Advertisement

ಹೊರಟಿದ್ದು ಉದ್ಯೋಗ ಅರಸಿ ; ಮುಟ್ಟಿದ್ದು ಅಂಡರ್‌ವರ್ಲ್ಡ್

06:55 AM Aug 08, 2017 | Team Udayavani |

ಮಹಾನಗರ: ಯುವಜನರು ಉತ್ತಮ ಉದ್ಯೋಗವಕಾಶಗಳಿಗಾಗಿ ಊರುಬಿಟ್ಟು ಪೇಟೆ ಸೇರುತ್ತಾರೆ. ಕೆಲವರು ಸನ್ನಡತೆಯಿಂದ ಉನ್ನತ ಮಟ್ಟಕ್ಕೇರಿದರೆ, ಇನ್ನು ಕೆಲವರು ಕೆಟ್ಟ ಕೆಲಸಗಳಿಂದ ಕುಖ್ಯಾತಿಗೆ ಒಳಗಾಗುತ್ತಾರೆ. ಉಡುಪಿ ಜಿಲ್ಲೆ ಕಾಪುವಿನ ವಿನೇಶ್‌ ಶೆಟ್ಟಿಯದ್ದು ಇದೇ ತರದ ಕತೆ. ಹೊರಟಿದ್ದು ಉದ್ಯೋಗ ಅರಸಿ; ಮುಟ್ಟಿದ್ದು ಭೂಗತ ಜಗತ್ತು. 

Advertisement

ವಿನೇಶ್‌ ಶೆಟ್ಟಿ  ಸುಮಾರು 25 ವರ್ಷಗಳ ಹಿಂದೆ ಉದ್ಯೋಗ ಅರಸಿ ಮಾಯಾನಗರಿ ಮುಂಬಯಿಗೆ ಹೋಗಿದ್ದ. ಹೊಟೇಲ್‌ನಲ್ಲಿ ಕೆಲಸ ಮಾಡುತ್ತಾ ಸುತ್ತಲಿನ ಪರಿಸರ ಪರಿಚಯಿಸಿಕೊಳ್ಳುತ್ತಲೇ ಭೂಗತ ಜಗತ್ತಿನ ಪರಿಚಯವಾಯಿತು. ಪರಿಣಾಮ ಹಲವು ಕೊಲೆ, ಕೊಲೆ ಯತ್ನ, ಅಪಹರಣ, ದರೋಡೆ ಮತ್ತಿತರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾದ.

2003ರಲ್ಲಿ  ಬಂಟ್ವಾಳ ತಾಲೂಕು ಮುಡಿಪು-ಇರಾ ರಸ್ತೆಯ ಮೂಳೂರು ಕ್ರಾಸ್‌ ಬಳಿ ನಡೆದ ಜೋಡಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಯಾಗಿ ಜಾಮೀನಿನಲ್ಲಿ ಬಿಡು ಗಡೆಗೊಂಡು ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿ ಕೊಂಡಿದ್ದ. ಬಳಿಕ ಆತನನ್ನು ಕೊಣಾಜೆ ಪೊಲೀಸರು ಜ. 5 ರಂದು ಮುಂಬಯಿಯಲ್ಲಿ  ಬಂಧಿಸಿ ಮಂಗಳೂರಿಗೆ ಕರೆ ತಂದರು. ಬಂಟ್ವಾಳ ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ  ಒಪ್ಪಿಸಲಾಯಿತು.

2007ರಲ್ಲಿ ಗೋರೆಗಾಂವ್‌ನ ಹೊಟೇಲ್‌ ಉದ್ಯಮಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಮಂಡಿ ಸಿದ ಪ್ರಕರಣದಲ್ಲೂ ವಿನೇಶ್‌ ಭಾಗಿಯಾಗಿದ್ದ. ಅಷ್ಟರಲ್ಲೇ ಆತನ ಮೇಲೆ ಕೊಲೆ, ಅಪಹರಣ, ದರೋಡೆಗೆ ಸಂಬಂಧಿಸಿ 16 ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳಿದ್ದವು.
 
