Advertisement

ಕೋವಿಡ್-19 ಮಧ್ಯೆ ಡೆಂಗ್ಯೂ, ಮಲೇರಿಯಾ ಭೀತಿ

12:12 AM Jun 04, 2020 | Sriram |

ಮಂಗಳೂರು: ಕೋವಿಡ್-19 ನಡುವೆಯೇ ಮಳೆಗಾಲ ಶುರುವಾಗಿದ್ದು, ದ.ಕ. ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಭೀತಿಯೂ ಎದುರಾಗಿದೆ. ಕಳೆದ ವರ್ಷದ ಡೆಂಗ್ಯೂ ಪ್ರಕರಣಗಳು ನಮ್ಮ ಮುಂದಿದ್ದು, ಈ ವರ್ಷ ಸ್ವಯಂ ಜಾಗೃತಿ ಹೆಚ್ಚು ಅಗತ್ಯ.

Advertisement

ಜಿಲ್ಲೆಯಲ್ಲಿ ಈ ವರ್ಷದ ಐದು ತಿಂಗಳಲ್ಲಿ ಒಟ್ಟು 68 ಡೆಂಗ್ಯೂ ಪ್ರಕರಣ ಕಂಡು ಬಂದಿವೆ. ಈ ಪೈಕಿ 4 ಪ್ರಕರಣ ಮಂಗಳೂರಿನದ್ದಾದರೆ, ಉಳಿದವು ಗ್ರಾಮೀಣ ಭಾಗದ್ದು. ಈ ಅವಧಿಯಲ್ಲಿ ಒಟ್ಟು 368 ಮಲೇರಿಯಾ ಪ್ರಕರಣಗಳು ವರದಿ ಯಾಗಿದ್ದು, ಈ ಪೈಕಿ 49 ಗ್ರಾಮೀಣ ಭಾಗದವು ಹಾಗೂ 319 ಪಾಲಿಕೆ ವ್ಯಾಪ್ತಿಯದ್ದು.

ಆರೋಗ್ಯ ಇಲಾಖೆಯಿಂದ ಸಿದ್ಧತೆ
ಕೋವಿಡ್-19 ಅಪಾಯದ ನಡು ವೆಯೇ ಮಳೆಗಾಲದ ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಸವಾಲು ಆರೋಗ್ಯ ಇಲಾಖೆಗಿದೆ. ಜನವರಿ ಯಿಂದಲೇ ಆಶಾ ಕಾರ್ಯಕರ್ತರು ಮತ್ತು ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ಗ್ರಾಮೀಣ ಭಾಗದಲ್ಲಿ ಹಾಗೂ ಎಂಪಿಡಬ್ಲೂ ನೌಕರರು, ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರು ನಗರ ಭಾಗಗಳಲ್ಲಿ ಡೆಂಗ್ಯೂ ಮತ್ತು ಮಲೇರಿಯಾ ಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. ಇಲಾಖೆಯ ಎರಡು ವಾಹನಗಳಲ್ಲಿ ಜಿಲ್ಲಾದ್ಯಂತ ಜಾಗೃತಿ ಘೋಷಣೆಗಳನ್ನು ಮನೆಮನೆಗೆ ತಲುಪಿಸಲಾಗುತ್ತಿದೆ.

