Advertisement

ಡೆಂಗ್ಯೂ ಬಾಧೆ ತೀವ್ರ: 12 ದಿನಗಳಲ್ಲಿ 101 ಮಂದಿಗೆ ಸೋಂಕು, ಓರ್ವ ಸಾವು

06:50 AM May 14, 2018 | Team Udayavani |

ಕಾಸರಗೋಡು: ಹವಾಮಾನ ವ್ಯತ್ಯಯ ಪರಿಣಾಮವಾಗಿ ಕಾಸರಗೋಡು ಜಿಲ್ಲೆಯಲ್ಲಿ ಮಾರಕ ಸಾಂಕ್ರಾಮಿಕ ರೋಗ ಡೆಂಗ್ಯೂ ವ್ಯಾಪಿಸುತ್ತಿದೆ. ಕಳೆದ 12 ದಿನಗಳಲ್ಲಿ 101 ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ. ಶನಿವಾರ ಡೆಂಗ್ಯೂಗೆ ಯುವಕನೋರ್ವ ಬಲಿಯಾಗಿದ್ದಾನೆ.

Advertisement

ಕಾಸರಗೋಡು ಜಿಲ್ಲೆಯಲ್ಲಿ ಇದೇ ಪ್ರಥಮ ಬಾರಿಗೆ ಮೇ ತಿಂಗಳಲ್ಲಿ ಇಷ್ಟು ಪ್ರಮಾಣದಲ್ಲಿ ಡೆಂಗ್ಯೂ ವರದಿಯಾಗಿದ್ದು, ಪ್ರಸ್ತುತ ವರ್ಷ ಜನವರಿ ತಿಂಗಳಿಂದ ಈ ವರೆಗೆ 211 ಮಂದಿಗೆ ಡೆಂಗ್ಯೂ ಖಾತರಿಪಡಿಸಲಾಗಿದೆ. ಜನವರಿಯಲ್ಲಿ 49 ಮಂದಿಗೆ ಡೆಂಗ್ಯೂ ಕಾಣಿಸಿಕೊಂಡಿತ್ತು. ಫೆಬ್ರವರಿಯಲ್ಲಿ 34, ಮಾರ್ಚ್‌ ತಿಂಗಳಲ್ಲಿ 7 ಮಂದಿಗೆ ಡೆಂಗ್ಯೂ ಪತ್ತೆಯಾಗಿತ್ತು.

ಜಿಲ್ಲೆಯ ಮಲೆನಾಡು ಪ್ರದೇಶದ ಗ್ರಾಮ ಪಂಚಾಯತ್‌ಗಳಲ್ಲಿ ಡೆಂಗ್ಯೂ ಭೀತಿ ಆವರಿಸಿದೆ. ಕಳೆದ ವರ್ಷ ಮೇ ತಿಂಗಳಲ್ಲಿ 36 ಮಂದಿಗೆ ಡೆಂಗ್ಯೂ ಬಾಧಿಸಿತ್ತು. ಕಟ್ಟಿ ನಿಲ್ಲುವ ನೀರಿನಲ್ಲಿ ಡೆಂಗ್ಯೂ ಹರಡುವ ಈಡಿಸ್‌ ಸೊಳ್ಳೆ ಮೊಟ್ಟೆ ಇಡುತ್ತದೆ. ಮಲೆನಾಡು ಪ್ರದೇಶದ ತೋಟಗಳಲ್ಲಿ ಮೊದಲಾದೆಡೆಗಳಲ್ಲಿ ನೀರು ಕಟ್ಟಿ ನಿಲ್ಲುತ್ತಿದ್ದು, ಇದರಿಂದ ಈಡೀಸ್‌ ಸೊಳ್ಳೆ ವೃದ್ಧಿಯಾಗಿ ಡೆಂಗ್ಯೂ ಹರಡುತ್ತಿದೆ. ಡೆಂಗ್ಯೂ ಕಾಣಿಸಿಕೊಂಡಲ್ಲಿ ಉತ್ತಮ ವಿಶ್ರಾಂತಿ ಮತ್ತು ಚಿಕಿತ್ಸೆ ತತ್‌ಕ್ಷಣ ಲಭಿಸಬೇಕೆಂದು ವೈದ್ಯರು ಹೇಳುತ್ತಿದ್ದಾರೆ.

