Advertisement

ತಾಲೂಕಾದ್ಯಂತ ಡೆಂಘೀ, ವೈರಲ್‌ ಫೀವರ್‌

09:34 PM Jul 17, 2019 | Lakshmi GovindaRaj |

ಸಂತೆಮರಹಳ್ಳಿ: ಯಳಂದೂರು ಪಟ್ಟಣ ಸೇರಿದಂತೆ ತಾಲೂಕಾದ್ಯಂತ ಡೆಂಘೀ ಹಾಗೂ ವೈರಾಣು ಜ್ವರ ಕಾಣಿಸಿಕೊಂಡಿದ್ದು ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದೆ. ಇತ್ತ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಡ್‌ಗಳು ಖಾಲಿ ಇಲ್ಲದೆ ರೋಗಿಗಳು ಖಾಸಗಿ ಆಸ್ಪತ್ರೆ ಅಥವಾ ಚಾಮರಾಜನಗರ, ಕೊಳ್ಳೇಗಾಲಕ್ಕೆ ತೆರಳಿ ಔಷಧೋಪಚಾರ ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.

Advertisement

ರೋಗಿಗಳ ಸಂಖ್ಯೆ ಉಲ್ಬಣ: ಪಟ್ಟಣದ ಬಳೇಪೇಟೆಯ 2,4,9,10 ಹಾಗೂ 11 ನೇ ವಾರ್ಡಿನಲ್ಲಿ ಜ್ವರ ಪೀಡಿತರ ಸಂಖ್ಯೆ ಅತ್ಯಧಿಕವಾಗಿದೆ. ಇದರೊಂದಿಗೆ ತಾಲೂಕಿನ ಕಂದಹಳ್ಳಿ, ವೈ.ಕೆ. ಮೋಳೆ, ಯರಿಯೂರು, ಹೊನ್ನೂರು, ದುಗ್ಗಹಟ್ಟಿ, ಮೆಳ್ಳಹಳ್ಳಿ, ಉಪ್ಪಿನಮೋಳೆ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಈ ಬಾಧೆ ಕಾಣಿಸಿಕೊಂಡಿದೆ.

ಶುಚಿತ್ವ ಮರೀಚಿಕೆ: ಇಲ್ಲಿರುವ ಚರಂಡಿಯಲ್ಲಿ ನೀರು ಮಡುಗಟ್ಟಿ ನಿಂತಿದೆ. ಎಲ್ಲೆಲ್ಲೂ ಅನೈರ್ಮಲ್ಯ ತಾಂಡವವಾಡುತ್ತಿದೆ. ಇತ್ತಿ ಚೆಗೆ ಸುರಿದ ಮಳೆಯಿಂದ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದು ಮನೆಮಂದಿಯಲ್ಲಾ ಜ್ವರ ಬಾಧೆಯಿಂದ ಪರಿತಪಿಸುವ ಸ್ಥಿತಿ ಇದೆ. ಸಂಬಂಧಪಟ್ಟ ಗ್ರಾಮ ಹಾಗೂ ಪಟ್ಟಣ ಪಂಚಾಯಿತಿಯವರು ಸ್ವತ್ಛತೆಗೆ ಹೆಚ್ಚಿನ ಮಹತ್ವ ನೀಡಿಲ್ಲದಿರುವುದೇ ರೋಗ ಉಲ್ಬಣಗೊಳ್ಳಲು ಕಾರಣ ಎಂಬುದು ಸಾರ್ವಜನಿಕರ ದೂರು.

ಕೆಲ ಬೀದಿಗಳಲ್ಲಿ ಚರಂಡಿಯೇ ಇಲ್ಲ: 10ನೇ ವಾರ್ಡಿನ ದಲಿತರ ಕೆಲ ಬೀದಿಗಳಲ್ಲಿ ಚರಂಡಿಯೇ ಇಲ್ಲ. ಕಲುಷಿತ ನೀರು ಮಡುಗಟ್ಟಿ ನಿಂತಿರುವುದರಿಂದ ಇದು ಸೊಳ್ಳೆಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಲ್ಲಿಗೆ ಬ್ಲೀಚಿಂಗ್‌ ಪೌಡರ್‌ ಸಿಂಪಡಣೆ ಮಾಡಲಾಗಿದೆ. ಇದರಿಂದ ಸೊಳ್ಳೆಗಳು ಸಾಯುವುದಿಲ್ಲ. ಪಕ್ಕದಲ್ಲೇ ಇರುವ ದೊಡ್ಡ ಚರಂಡಿಯ ಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು. ಫಾಗಿಂಗ್‌ ಯಂತ್ರದ ಮೂಲಕ ಔಷಧಿ ಸಿಂಪಡಣೆ ಮಾಡಬೇಕು ಎಂದು ಇಲ್ಲಿನ ವಾಸಿಗಳಾದ ಮಮತಾ, ಮರಯ್ಯ, ರಾಜು ಅವರ ದೂರಾಗಿದೆ.

