ಮಂಗಳೂರು: ಬೇಸಗೆ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದ್ದು, ಸಾಂಕ್ರಾಮಿಕ ಕಾಯಿಲೆಗಳ ಸಾಧ್ಯತೆ ಹೆಚ್ಚಿದೆ. ಮುಖ್ಯವಾಗಿ ಡೆಂಗ್ಯೂ ಹರಡುವ ಸೊಳ್ಳೆಗಳ ಸಂತಾನೋತ್ಪತ್ತಿಗೆ ಮಳೆ – ಬಿಸಿಲಿನ ವಾತಾವರಣ ಸೂಕ್ತವಾಗಿದೆ. ಮನೆ, ಕಟ್ಟಡಗಳ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಂಡು, ಸೊಳ್ಳೆಗಳು ಸಂತಾನೋತ್ಪತ್ತಿ ಮಾಡದಂತೆ ತಡೆಯುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ.
ಜಿಲ್ಲೆಯಲ್ಲಿ 2019ರಲ್ಲಿ 1,539 ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಯಲ್ಲಿ ಡೆಂಗ್ಯೂ ಮಹಾಸ್ಫೋಟವಾಗಿತ್ತು. ಶೇ. 75ರಷ್ಟು ಪ್ರಕರಣಗಳು ಪಾಲಿಕೆ ವ್ಯಾಪ್ತಿಯಲ್ಲೇ ಪತ್ತೆಯಾಗಿದ್ದವು.
ಜಾಗೃತಿ ಜಾಥಾ
ಮೇ 16ನ್ನು ಪ್ರತೀ ವರ್ಷ ರಾಷ್ಟ್ರೀಯ ಡೆಂಗ್ಯೂ ದಿನವಾಗಿ ಆಚರಿಸಲಾಗುತ್ತಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗಿ ವರದಿಯಾಗುವುದರಿಂದ ಜಿಲ್ಲಾ ಆರೋಗ್ಯ ಇಲಾಖೆ ವತಿಯಿಂದ ಮಹಾನಗರ ಪಾಲಿಕೆ ಸಹಯೋಗದಲ್ಲಿ ಮಂಗಳವಾರ ನಗರದಲ್ಲಿ ಜನ ಜಾಗೃತಿ ಜಾಥಾ ಆಯೋಜಿಸಲಾಗಿದೆ.
ಹರಡುವುದು ಹೇಗೆ?
ಹೆಣ್ಣು ಈಡಿಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಡೆಂಗ್ಯೂ ಹರಡುತ್ತದೆ. ರಕ್ತ ನಾಳಗಳಿಗೆ ಈ ವೈರಸ್ ಹಾನಿ ಉಂಟು ಮಾಡುತ್ತದೆ. ಈ ಸೊಳ್ಳೆ ಹಗಲಿನಲ್ಲಿಯೇ ಕಡಿಯುತ್ತದೆ.
ಲಕ್ಷಣಗಳೇನು?
ಡೆಂಗ್ಯೂ ಬಾಧಿತರಲ್ಲಿ ತತ್‌ಕ್ಷಣಕ್ಕೆ ಯಾವುದೇ ರೋಗ ಲಕ್ಷಣ ಹೆಚ್ಚಾಗಿ ಕಂಡುಬರುವುದಿಲ್ಲ. 7 ದಿನಗಳ ಬಳಿಕ ಒಂದೊಂದೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ತಲೆನೋವು, ಮೈ ಕೈ ನೋವು, ಕೀಲು ನೋವು, ವಾಕರಿಕೆ, ವಾತ, ತುರಿಕೆ, ಕಣ್ಣುಗಳ ಹಿಂಭಾಗ ನೋವು, ದೇಹದ ಅಲ್ಲಲ್ಲಿ ಕಲೆಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ.
Related Articles
ಏನು ಮಾಡಬೇಕು?
ಕುದಿಸಿ ಆರಿಸಿದ ಉಗುರು ಬೆಚ್ಚಗಿನ ನೀರನ್ನೇ ಕುಡಿಯಬೇಕು. ಜ್ವರ ಬಾಧಿತರು ತಣ್ಣೀರನ್ನು ಕುಡಿಯಲೇಬಾರದು. ಸ್ನಾನಕ್ಕೂ ಬಿಸಿನೀರನ್ನೇ ಬಳಸಿ. ತಲೆ ಸ್ನಾನದಿಂದ ಶೀತ ಅಧಿಕವಾಗಿ ಜ್ವರ, ತಲೆನೋವು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಜ್ವರ ಕಡಿಮೆಯಾಗುವವರೆಗೆ ತಲೆ ಸ್ನಾನ ಮಾಡದಿರುವುದೇ ಉತ್ತಮ ಎನ್ನುತ್ತಾರೆ ವೈದ್ಯರು.
ಮುನ್ನೆಚ್ಚರಿಕೆ ಕ್ರಮಗಳು
– ಡೆಂಗ್ಯೂ, ಮಲೇರಿಯಾದಂತಹ ಸಾಂಕ್ರಾಮಿಕ ಕಾಯಿಲೆ ನಿಯಂತ್ರಣಕ್ಕೆ ಜನರೇ ಜಾಗೃತರಾಗಬೇಕಿದೆ.
