Advertisement

ದೇವಧರ್‌ ಟ್ರೋಫಿ ಫೈನಲ್‌: ಅಜೇಯ ದಕ್ಷಿಣ ವಲಯಕ್ಕೆ ಪ್ರಶಸ್ತಿ ಧ್ಯಾನ

11:55 PM Aug 02, 2023 | Team Udayavani |

ಪುದುಚೇರಿ: ಬಲಿಷ್ಠ ತಂಡವಾದ ದಕ್ಷಿಣ ವಲಯ 3 ವಾರಗಳ ಅಂತರದಲ್ಲಿ 2ನೇ ದೇಶಿ ಕ್ರಿಕೆಟ್‌ ಪಂದ್ಯಾವಳಿ ಪ್ರಶಸ್ತಿಯನ್ನು ಗೆಲ್ಲುವ ಯೋಜನೆಯಲ್ಲಿದೆ. ಗುರುವಾರ ಇಲ್ಲಿ ಪೂರ್ವ ವಲಯದ ವಿರುದ್ಧ ದೇವಧರ್‌ ಟ್ರೋಫಿ ಏಕದಿನ ಕ್ರಿಕೆಟ್‌ ಟೂರ್ನಿಯ ಫೈನಲ್‌ ಏರ್ಪಡಲಿದ್ದು, ಮಾಯಾಂಕ್‌ ಅಗರ್ವಾಲ್‌ ನೇತೃತ್ವದ ಅಜೇಯ ದಕ್ಷಿಣ ವಲಯ ನೆಚ್ಚಿನ ತಂಡವಾಗಿ ಗುರುತಿಸಲ್ಪಟ್ಟಿದೆ.

Advertisement

ಗೆದ್ದರೆ ದಕ್ಷಿಣ ವಲಯ 9ನೇ ಸಲ ದೇವಧರ್‌ ಟ್ರೋಫಿ ಚಾಂಪಿಯನ್‌ ಆಗಲಿದೆ. ಪೂರ್ವ ವಲಯ ಕೂಡ ಸಡ್ಡು ಹೊಡೆದು ನಿಂತಿದ್ದು, 6ನೇ ಬಾರಿಗೆ ದೇವಧರ್‌ ಟ್ರೋಫಿ ಎತ್ತಲು ಹವಣಿಸುತ್ತಿದೆ. ಲೀಗ್‌ ಹಂತದಲ್ಲಿ ಇತ್ತಂಡಗಳು ಮುಖಾಮುಖೀಯಾಗಿದ್ದಾಗ ದಕ್ಷಿಣ ವಲಯ 5 ವಿಕೆಟ್‌ಗಳ ಜಯ ಸಾಧಿಸಿತ್ತು. ದಕ್ಷಿಣ ವಲಯ ಕಳೆದ ತಿಂಗಳಷ್ಟೇ ಬೆಂಗಳೂರಿನಲ್ಲಿ ನಡೆದ ದುಲೀಪ್‌ ಟ್ರೋಫಿ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಆಗ ಹನುಮ ವಿಹಾರಿ ತಂಡದ ನಾಯಕರಾಗಿದ್ದರು.

ದಕ್ಷಿಣ ವಲಯ ಪರ ನಾಯಕ ಮಾಯಾಂಕ್‌ ಅಗರ್ವಾಲ್‌ ಮತ್ತು ಆರಂಭಕಾರ ರೋಹನ್‌ ಕುನ್ನುಮ್ಮಾಳ್‌ ಸ್ಥಿರವಾದ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಕ್ರಮವಾಗಿ 278 ಹಾಗೂ 204 ರನ್‌ ಬಾರಿಸಿದ ಸಾಧನೆ ಇವರದು. ತಮಿಳುನಾಡಿನ ಯುವ ಆಟಗಾರ ಬಿ. ಸಾಯಿ ಸುದರ್ಶನ್‌ ಕೇವಲ 2 ಪಂದ್ಯಗಳಿಂದ 185 ರನ್‌ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ ಒಂದು ಅರ್ಧ ಶತಕ ಸೇರಿದೆ.

ದಕ್ಷಿಣ ವಲಯದ ಬೌಲಿಂಗ್‌ ಹೆಚ್ಚು ಘಾತಕವಾಗಿದೆ. ಪೇಸರ್‌ ವಿದ್ವತ್‌ ಕಾವೇರಪ್ಪ, ಎಡಗೈ ಸ್ಪಿನ್ನರ್‌ ಆರ್‌. ಸಾಯಿ ಕಿಶೋರ್‌ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದಾರೆ. ಕ್ರಮವಾಗಿ 11 ಹಾಗೂ 10 ವಿಕೆಟ್‌ ಉರುಳಿಸಿದ ಸಾಧನೆ ಇವರದು. ವಾಸುಕಿ ಕೌಶಿಕ್‌ (7 ವಿಕೆಟ್‌), ವೈಶಾಖ್‌ ವಿಜಯ್‌ ಕುಮಾರ್‌ (6 ವಿಕೆಟ್‌) ಕೂಡ ಅಪಾಯಕಾರಿಗಳಾಗಿದ್ದಾರೆ.

ಪರಾಗ್‌ ಆಲ್‌ರೌಂಡ್‌ ಶೋ
ಪೂರ್ವ ವಲಯ ರಿಯಾನ್‌ ಪರಾಗ್‌ ಅವರ ಆಲ್‌ರೌಂಡ್‌ ಪರಾಕ್ರಮವನ್ನು ಹೆಚ್ಚು ನೆಚ್ಚಿಕೊಂಡಿದೆ. 21 ವರ್ಷದ ಈ ಅಸ್ಸಾಮ್‌ ಆಟಗಾರ ಕೇವಲ 4 ಪಂದ್ಯ ಗಳಿಂದ 259 ರನ್‌ ಬಾರಿಸಿದ್ದಾರೆ. ಇದರಲ್ಲಿ 2 ಸ್ಫೋಟಕ ಶತಕಗಳು ಸೇರಿವೆ. ಆದರೆ ದಕ್ಷಿಣ ವಲಯದೆದುರಿನ ಲೀಗ್‌ ಪಂದ್ಯದಲ್ಲಿ ಪರಾಗ್‌ ಆಟ ನಡೆದಿರಲಿಲ್ಲ.

Advertisement

ಪೂರ್ವದ ಬೌಲಿಂಗ್‌ ವಿಭಾಗದಲ್ಲಿ ಸ್ಪಿನ್ನರ್‌ಗಳು ಮೇಲುಗೈ ಸಾಧಿಸಿದ್ದಾರೆ. ಎಡಗೈ ಸ್ಪಿನ್ನರ್‌ ಶಾಬಾಜ್‌ ಅಹ್ಮದ್‌ (10), ಲೆಗ್‌ಸ್ಪಿನ್ನರ್‌ ರಿಯಾನ್‌ ಪರಾಗ್‌ (9) ಜತೆಗೆ ಪೇಸ್‌ ಬೌಲರ್‌ ಮಣಿಶಂಕರ್‌ ಮುರುಗನ್‌ (8) ಕೂಡ ಮಿಂಚಿದ್ದಾರೆ. ಪಂದ್ಯ ಅಪರಾಹ್ನ 1.30ಕ್ಕೆ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next