ಪೃಥ್ವಿಪಾಲ್‌ ಹತ್ಯೆ
2002ರಲ್ಲಿ ಮುಡಿಪು ಮಂಗಳಾ ಬಾರ್‌ ಎದುರು ಪೃಥ್ವಿಪಾಲ್‌ ರೈ ಹತ್ಯೆ ನಡೆದಿತ್ತು. ಮಾಣಿಲ ಶಿವರಾಮ್‌ ನೇತೃತ್ವದ ಮೂವರ ತಂಡ ಪೃಥ್ವಿಪಾಲ್‌ ರೈ ನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿತ್ತು. ಇದರಿಂದ ನೊಂದಿದ್ದ ಪೃಥ್ವಿಪಾಲ್‌ ಆಪ್ತ  ಗೆಳೆಯನಂತಿದ್ದ ವಿನೇಶ್‌ ಶೆಟ್ಟಿ ಕೊಲೆಯ ಹಿಂದಿನ ಮೂಲವನ್ನು ಶೋಧಿಸಿದ. ಈ ವೇಳೆ  ಪೃಥ್ವಿಪಾಲ್‌ ತಾಯಿಗೆ  ಸೋದರ ಸಂಬಂಧಿಯಾದ  ವೇಣುಗೋಪಾಲ್‌ ನಾೖಕ್‌ ಸುಪಾರಿ ನೀಡಿ ಹತ್ಯೆ ಮಾಡಿಸಿದ್ದು ಖಾತರಿ ಯಾಗಿತ್ತು. ಅದರಂತೆ 2003ರಲ್ಲಿ ವಿನೇಶ್‌ ಶೆಟ್ಟಿ ತನ್ನ ಸಹಚರರಾದ ಲೋಕೇಶ್‌ ಬಂಗೇರ, ಲಕ್ಷ್ಮಣ, ಗಣೇಶ್‌ ಬಜಾಲ್‌, ಬಾಲಕೃಷ್ಣರ ಸಹಾಯದಿಂದ ಮೂಳೂರು ಇರಾ ಕ್ರಾಸ್‌ನಲ್ಲಿನ ಕಪ್ಪುಕಲ್ಲಿನ ಕೋರೆಯಿಂದ ವಾಪಸಾಗುತ್ತಿದ್ದ ವೇಣುಗೋಪಾಲ ನಾೖಕ್‌ರನ್ನು ಇನ್ನೊಂದು ಕಾರಿನಲ್ಲಿ ಅಡ್ಡಗಟ್ಟಿ ಪಿಸ್ತೂಲಿನಿಂದ ಗುಂಡು ಹಾರಿಸಿ ಮತ್ತು ತಲವಾರಿನಿಂದ ಕಡಿದು ಹತ್ಯೆಗೈದ. ಇದಕ್ಕೆ ಪ್ರತ್ಯಕ್ಷದರ್ಶಿಯಾಗಿದ್ದ ಚಾಲಕ ಸಂತೋಷ್‌ನನ್ನೂ ತಂಡವು ಅಲ್ಲೇ ಹತ್ಯೆ ಮಾಡಿತ್ತು.

ಪಾತಕ ಲೋಕಕ್ಕೆ ವಿನೀಶ್‌ ಪ್ರವೇಶ
ಮುಂಬಯಿ ಬಾಂಬ್‌ ಸ್ಫೋಟದ ರೂವಾರಿಗಳಾದ ಮೆಮೋನ್‌ ಬ್ರದರ್ ಎಂದು ಕುಖ್ಯಾತಿಯಲ್ಲಿದ್ದ ಸಲೀಂ ಪಾಷಾ ಮತ್ತು ಇಝಾಂ ಪಾಷ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ವಿನೇಶ್‌ ಪ್ರಮುಖ ಆರೋಪಿಯಾಗಿದ್ದ. ಈ ಮೂಲಕ ಪಾತಕ ಲೋಕಕ್ಕೆ ವಿನೀಶ್‌ ಪ್ರವೇಶಿಸಿದ್ದ. ಹೇಮಂತ್‌ ಪೂಜಾರಿ ಜತೆಗೆ ನಾಲ್ವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಸ್ಫೋಟ ನಡೆಸಿದರೆಂಬ ಕಾರಣಕ್ಕೆ  ನಾಲ್ವರನ್ನು ಹತ್ಯೆ ಮಾಡಲಾಗಿತ್ತು. ಅದಕ್ಕೂ ಮುನ್ನ  ಕಳವು ಪ್ರಕರಣದಲ್ಲಿ  ಜೈಲು ಸೇರಿ  ಹೊರಬರುತ್ತಿದ್ದ ವಿನೇಶ್‌, ಕ್ರಮೇಣ ಭೂಗತ ಜಗತ್ತಿನ ನಂಟನ್ನು ಬೆಳೆಸಿಕೊಂಡಿದ್ದ. 2011ರಲ್ಲಿ 3 ಕೋ. ರೂ. ಹವಾಲಾ ಹಣವನ್ನು ಪೂನಾ ಅಹಮದನಗರದಲ್ಲಿ  ಲೂಟಿಗೈದ ಪ್ರಕರಣ ಕೊನೆಯದ್ದಾಗಿತ್ತು. ಅದೇ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ವಿನೇಶ್‌, ಈಗ ಕೊಣಾಜೆ ಪೊಲೀಸರಿಂದ ಮುಂಬಯಿಯಲ್ಲಿ ಬಂಧನಕ್ಕೊಳಗಾಗಿದ್ದಾನೆ.