ಆಸ್ಪತ್ರೆಯಲ್ಲಿ ಬೆಡ್‌ಗಳೇ ಇಲ್ಲ: ಯಳಂದೂರು ತಾಲೂಕು ಆಸ್ಪತ್ರೆಯಲ್ಲಿ ಕೇವಲ 30 ಹಾಸಿಗೆಗಳಿವೆ. ಆದರೆ ದಿನನಿತ್ಯ ಈ ರೋಗಿಗಳ ಸಂಖ್ಯೆಯೇ ಅಧಿಕವಾಗಿರುತ್ತದೆ. ಪ್ರತಿನಿತ್ಯ ಹತ್ತಾರು ಜನರ ರಕ್ತ ಪರೀಕ್ಷೆಯಲ್ಲಿ ಡೆಂಘೀ ಅಥವಾ ವೈರಾಣು ಜ್ವರ ಖಾತ್ರಿಯಾಗುತ್ತಿದೆ.

Advertisement

ಆದರೆ ಇಲ್ಲಿ ಬೆಡ್‌ಗಳು ಇಲ್ಲದ ಕಾರಣ ವೈದ್ಯರೂ ಸಹ ಕೈಚೆಲ್ಲಿ ಕೂರುವ ಸ್ಥಿತಿ ಇದೆ. ಇದರೊಂದಿಗೆ ಇತರೆ ಶಸ್ತ್ರ ಚಿಕಿತ್ಸೆಯ ರೋಗಿಗಳು ಒಳರೋಗಿಗಳಾಗಿ ಚಿಕಿತ್ಸೆ ಪಡೆಯುವುದರಿಂದ ಇಂತಹ ತುರ್ತು ಚಿಕಿತ್ಸೆ ಅಗತ್ಯ ಇರುವ ರೋಗಿಗಳಿಗೆ ತೊಂದರೆಯಾಗುತ್ತಿದೆ.

ತುರ್ತುಚಿಕಿತ್ಸಾ ವಿಭಾಗದ ಬೆಡ್‌ಗಳನ್ನೂ ಸಹ ಇದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಆದರೂ ಬೆಡ್‌ಖಾಲಿ ಇಲ್ಲದೆ ಅನಿವಾರ್ಯವಾಗಿ ದುಬಾರಿ ಹಣ ಪಾವತಿಸಿ ಖಾಸಗಿ ಆಸ್ಪತ್ರೆಯಲ್ಲಿ ಅಥವಾ ದೂರದ ಚಾಮರಾಜನಗರ, ಕೊಳ್ಳೇಗಾಲದಲ್ಲಿ ಚಿಕಿತ್ಸೆ ಪಡೆಯುವ ಸ್ಥಿತಿ ಇದೆ ಎನ್ನುತ್ತಾರೆ ಡೆಂಘೀ ಜ್ವರ ಬಾಧಿತ ರೋಗಿ ಬಳೇಪೇಟೆ ಶ್ರೀಕಂಠಸ್ವಾಮಿ.

ಡೆಂಘೀ ಜ್ವರ ದಿನೇದಿನೆ ಉಲ್ಬಣಿಸುತ್ತಿದೆ. ಆದರೆ ಆರೊಗ್ಯ ಇಲಾಖೆ, ಪಟ್ಟಣ ಪಂಚಾಯಿತಿ ಹಾಗೂ ಜನಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿಲ್ಲ. ಇದನ್ನು ಹತೋಟಿಗೆ ತರುವಲ್ಲಿ ಕ್ರಮ ವಹಿಸುತ್ತಿಲ್ಲ.
-ಲಿಂಗರಾಜಮೂರ್ತಿ, ರೋಗಿ

ನಾವು ಈಗಾಗಲೇ ಹಲವು ಗ್ರಾಮಗಳಿಗೆ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳ ಹರಡುವಿಕೆ. ಇದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಮಾಹಿತಿ ಮೂಡಿಸುತ್ತಿದ್ದೇವೆ. ಕುಡಿಯುವ ನೀರಿನ ತೊಂಬೆಗಳನ್ನು ಶುದ್ಧಗೊಳಿಸಿ, ನೀರು ನಿಲ್ಲದಂತೆ ಮಾಡುವ ಕೆಲಸವನ್ನೂ ಮಾಡಲಾಗುತ್ತಿದೆ. ಅಲ್ಲದೆ ಇಲಾಖೆಯಿಂದ ಶೀಘ್ರದಲ್ಲೇ ತಹಶೀಲ್ದಾರ್‌ ನೇತೃತ್ವದಲ್ಲಿ ಸಭೆ ನಡೆಸಿ ಜ್ವರ ತಡೆಗಟ್ಟಲು ಏನು ಕ್ರಮ ವಹಿಸಬಹುದು ಎಂಬುದನ್ನು ಚರ್ಚಿಸಿ ಇನ್ನಷ್ಟು ಕ್ರಮಗಳನ್ನು ವಹಿಸಲಾಗುವುದು.
-ಡಾ.ಮಂಜುನಾಥ್‌, ತಾಲೂಕು ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next