– ಮನೆಯ ಸುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
– ಸಾಮಾನ್ಯ ಜ್ವರವನ್ನೂ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಬೇಕು.
– ಕಿಟಕಿಗಳನ್ನು ಮುಚ್ಚಿ, ಕಿಟಕಿಗೆ ಸೊಳ್ಳೆ ಪರದೆ ಅಳವಡಿಸಬೇಕು.
– ನೀರಿನ ಸಂಗ್ರಹಕ್ಕೆ ಭದ್ರವಾದ ಮುಚ್ಚಿದ ವ್ಯವಸ್ಥೆ ಇರಬೇಕು, ಟಯರ್, ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಬೇಕು.
– ತೊಟ್ಟಿ, ಡ್ರಮ್‌ಗಳಲ್ಲಿ 2ರಿಂದ 3 ದಿನಗಳಿಗೊಮ್ಮೆ ನೀರು ಬದಲಾಯಿಸಿ ಸ್ವತ್ಛಗೊಳಿಸಿ.
“ಎಲ್ಲರ ಸಹಭಾಗಿತ್ವದೊಂದಿಗೆ ಡೆಂಗ್ಯೂವನ್ನು ಸೋಲಿಸೋಣ’
“ಎಲ್ಲರ ಸಹಭಾಗಿತ್ವದೊಂದಿಗೆ ಡೆಂಗ್ಯೂವನ್ನು ಸೋಲಿಸೋಣ’ ಎನ್ನುವುದೇ ಈ ವರ್ಷದ ಘೋಷ ವಾಕ್ಯ. ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಈ ಸಂಬಂಧ ಸುತ್ತೋಲೆ ಕಳುಹಿಸಲಾಗಿದ್ದು, ಆರೋಗ್ಯಕ್ಕೆ ಸಂಬಂಧಿಸಿ ಕೆಲಸ ಮಾಡುವ ಪ್ರತಿಯೊಬ್ಬ ಸಿಬಂದಿಯೂ ಲಾರ್ವಾ ಸರ್ವೇ, ಲಾರ್ವಾ ನಿರ್ಮೂಲನೆ ಮತ್ತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ದ.ಕ. ಜಿಲ್ಲಾ ಆರೋಗ್ಯ ಇಲಾಖೆ ಸೂಚಿಸಿದೆ.
ಡೆಂಗ್ಯೂ ನಿರ್ಮೂಲನೆಗೆ ಆರೋಗ್ಯ ಇಲಾಖೆಯ ಜತೆ ಸಾರ್ವಜನಿಕರ ಸಹಕಾರವೂ ಅಗತ್ಯ. ಒಂದು ಬಾರಿ ಲಾರ್ವಾ ನಿರ್ಮೂಲನೆ ಯಿಂದ ಪ್ರಯೋಜನವಿಲ್ಲ. ಜನರು ತಾವು ವಾಸಿಸುವ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಆ ಮೂಲಕ ಹರಡುವ ಸೊಳ್ಳೆ ಉತ್ಪತ್ತಿಯಾಗದಂತೆ ತಡೆಯಬೇಕು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಡೆಂಗ್ಯೂ ಪ್ರಕರಣ ಜಾಸ್ತಿಯೂ ಇಲ್ಲ, ಕಡಿಮೆಯೂ ಇಲ್ಲ.
– ಡಾ| ನವೀನ್‌ಚಂದ್ರ ಕುಲಾಲ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ
ಉಡುಪಿಯಲ್ಲಿ ಈ ವರೆಗೆ 2 ಡೆಂಗ್ಯೂ ಪ್ರಕರಣ ವರದಿ
ಉಡುಪಿ: ಜಿಲ್ಲೆಯಲ್ಲಿ ಈ ಬಾರಿ ಜನವರಿಯಿಂದ ಇಲ್ಲಿಯ ವರೆಗೆ 2 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಎರಡೂ ಪ್ರಕರಣದಲ್ಲಿ ರೋಗ ಸಂಪೂರ್ಣ ಗುಣವಾಗಿದೆ. ಸ್ಥಳೀಯ ಮಟ್ಟದಲ್ಲಿ ವಿಲೇಜ್ ಟಾಸ್ಕ್ ಫೋರ್ಸ್ ಮೂಲಕ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಲಾರ್ವಾ ಸರ್ವೇ, ಲಕ್ಷಣಗಳು ಪತ್ತೆಯಾದಾಗ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕಳೆದ ವರ್ಷ ಜಡ್ಕಲ್ ನಲ್ಲಿ 2 ತಿಂಗಳ ಕಾಲ ಡೆಂಗ್ಯೂ ಸಾರ್ವಜನಿಕರನ್ನು ಕಾಡಿತ್ತು. 2022ರಲ್ಲಿ 400ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿದ್ದವು. ಈ ಬಾರಿ ಈಗಾಗಲೇ ಒಂದೆರಡು ಮಳೆ ಬಂದು ಹೋಗಿದ್ದು, ಎಲ್ಲ ಕಡೆಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ ತಿಳಿಸಿದ್ದಾರೆ.