Advertisement

ಗೆಳೆಯ ಪೃಥ್ವಿಪಾಲ್‌ ಹತ್ಯೆಗೆ ಪ್ರತೀಕಾರ
ಮುಂಬಯಿಯಲ್ಲಿ ಶೂಟರ್‌ ಹೇಮಂತ್‌ ಪೂಜಾರಿ ಪರಿಚಯವಾಗಿ ಆತನ ಗ್ಯಾಂಗ್‌ಗೆ ಸೇರಿಕೊಂಡ ವಿನೇಶ್‌ ಶೆಟ್ಟಿ. 1998ರಲ್ಲಿ ಮಹಮದ್‌ ಜಿಂದಾಲ್‌ ಮತ್ತು ಸಲೀಂ ಕುರ್ಲಾ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾದ. 2002ರಲ್ಲಿ  ನಡೆದ ತನ್ನ ಗೆಳೆಯ ಪೃಥ್ವೀಪಾಲ್‌ ಹತ್ಯೆಗೆ ಪ್ರತೀಕಾರವಾಗಿ 2003ರಲ್ಲಿ ಬಂಟ್ವಾಳ ತಾಲೂಕಿನ ಮೂಳೂರು ಕ್ರಾಸ್‌ ಬಳಿ ಕಪ್ಪು ಕಲ್ಲುಕೋರೆ ಮಾಲಕ ವೇಣುಗೋಪಾಲ ನಾೖಕ್‌ ಮತ್ತು ಅವರ ಜೀಪ್‌ ಚಾಲಕ ಸಂತೋಷ್‌ನನ್ನು ಕೊಂದಿದ್ದ. ಆ ಪ್ರಕರಣದಲ್ಲಿ ಆತ ಪ್ರಥಮ ಆರೋಪಿ.