ಬಾಟಲ್‌ ಮುಚ್ಚಳದಲ್ಲೂ ಲಾರ್ವಾ ಉತ್ಪತ್ತಿ!
ಡೆಂಗ್ಯೂ ಜ್ವರವು ಹಗಲು ಹೊತ್ತಿನಲ್ಲಿ ಕಚ್ಚುವ ಈಡಿಸ್‌ ಈಜಿಪ್ಟೆ ಸೊಳ್ಳೆಗಳ ಮೂಲಕ ಹರಡುತ್ತದೆ. ಇವು ನಮ್ಮ ವಾಸದ ಪರಿಸರದಲ್ಲಿರುವ ಘನತ್ಯಾಜ್ಯ ವಸ್ತುಗಳಲ್ಲಿ, ಮನೆಯ ಏರ್‌ಕ್ಯೂಲರ್‌, ಹೂಕುಂಡ, ಕಡಿಯುವ ಕಲ್ಲು ಇತ್ಯಾದಿಗಳಲ್ಲಿ ನಿಂತ ನೀರಿನಲ್ಲಿ ಲಾರ್ವಾವನ್ನು ಉತ್ಪತ್ತಿ ಮಾಡುತ್ತವೆ. ನಿಂತ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗುವುದರಿಂದ ಮನೆ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಅವಶ್ಯ. ಸಣ್ಣ ಬಾಟಲಿಯ ಮುಚ್ಚಳದಲ್ಲಿ ನೀರು ನಿಂತಿದ್ದರೂ ಸುಮಾರು ಐದರಷ್ಟು ಲಾರ್ವಾ ಉತ್ಪತ್ತಿಯಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಆದ್ದರಿಂದ ಆದ್ಯತೆ ನೆಲೆಯಲ್ಲಿ ಸಮರ್ಪಕ ಘನತಾಜ್ಯ ವಿಲೇವಾರಿ, ನೀರು ಸಂಗ್ರಹದ ಟ್ಯಾಂಕ್‌, ಡ್ರಂ, ಬ್ಯಾರೆಲ್‌ ಪಾತ್ರೆಗಳಿಗೆ ಭದ್ರವಾದ ಮುಚ್ಚಳ ಅಳವಡಿಸಬೇಕು. ಮನೆಯ ಸುತ್ತ ಇರುವ ಗಿಡಗಳನ್ನು ಕಡಿದು ಸ್ವತ್ಛಗೊಳಿಸಬೇಕು. ಹಗಲಿನಲ್ಲಿಯೂ ಮನೆಯ ಒಳಗೆ ಧೂಪದ ಹೊಗೆ ಹಾಕುವುದು ಮುಂತಾದ ಕ್ರಮಗಳನ್ನು ಅನುಸರಿಸಬೇಕು ಎನ್ನುತ್ತಾರೆ ಅವರು.

ಡೆಂಗ್ಯೂ, ಮಲೇರಿಯಾ ಲಕ್ಷಣಗಳು
ಇದ್ದಕ್ಕಿದ್ದಂತೆ ವಿಪರೀತ ಜ್ವರ, ಮೈಕೈ ನೋವು, ಕೀಲು ನೋವು, ತೀವ್ರತರವಾದ ತಲೆನೋವು, ಹೆಚ್ಚಾಗಿ ಹಣೆ ಮುಂಭಾಗ, ಕಣ್ಣಿನ ಹಿಂಭಾಗ ನೋವು, ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತು, ಬಾಯಿ, ವಸಡು, ಮೂಗಿನಲ್ಲಿ ರಕ್ತಸ್ರಾವ, ವಾಕರಿಕೆ ಹಾಗೂ ವಾಂತಿ ಮುಂತಾದವು ಡೆಂಗ್ಯೂ ಲಕ್ಷಣ. ನಡುಕದಿಂದ ಕೂಡಿದ ಜ್ವರ, ತಲೆನೋವು, ಜ್ವರದ ಏರಿಳಿತ, ವಾಂತಿ ಮುಂತಾದವು ಮಲೇರಿಯಾದ ಪ್ರಮುಖ ಲಕ್ಷಣವಾಗಿದೆ.
ಆರಂಭದಲ್ಲೇ ಚಿಕಿತ್ಸೆ ಪಡೆಯುವುದರಿಂದ ಡೆಂಗ್ಯೂ, ಮಲೇರಿಯಾವನ್ನು ನಿಯಂತ್ರಿಸಬಹುದು.

