Advertisement
ಕಬ್ಬಿನಾಲೆ ಕೊರ್ತಾಬೈಲ್ ಕೃಷಿಕ ಮುತ್ತಾಗೌಡ ಅವರ ತೋಟಕ್ಕೆ ನಾಲ್ಕು ದಿನಗಳ ಹಿಂದೆ ಒಂಟಿ ಸಲಗ ದಾಳಿ ನಡೆಸಿತ್ತು. ತೋಟದ 20ಕ್ಕೂ ಹೆಚ್ಚು ಅಡಿಕೆ ಮರಗಳನ್ನು ಹಾಳುಗೆಡವಿತ್ತು. ಅದಕ್ಕೂ ಮೊದಲು ನೆಲ್ಲಿಕಟ್ಟೆ ಕೆದ್ದಲಮಕ್ಕಿ ಉಷಾ ಶೆಟ್ಟಿ ಅವರ ಹಲಸು ಹಾಗೂ ಅಡಿಕೆ ಮರಕ್ಕೆ ಹಾನಿ ಮಾಡಿತ್ತು. ಬಿತ್ತನೆ ಮಾಡಿದ್ದ ಗದ್ದೆಯಲ್ಲೂ ಸಂಚರಿಸಿ ಹಾನಿ ಮಾಡಿತ್ತು. ಬೊಬ್ಬರ್‌ಬೆಟ್ಟು ಸುಬ್ರಾಯ ಅವರು ಕೃಷಿ ಭೂಮಿಯಲ್ಲಿ ಅಳವಡಿಸಿದ್ದ ಪೈಪ್ ಲೈನ್ ಅನ್ನು ಹಾಳುಗೆಡವಿತ್ತು. ಹಲಸಿನ ಮರದ ಗೆಲ್ಲುಗಳನ್ನು ಎಳೆದು ಹಾಕಿತ್ತು. ಇಲ್ಲಿನ ನಿವಾಸಿ ಮೀನಾ ಪೂಜಾರ್ತಿಯ ಮನೆ ಬಳಿ ಆನೆ ರಾತ್ರಿ ಓಡಾಟ ನಡೆಸಿ ಭೀತಿ ಹುಟ್ಟಿಸಿತ್ತು.
ಕಬ್ಬಿನಾಲೆ ಪರಿಸರದ ಜಲಪಾತಕ್ಕೆ ವಿವಿಧೆಡೆಯಿಂದ ಚಾರಣಿಗರು ಬರುತ್ತಾರೆ. ಚಾರಣಿಗರು ನಿಷೇಧಿತ ಪ್ರದೇಶದಲ್ಲಿ ಓಡಾಟದಂತೆ ಅರಣ್ಯಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಬ್ಬಿನಾಲೆ, ಬಚ್ಚಾಪು ಕಡೆಗೆ ತೆರಳುವ ಜಂಕ್ಷನ್‌ನಲ್ಲಿ ಅರಣ್ಯ ಇಲಾಖೆಯಿಂದ ಆನೆಗಳ ಬಗ್ಗೆ ಎಚ್ಚರಿಕೆ ಫಲಕ ಅಳವಡಿಸಲಾಗಿದೆ. ದಟ್ಟ ಕಾಡಿನೊಳಗೆ ಆನೆ ಸಂಚಾರ
ಪರ್ವತ ಶ್ರೇಣಿ ವ್ಯಾಪ್ತಿಯ ಸುಬ್ರಹ್ಮಣ್ಯ, ಬೆಳ್ತಂಗಡಿ ಭಾಗದಲ್ಲಿ ಕಾಡಾನೆ ಹಾವಳಿ ಹೆಚ್ಚಿದೆ. ಇದೇ ಭಾಗದಿಂದ ಘಾಟಿ ದಾರಿಯಲ್ಲಿ ಆನೆಗಳು ನಾರಾವಿ, ನೂರಾಳ್‌ಬೆಟ್ಟು, ಮಾಳ ಘಾಟಿ, ಗೇಮ್ ರೋಡ್ ಮೂಲಕ ವಾಲಿಕುಂಜ ಆಗುಂಬೆ, ಹೊಸನಗರ ಪ್ರದೇಶಗಳಲ್ಲಿ ಸಂಚರಿಸುವ ಸಾಧ್ಯತೆ ಹೆಚ್ಚಿದೆ. ಕಬ್ಬಿನಾಲೆ ಭಾಗದಲ್ಲಿ ಅಭಯಾರಣ್ಯವಿರುವುದರಿಂದ ಬೈನೆ ಮರ ಇತ್ಯಾದಿಗಳು ಹೆಚ್ಚಿರುವ ಕಾರಣಕ್ಕೆ ಇತ್ತ ಕಡೆ ಆನೆಗಳು ತೆರಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.