ಸೌಲಭ್ಯ ಕೊರತೆ
ಡೆಂಗ್ಯೂ ಜ್ವರ ಪ್ರಾಥಮಿಕ ಹಂತದಲ್ಲಿದ್ದರೆ ಗುಣಪಡಿಸುವ ಸೌಕರ್ಯ ಕಾಂಞಂಗಾಡ್‌ನ‌ಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲೂ, ಕಾಸರಗೋಡಿನಲ್ಲಿರುವ ಜನರಲ್‌ ಆಸ್ಪತ್ರೆಯಲ್ಲೂ ಇದೆ. ಆದರೆ ಡೆಂಗ್ಯೂ ತೀವ್ರ ಸ್ವರೂಪ ಪಡೆದುಕೊಂಡಿದ್ದಲ್ಲಿ ಅಗತ್ಯದ ಸೌಲಭ್ಯ ಕಾಸರಗೋಡಿನಲ್ಲಾಗಲಿ, ಕಾಂಞಂಗಾಡ್‌ನ‌ಲ್ಲಾಗಲೀಇಲ್ಲ. ಇಂತಹ ಸಂದರ್ಭದಲ್ಲಿ ಮಂಗಳೂರಿನ ಆಸ್ಪತ್ರೆಗಳನ್ನೇ ಆಶ್ರಯಿಸಬೇಕಾಗಿದೆ. ಅಥವಾ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ಆಶ್ರಯಿಸಬೇಕಾದ ದುಃಸ್ಥಿತಿಯಿದೆ. ಜಿಲ್ಲೆಯಲ್ಲಿ ಡೆಂಗ್ಯೂ ಪತ್ತೆಹಚ್ಚುವ ಸರಕಾರಿ ಮಟ್ಟದ ಅತ್ಯಾಧುನಿಕ ಸುಸಜ್ಜಿತ ಲ್ಯಾಬ್‌ ಇಲ್ಲ.

ಜ್ವರ ಕಂಡು ಬಂದಲ್ಲಿ ಡೆಂಗ್ಯೂ ಜ್ವರವೇ ಎಂದು ಖಾತರಿ ಪಡಿಸಲು ಕಾಂಞಂಗಾಡ್‌ ಜಿಲ್ಲಾ ಆಸ್ಪತ್ರೆಯಲ್ಲೂ, ಪೂಡಂಕಲ್ಲು ಸರಕಾರಿ ಆಸ್ಪತ್ರೆಯಲ್ಲೂ ತಪಾಸಣೆ ಮಾಡಬಹುದು ಎಂದು ವೈದ್ಯರು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಸುಮಾರು 1000 ರೂ. ಶುಲ್ಕ ವಸೂಲಿ ಮಾಡುತ್ತಿದ್ದಾರೆ. ಸರಕಾರಿ ಆಸ್ಪತ್ರೆಯಲ್ಲಿ ಸಂಪೂರ್ಣವಾಗಿಯೂ ಉಚಿತವಾಗಿದೆ.

Advertisement

ನಿಯಂತ್ರಣಕ್ಕೆ ಕ್ರಮ
ಜ್ವರ ಕಂಡುಬಂದಲ್ಲಿ ತತ್‌ಕ್ಷಣ ಚಿಕಿತ್ಸೆ ಪಡೆಯಬೇಕೆಂದು ಜಿಲ್ಲಾ ಮೆಡಿಕಲ್‌ ಆಫೀಸರ್‌ ಎ.ಪಿ.ದಿನೇಶ್‌ ಕುಮಾರ್‌ ಮತ್ತು ಸಾಂಕ್ರಾಮಿಕ ರೋಗ್ಯ ನಿಯಂತ್ರಣ ಘಟಕದ ಡೆಪ್ಯುಟಿ ಜಿಲ್ಲಾ ಮೆಡಿಕಲ್‌ ಆಫೀಸರ್‌ ಇ.ಮೋಹನನ್‌ ಸಂಯುಕ್ತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಡೆಂಗ್ಯೂ ಖಾತರಿಯಾದಲ್ಲಿ ವಹಿಸಬೇಕಾದ ಜಾಗ್ರತೆ 
ಡೆಂಗ್ಯೂ ಜ್ವರ ಕಾಣಿಸಿಕೊಂಡಲ್ಲಿ ಸ್ವತಃ ಚಿಕಿತ್ಸೆ ಮಾಡ ಬಾರದು. ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯಬೇಕು. ಯಾವುದೇ ನೋವು ನಿವಾರಕ ಔಷಧ ಸೇವಿಸಬಾರದು. ಡೆಂಗ್ಯೂ ಜ್ವರದ ಪ್ರಾಥಮಿಕ ಹಂತದಲ್ಲಿ ಮೂರು ದಿನಗಳ ವರೆಗೆ ಜ್ವರ ಇರುತ್ತದೆ. ಮುಂದಿನ ಮೂರು ದಿನ ಜ್ವರ ಇರಬೇಕೆಂದಿಲ್ಲ. ಈ ಕಾರಣದಿಂದ ಡೆಂಗ್ಯೂ ಅಪಾಯಕಾರಿ.ಇದರಿಂದಾಗಿ ಜ್ವರ ಕಂಡುಬಂದ ತತ್‌ಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ರೋಗಿಗೆ ಸಂಪೂರ್ಣ ವಿಶ್ರಾಂತಿ ಬೇಕು. ಹೆಚ್ಚು ನೀರು ಸೇವಿಸಬೇಕು. ಪೌಷ್ಠಿಕ ಆಹಾರವನ್ನು ಮಿತವಾಗಿ ಸೇವಿಸಬೇಕು. ಡೆಂಗ್ಯೂ ಖಾತರಿಯಾದಲ್ಲಿ 10 ದಿನಗಳ ವರೆಗೆ ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕು.

