Advertisement

ಡೆಂಗ್ಯೂ: ರಾಜ್ಯಕ್ಕೆ 3ನೇ ಸ್ಥಾನ

06:05 AM Aug 20, 2017 | |

ಬೆಂಗಳೂರು: ಡೆಂಗ್ಯೂ ಬಾಧಿತರ ಪ್ರಮಾಣದಲ್ಲಿ ತಮಿಳುನಾಡು ಹಾಗೂ ಕೇರಳ ಹೊರತುಪಡಿಸಿದರೆ ದೇಶದಲ್ಲೇ
ಕರ್ನಾಟಕ ಮೂರನೇ ಸ್ಥಾನದಲ್ಲಿದೆ ಎಂಬ ಆಘಾತಕಾರಿ ಅಂಶವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.

Advertisement

ರಾಜ್ಯದಲ್ಲಿ ಡೆಂಗ್ಯೂಯಿಂದಾಗಿ ಈವರೆಗೆ 5 ಮಂದಿ ಸಾವನ್ನಪ್ಪಿದ್ದು, 8 ಸಾವಿರ ಜನರು ಬಾಧಿತರಿದ್ದಾರೆ. ಕೇರಳದಲ್ಲಿ 20 ಸಾವಿರ ಡೆಂಗ್ಯೂ ಪ್ರಕರಣ ಹಾಗೂ 20 ಸಾವು ಸಂಭವಿಸಿದೆ. ತಮಿಳುನಾಡಿನಲ್ಲಿ 6 ಸಾವಿರಕ್ಕೂ ಅಧಿಕ ಡೆಂಗ್ಯೂ ಪ್ರಕರಣ ಸಾಬೀತಾಗಿದ್ದು, 15 ಸಾವು ಸಂಭವಿಸಿದೆ. ಈ ಎರಡು ರಾಜ್ಯ ಹೊರತುಪಡಿಸಿ ಮೂರನೇ ಸ್ಥಾನದಲ್ಲಿ ಕರ್ನಾಟಕ ಇದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2629, ಮಂಡ್ಯದಲ್ಲಿ 604, ದಾವಣಗೆರೆಯಲ್ಲಿ 459, ಮೈಸೂರಿನಲ್ಲಿ 452 ಹಾಗೂ ಹಾಸನದಲ್ಲಿ 306 ಹಾಗೂ ತುಮಕೂರಿನಲ್ಲಿ 300 ಸೇರಿ ರಾಜ್ಯಾದ್ಯಂತ 7,990 ಪ್ರಕರಣ ಪತ್ತೆಯಾಗಿದೆ. ಡೆಂಗ್ಯೂ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯಿಂದ ಹಲವು ಮಾದರಿಯ ಕ್ರಮಗಳನ್ನು ತೆಗೆದುಕೊಂಡು, ಜನ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ.

ಕೇಂದ್ರ ತಂಡ ಭೇಟಿ: ಪ್ರಕರಣ ಹೆಚ್ಚುತ್ತಿರುವ ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆಯ ತಜ್ಞರ ತಂಡ ಭೇಟಿ ನೀಡುತ್ತಿದೆ. ರಾಜ್ಯಕ್ಕೂ ಮೂವರು ಅಧಿಕಾರಿಗಳು ಬಂದಿದ್ದು, ಬಿಬಿಎಂಪಿ ಹಾಗೂ ಬೆಂಗಳೂರು ನಗರ ಜಿಲ್ಲೆ ಸೇರಿ ಡೆಂಗ್ಯೂ ಪ್ರಕರಣ ಹೆಚ್ಚಿರುವ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಜನರೊಂದಿಗೆ ಸಮಾಲೋಚನೆ ನಡೆಸಿ, ಪರಿಶೀಲಿಸಿದ್ದಾರೆ. ಬಳಿಕ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ, ಡೆಂಗ್ಯೂ ನಿಯಂತ್ರಣಕ್ಕೆ ಬೇಕಾದ ತಾಂತ್ರಿಕ ಮಾಹಿತಿಯನ್ನು ನೀಡಿದ್ದಾರೆ.