Advertisement

ಮಲೇರಿಯಾ ತಡೆಗಟ್ಟಲು ಟಿಪ್ಸ್‌
– ಮನೆಯ ಸುತ್ತ ನಿರುಪಯುಕ್ತ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಿ.
– ಸೊಳ್ಳೆ ಪರದೆಯನ್ನು ವಾರಕ್ಕೊಮ್ಮೆಯಾದರೂ ಸ್ವತ್ಛಗೊಳಿಸಿ.
– ಸೊಳ್ಳೆ ಬಗ್ಗೆ ಗರ್ಭಿಣಿಯರು ತುಂಬಾ ಎಚ್ಚರಿಕೆ ವಹಿಸಿ.
– ಮಂದ ಬಣ್ಣದ ಉಡುಪು ಧರಿಸಿ, ಸಾಮಾನ್ಯವಾಗಿ ಸೊಳ್ಳೆ ನಿಮ್ಮಿಂದ ದೂರವಿರುತ್ತದೆ.
– ದಿನಂಪ್ರತಿ ಮನೆಯ ನೆಲವನ್ನು ಒರೆಸಲು ಮರೆಯದಿರಿ.
– ಸಾಮಾನ್ಯ ಜ್ವರವನ್ನೂ ನಿರ್ಲಕ್ಷಿಸದೆ ವೈದ್ಯರನ್ನು ಭೇಟಿಯಾಗಿ.

ಸಹಾಯವಾಣಿ ಸಂಖ್ಯೆಗೆ ಕರೆಮಾಡಿ
ಸೊಳ್ಳೆ ಉತ್ಪತಿ ತಾಣಗಳು ಕಂಡು ಬಂದರೆ ಆರೋಗ್ಯ ಸಹಾಯವಾಣಿ 104ಕ್ಕೆ ಮಾಹಿತಿ ನೀಡಿ. ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಪ್ರದೇಶ ಹಾಗೂ ವಸತಿ ತಾಣಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡು ಬಂದರೆ ಪಾಲಿಕೆಗೆ ತಿಳಿಸಬಹುದು. ಪಾಲಿಕೆಯ ಕಂಟ್ರೋಲ್‌ ರೂಂ ಸಂಖ್ಯೆ: 2220306; ಜನಹಿತ -ಟೋಲ್‌ಪ್ರೀ ನಂ. 155313; ನಿರ್ಮಾಣ ಸ್ಥಳಗಳಲ್ಲಿ ಸೊಳ್ಳೆ ಉತ್ಪತಿ ತಾಣಗಳು ಕಂಡುಬಂದರೆ 0824-2410093 (ಮಲೇರಿಯಾ ನಿಯಂತ್ರಣ ಕಚೇರಿ) ದೂರವಾಣಿಯನ್ನು ಸಂಪರ್ಕಿಸಬಹುದು.

ಜಾಗೃತಿ ಕಾರ್ಯಕ್ರಮ
ಡೆಂಗ್ಯೂ, ಮಲೇರಿಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಶ್ರಮಿಸುತ್ತಿದೆ. ಈಗಾಗಲೇ ಮನೆ ಭೇಟಿ, ಜಾಗೃತಿ ಕಾರ್ಯಗಳು ನಡೆಯುತ್ತಿವೆ. ಆದರೆ, ಇಲಾಖೆ ಎಷ್ಟೇ ಜಾಗೃತಿ ಮೂಡಿಸಿದರೂ ಸಾರ್ವಜನಿಕರ ಪಾತ್ರ ಇಲ್ಲಿ ಪ್ರಮುಖವಾಗುತ್ತದೆ. ಇನ್ನು ಮಳೆಗಾಲವಾದ್ದರಿಂದ ಜನ ತಮ್ಮ ಮನೆ, ಕಚೇರಿ ಸುತ್ತಮುತ್ತಲಿನ ಪರಿಸರದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಂತ ನೀರಿನಲ್ಲಿ ಲಾರ್ವಾ ಉತ್ಪತ್ತಿಯಾಗುವುದರಿಂದ ಎಲ್ಲೇ ನೀರು ನಿಂತರೂ ಅದನ್ನು ಶುಚಿಗೊಳಿಸಬೇಕು.
-ಡಾ| ನವೀನ್‌ಚಂದ್ರ ಕುಲಾಲ್‌, ಮಲೇರಿಯಾ ನಿಯಂತ್ರಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next