ವೆಳ್ಳರಿಕುಂಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಮೂವರಿಗೆ ಮತ್ತು ನರ್ಕಿಲಕ್ಕಾಡ್‌ನ‌ಲ್ಲಿ ಇಬ್ಬರಿಗೆ ಡೆಂಗ್ಯೂ ಖಾತರಿಗೊಳಿಸಲಾಗಿದೆ. ಡೆಂಗ್ಯೂ ಜ್ವರದಿಂದ ಅಸ್ವಸ್ಥರಾಗಿದ್ದ ಇಬ್ಬರನ್ನು ಪುಡುಂಗಲ್ಲು ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ವೆಳ್ಳರಿಕುಂಡುನಲ್ಲಿ ಶುಕ್ರವಾರ 10 ಮಂದಿಗೆ ಡೆಂಗ್ಯೂ ಖಾತರಿಪಡಿಸಲಾಗಿದೆ.

ಪರಿಶಿಷ್ಟ ವರ್ಗ ವಿಭಾಗದವರು ಹೆಚ್ಚಾಗಿ ವಾಸ್ತವ್ಯ ಹೂಡಿರುವ ಕುಳಿಮಾಡ್‌, ಕಡವತ್ತ್ಮುಂಡ, ಕೊನ್ನಕ್ಕಾಡ್‌, ಕಾರಿಯೊಟ್ಟುಚ್ಚಾಲ್‌, ಚುಳ್ಳಿ, ಕೊಳತ್ತುಕ್ಕಾಡ್‌, ವಿಲಂಗ್‌, ಪುಲಿಮಾಡ್‌, ಪುಲ್ಲಟಿ, ಎಡಕಾನಂ, ಪನಿತ್ತಡಂ, ಮುಂಡ್ಯಾನಂ, ಅಟ್ಟಕಂಡಂ, ಬಾನಂ ಮೊದಲಾದ ಪ್ರದೇಶಗಳಲ್ಲಿ ಡೆಂಗ್ಯೂ ಹೆಚ್ಚುತ್ತಿದೆ. ಇವುಗಳೆಲ್ಲ ಬಳಾಲ್‌, ವೆಸ್ಟ್‌ ಎಳೇರಿ, ಕಿನಾನೂರು ಕರಿಂದಳಂ, ಕೋಡೋಂ ಬೇಳೂರು ಗ್ರಾ. ಪಂ.ವ್ಯಾಪ್ತಿಯಲ್ಲಿವೆ.

ಯುವಕನ ಸಾವು
ಕಾಸರಗೋಡು ಜಿಲ್ಲೆಯಲ್ಲಿ ವ್ಯಾಪಿಸುತ್ತಿರುವ ಡೆಂಗ್ಯೂ ಜ್ವರದಿಂದ ಮಾಲೋಂ ಚಂಬಕುಳದ ಞಾಣಿಕಡವಿನ ಪರಿಶಿಷ್ಟ ವರ್ಗ ಕಾಲನಿಯಲ್ಲಿ ದಿವಂಗತ ರಾಮನ್‌ ಮತ್ತು ಶ್ಯಾಮಲಾ ದಂಪತಿಯ ಪುತ್ರ ಮೂಲಯಿಲ್‌ ಮಧು (28) ಶನಿವಾರ ಸಾವಿಗೀಡಾಗಿದ್ದಾರೆ.ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಅವರನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಸಾವು ಸಂಭವಿಸಿತು.
 

Advertisement

Udayavani is now on Telegram. Click here to join our channel and stay updated with the latest news.

Next