ಮೂರು ಹಂತದಲ್ಲಿ ಪತ್ತೆ: ವ್ಯಕ್ತಿಗೆ ಜ್ವರ ಬಂದ ತಕ್ಷಣವೇ ರಕ್ತ ಪರೀಕ್ಷೆ ಮಾಡಿಸಬೇಕು. ಒಂದು ವೇಳೆ ರಕ್ತ ಪರೀಕ್ಷೆ ಮಾಡದೆ ಇದ್ದರೂ, ಎರಡನೇ ದಿನ ಜ್ವರದ ಪ್ರಮಾಣ ಹೆಚ್ಚಾದರೆ ತುರ್ತಾಗಿ ಆಸ್ಪತ್ರೆಗೆ ದಾಖಲಾಗಬೇಕು. ಮೂರನೇ ದಿನ ಜ್ವರದ ಪ್ರಮಾಣ ಇನ್ನಷ್ಟು ಹೆಚ್ಚಾದಲ್ಲಿ ತೀವ್ರ ನಿಗಾ ಘಟಕ(ಐಸಿಯು) ವ್ಯವಸ್ಥೆ ಇರುವ ಆಸ್ಪತ್ರೆಗೆ ದಾಖಲಿಸಬೇಕು ಎಂಬುದು ಸೇರಿ ಕೆಲವೊಂದು ಸೂಕ್ಷ್ಮ ಸಂಗತಿಗಳನ್ನು ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳಿಗೆ ಕೇಂದ್ರದ ತಜ್ಞರು ನೀಡಿದ್ದಾರೆ.

ಬಹು ಅಂಗ ವೈಫ‌ಲ್ಯ ಸಾಧ್ಯತೆ: ಜ್ವರದಿಂದ ಬಳಲುತ್ತಿರುವ ವ್ಯಕ್ತಿಯು ಡೆಂಗ್ಯೂ ಜ್ವರಕ್ಕೆ ಒಳಗಾಗಿಯೂ ಸೂಕ್ತ ಔಷಧ ಅಥವಾ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೇ ಇದ್ದರೆ ಬಹು ಅಂಗ ವೈಫ‌ಲ್ಯದ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಮಹಿಳೆಯರು ಈ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಋತುಸ್ರಾವದ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಯನ್ನು ತಜ್ಞ ವೈದ್ಯರಿಂದ ಪಡೆಯಬೇಕಾಗುತ್ತದೆ.

Advertisement

ಜ್ವರದಿಂದ ಬಳಲುವ ವ್ಯಕ್ತಿಯು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇದಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ವೈದ್ಯರಿಗೆ ನೀಡಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್‌ “ಉದಯವಾಣಿ’ಗೆ ಮಾಹಿತಿ ನೀಡಿದರು.

ಮಳೆ ಹೆಚ್ಚಾದರೆ ನಿಯಂತ್ರಣ
ಕಳೆದ 2 ದಿನದಿಂದ ಬೆಂಗಳೂರಿನಲ್ಲಿ ಮಳೆ ಹೆಚ್ಚಾಗಿರುವುದರಿಂದ ಡೆಂಗ್ಯೂ  ಜ್ವರಕ್ಕೆ ಕಾರಣವಾದ ಸೊಳ್ಳೆಯ ಮೊಟ್ಟೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದೆ. ನಿಂತ ನೀರಿನಲ್ಲಿ ಮೊಟ್ಟೆ ಇಡುವುದರಿಂದ, ಮಳೆ ಹೆಚ್ಚಾದಂತೆ ನೀರು ಹರಿಯುವ
ರಭಸವೂ ಹೆಚ್ಚಾಗಿರುತ್ತದೆ. ಹೀಗಾಗಿ ಸೊಳ್ಳೆಗೆ ಮೊಟ್ಟೆ ಇಡಲು ಅವಕಾಶವೇ ಇರುವುದಿಲ್ಲ. ಅಲ್ಲದೆ, ಮಳೆ ನಿಂತ ನಂತರ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು.

ಕೇಂದ್ರ ತಂಡದ ಸದಸ್ಯರು ತುಮಕೂರು, ಮಂಡ್ಯ,ಬೆಂಗಳೂರು ನಗರ ಸೇರಿ ಬಿಬಿಎಂಪಿ ವ್ಯಾಪ್ತಿಗೆ ಭೇಟಿ ನೀಡಿ
ಪರಿಶೀಲನೆ ನಡೆಸಿದ್ದಾರೆ. ಡೆಂಗ್ಯೂ  ನಿಯಂತ್ರಣಕ್ಕೆ ಬೇಕಾದ ತಾಂತ್ರಿಕ ಮಾಹಿತಿ ನೀಡಿದ್ದಾರೆ.

– ಡಾ.ಬಿ.ಜಿ. ಪ್ರಕಾಶ್‌ ಕುಮಾರ್‌,
ಸಹಾಯಕ ನಿರ್ದೇಶಕ, ನ್ಯಾಷನಲ್‌ ವೆಕ್ಟರ್‌ ಬೋರ್ನ್ ಡಿಸಿಸ್‌
ಕಂಟ್ರೋಲ್‌ ಪ್ರೋಗ್ರಾಂ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next