ? ಎಂದು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.

ತಾಲೂಕು ಪಂಚಾಯತ್‌ ಉಪಾಧ್ಯಕ್ಷೆ ಲಲಿತಾ ಈಶ್ವರ್‌, ತಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಕಾರ್ಯನಿರ್ವಹಣಾ ಅಧಿಕಾರಿ ನವೀನ್‌ ಭಂಡಾರಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಂಡದ ಹಣ ವಾಪಸ್‌ ನೀಡಿ
ಅನರ್ಹ ಬಿಪಿಎಲ್‌ ಪಡಿತರ ಹೊಂದಿದ್ದವರಿಗೆ ದಂಡ ವಿಧಿಸಿ ಸುಮಾರು 4.51 ಲಕ್ಷ ರೂ. ಹಣ ಸಂಗ್ರಹ ಮಾಡಲಾಗಿದೆ. ಅನಂತರ ಸರಕಾರ ದಂಡ ವಿ ಸುವುದನ್ನು ರದ್ದು ಮಾಡಿತ್ತು. ಆದರೆ ದಂಡ ಕಟ್ಟಿದವರ ಹಣವನ್ನು ತತ್‌ಕ್ಷಣ ವಾಪಸು ಮಾಡುವಂತೆ ಸದಸ್ಯರಾದ ಉಷಾ ಅಂಚನ್‌, ಆಶಾ ಲಕ್ಷ್ಮಣ್‌, ಜಿ.ಪಂ. ಸದಸ್ಯ ಪಿ.ಪಿ. ವರ್ಗೀಸ್‌ ಆಗ್ರಹಿಸಿದರು. ಈ ಕುರಿತು ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದರು.

ಈ ಕುರಿತು ನಿರ್ಣಯ ಕೈಗೊಳ್ಳಲು ಆಗುವುದಿಲ್ಲ ಎಂದು ಅಧ್ಯಕ್ಷರು ಹೇಳಿದಾಗ, ಹಣ ವಾಪಸಾತಿ ಮಾಡಲು ಸಾಧ್ಯವಿಲ್ಲವೆಂದಾದರೆ ಮತ್ತೆ ದಂಡ ವಿಧಿಸುವುದನ್ನು ರದ್ದುಗೊಳಿಸಿದ್ದು ಏಕೆ? ಎಂದ ಸದಸ್ಯರು, ನಿರ್ಣಯ ಕೈಗೊಳ್ಳಲು ಏಕೆ ಸಾಧ್ಯವಿಲ್ಲ? ಹಾಗಾದರೆ ಈ ವಿಚಾರದ ಕುರಿತು ಹಿಂದಿನ ಸಭೆಯಲ್ಲಿ ಹೇಗೆ ನಿರ್ಣಯ ಮಾಡಲಾಯಿತು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next