ಪೃಥ್ವಿಪಾಲ್‌ ಫ್ಲ್ಯಾಶ್‌ಬ್ಯಾಕ್‌
ಪಂಚಾಯತ್‌ ಸದಸ್ಯೆಯ ಪುತ್ರನಾದ ಪೃಥ್ವಿಪಾಲ್‌ ರೈ, ಕಾಲೇಜು ಮುಗಿಸಿ ಮುಂಬಯಿನಲ್ಲಿದ್ದ  ತಾಯಿಯ ಸೋದರ ಸಂಬಂಧಿ ತಿಮ್ಮಪ್ಪ ನಾೖಕ್‌ ಮತ್ತು ಅವರ ಸೋದರ ವೇಣುಗೋಪಾಲ ನಾೖಕ್‌ ಅವರಿಗೆ ಸೇರಿದ ಲೈವ್‌ ಬ್ಯಾಂಡ್‌ನ‌ಲ್ಲಿ ಕೆಲಸಕ್ಕೆ ಸೇರಿದ್ದ. ಬಾರ್‌ನಲ್ಲಿ  ಕಾರ್ಮಿಕರ ಮಧ್ಯೆ ನಡೆದ ಗಲಾಟೆಯಲ್ಲಿ ಓರ್ವನ ಹತ್ಯೆಯಾಗಿತ್ತು. ಬಾರ್‌ ಮಾಲಕನೇ ಕೊಲೆ ನಡೆಸಿದ್ದಾರೆಂಬ ಆರೋಪ ಬಂತು. ಆಗ ಕೊಲೆ ಆರೋಪವನ್ನು ಪೃಥ್ವಿಪಾಲ್‌ ಒಪ್ಪಿಕೊಂಡಲ್ಲಿ, ಮಂಗಳೂರಿನಲ್ಲಿ 2 ಬಸ್ಸುಗಳ ಪರ್ಮಿಟ್‌ ಮತ್ತು ಹೊಟೇಲ್‌ ನಿರ್ಮಿಸಿ ಕೊಡುವುದಾಗಿ ನಾೖಕ್‌ ಸಹೋದರರು ಭರವಸೆ ಕೊಟ್ಟರು. ಜತೆಗೆ ಮನೆಯ ಖರ್ಚನ್ನೂ ನೋಡಿ ಕೊಳ್ಳುವುದಾಗಿ ತಿಳಿಸಿದ್ದರು. ಆರ್ಥಿಕವಾಗಿ ಸಬಲ ನಲ್ಲದ ಪೃಥ್ವಿಪಾಲ್‌ ಈ ಮಾತು ನಂಬಿ ತಾನೇ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡು ಮುಂಬಯಿಯಲ್ಲಿ ಜೈಲು ಪಾಲಾಗಿದ್ದ. ಆದರೆ 1 ವರ್ಷ ಕಳೆದರೂ ಈತನನ್ನು ಮಾತನಾಡಿಸುವ, ಮನೆ ಮಂದಿಗೆ ಸಹಾಯ ಮಾಡುವ ಬಗ್ಗೆ ನಾೖಕ್‌ ಸಹೋದರರು ಮನಸ್ಸು ಮಾಡಲಿಲ್ಲ. ಇದರಿಂದ ನೊಂದಿದ್ದ  ಪೃಥ್ವಿಪಾಲ್‌, ಜೈಲಿನಲ್ಲಿ  ಪರಿಚಯವಾಗಿದ್ದ  ಛೋಟಾ ರಾಜನ್‌ ಸಹಚರ ವಿನೇಶ್‌ ಶೆಟ್ಟಿ ಬಳಿ ಅಳಲು ತೋಡಿಕೊಂಡಿದ್ದ. ಬಳಿಕ ವಿನೇಶ್‌ ಮತ್ತು ಪೃಥ್ವಿಪಾಲ್‌ ತುಂಬಾ ಆಪ್ತರಾಗಿದ್ದರು. ವಿನೇಶ್‌ ಶೆಟ್ಟಿ ಜೈಲಿನಿಂದ ಹೊರ ಬಂದ ಬಳಿಕ ಪೃಥ್ವಿಪಾಲ್‌ ಬಿಡುಗಡೆಗೊಳ್ಳಲು ಸಹಾಯ ಮಾಡಿದ್ದ.

ಹೆಚ್ಚಿದ ಸೇಡು 
ಊರಿಗೆ ತಲುಪಿದ ಪೃಥ್ವಿಪಾಲ್‌ ಕುಡಿತದ ಚಟವನ್ನು ಮೈಗೂಡಿಸಿಕೊಂಡ. ಮೋಸಕ್ಕೊಳಗಾದ ವ್ಯಥೆಯಿಂದ ಹೊರಬರಲಾರದೇ ಜುಗಾರಿ ಮತ್ತು ಕುಡಿತದಲ್ಲಿ ಮುಳುಗಿ ಹೋದ. ಅದೇ ವೇಳೆ  ವೇಣುಗೋಪಾಲ ನಾೖಕ್‌ ಮುಡಿಪು ಕ್ರಾಸ್‌ ಸಮೀಪ ಬೃಹತ್‌ ಮನೆಯನ್ನು ಕಟ್ಟಿಸಿದ್ದರು. ಗೃಹಪ್ರವೇಶದ ದಿನ ಪೃಥ್ವಿಪಾಲ್‌ ಮನೆ ಆವರಣಕ್ಕೆ ನುಗ್ಗಿ ಕಿಟಕಿ ಗಾಜುಗಳನ್ನು ಪುಡಿ ಮಾಡಿದ್ದಲ್ಲದೆ, ಎದುರು ನಿಲ್ಲಿಸಿದ್ದ ಕಾರಿನ ಗಾಜುಗಳನ್ನು ಪುಡಿಗೈದಿದ್ದ. ಇದರಿಂದ ಬೆಚ್ಚಿ ಬಿದ್ದಿದ್ದ ವೇಣುಗೋಪಾಲ್‌ ನಾೖಕ್‌ ಮನೆ ಮಂದಿ ಇಡೀ ರಾತ್ರಿ ಮನೆಯಿಂದ ಹೊರಗೆ ಬಾರದೆ ಒಳಗೇ ಕುಳಿತಿದ್ದರು. ಬಳಿಕ ವೇಣುಗೋಪಾಲ ನಾೖಕ್‌ ಪೃಥ್ವಿಪಾಲ್‌ ಕೊಲೆಗೆ ಸ್ಕೆಚ್‌ ಹಾಕಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next