Advertisement

ಮತ್ತೆ 22 ಮಂದಿಗೆ ಡೆಂಗ್ಯೂ? ಬಾಧಿತರ ಸಂಖ್ಯೆ 426ಕ್ಕೆ ಏರಿಕೆ

01:30 AM Jul 21, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಂಕಿತ ಡೆಂಗ್ಯೂ ಜ್ವರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಶನಿವಾರ 24 ಮಂದಿ ಜ್ವರ ಬಾಧಿತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ 22 ಮಂದಿಯಲ್ಲಿ ಶಂಕಿತ ಡೆಂಗ್ಯೂ ಜ್ವರ ಕಂಡು ಬಂದಿದ್ದು, ಒಟ್ಟು ಬಾಧಿತರ ಸಂಖ್ಯೆ 426ಕ್ಕೇರಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಮಂಗಳೂರು ನಗರ ಸಹಿತ ದ.ಕ. ಜಿಲ್ಲೆಯಲ್ಲಿ ಡೆಂಗ್ಯೂ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಹಾಗೂ ಆರೋಗ್ಯ ಇಲಾಖೆಯಿಂದ ನಗರಾದ್ಯಂತ ಫಾಗಿಂಗ್‌, ಸೊಳ್ಳೆನಾಶಕ ರಾಸಾಯನಿಕ ಸಿಂಪರಣೆ ಸೇರಿದಂತೆ ವ್ಯಾಪಕ ನಿಯಂತ್ರಣ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ಡೆಂಗ್ಯೂ ನಿಯಂತ್ರಣಕ್ಕೆ ತಲಾ ಇಬ್ಬರು ಸದಸ್ಯರನ್ನು ಒಳಗೊಂಡಿರುವ 200 ತಂಡಗಳನ್ನು ರಚಿಸಲಾಗಿದೆ. ಶನಿವಾರ ಪಾಲಿಕೆ ಸಿಬಂದಿ ಮನೆಗಳು ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಫಾಗಿಂಗ್‌ ನಡೆಸಿದ್ದಾರೆ. ಉಸ್ತುವಾರಿಗೆ ನಾಲ್ವರು ಹಿರಿಯ ಅಧಿಕಾರಿಗಳ ನೇತೃತ್ವದ 4 ತಂಡಗಳನ್ನು ಜಿಲ್ಲಾಧಿಕಾರಿ ರಚಿಸಿದ್ದಾರೆ.

ವರದಿ ಪ್ರಕ್ರಿಯೆಗೆ 15 ದಿನ
ಮೂರು ವಾರಗಳ ಹಿಂದೆ ಕಡಬದಲ್ಲಿ ವೀಣಾ ನಾಯಕ್‌ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾರೆ. ಕೆಲವು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ 8 ವರ್ಷದ ಬಾಲಕ ಕೃಷ್‌ ಮತ್ತು ಗುರುವಾರ ಮೃತಪಟ್ಟ ಗುಜ್ಜರಕೆರೆ ಬಳಿಯ ನಿವಾಸಿ ವಿದ್ಯಾರ್ಥಿನಿ ಶ್ರದ್ಧಾ ಕೆ. ಶೆಟ್ಟಿ ಅವರ ಸಾವಿಗೆ ಡೆಂಗ್ಯೂ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. “ಕಾರಣ ಪತ್ತೆಗೆ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಡೆತ್‌ ಆಡಿಟ್‌ ಪ್ರಕ್ರಿಯೆಗಳು ನಡೆಯಬೇಕು. ಇದಕ್ಕೆ ಸುಮಾರು 15 ದಿನ ತಗುಲಲಿದ್ದು, ಬಳಿಕವಷ್ಟೇ ಸಂಶಯ ಪರಿಹಾರವಾಗಲಿದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ “ಉದಯವಾಣಿ’ಗೆ ತಿಳಿಸಿದ್ದಾರೆ.

ಸೂಕ್ತ ಕ್ರಮ: ನಳಿನ್‌
ಡೆಂಗ್ಯೂ ನಿವಾರಣೆಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ಅಗತ್ಯ ಔಷಧ ಗಳನ್ನೆಲ್ಲ ಸಿದ್ಧವಾಗಿಟ್ಟುಕೊಳ್ಳುವಂತೆ ಸೂಚಿಸಿದ್ದೇನೆ ಎಂದು ಸಂಸದ ನಳಿನ್‌ಕುಮಾರ್‌ ಕಟೀಲು ತಿಳಿಸಿದ್ದಾರೆ.

Advertisement

ಖಾಸಗಿ ಆಸ್ಪತ್ರೆಗಳು ಡೆಂಗ್ಯೂ ಜ್ವರದಿಂದ ಚಿಕಿತ್ಸೆಗೆ ಬರುವ ರೋಗಿಗಳಿಗೆ ಆದ್ಯತೆ ಮೇರೆಗೆ ಚಿಕಿತ್ಸೆ ನೀಡಬೇಕು. ಹಳ್ಳಿಗಳಿಗೆ ತೆರಳಿ ಜ್ವರದ ಬಗ್ಗೆ ಮಾಹಿತಿ ಮತ್ತು ಜ್ವರ ಕಂಡು ಬಂದಲ್ಲಿ ರಕ್ತ ತಪಾಸಣೆ ನಡೆಸಿ ಚಿಕಿತ್ಸೆ ಕೊಡಬೇಕು. ವಿದ್ಯಾರ್ಥಿಗಳಿಗೆ ಸಂಪೂರ್ಣ ಮೈ ಮುಚ್ಚುವ ಬಟ್ಟೆ ಧರಿಸಲು ಶಾಲಾ ಆಡಳಿತ ಮಂಡಳಿಗಳು ಅನುಮತಿ ನೀಡಬೇಕು ಎಂದು ಸಂಸದ ನಳಿನ್‌ ವಿನಂತಿಸಿದ್ದಾರೆ.

ರೋಗಕ್ಕೆ ಆಹ್ವಾನ: 5,000 ರೂ. ದಂಡ
ಸಾಂಕ್ರಾಮಿಕ ರೋಗ ಹರಡುವ ಜೀವಿಗಳಿಗೆ ಆಸ್ಪದ ನೀಡುವ ಅಂಗಡಿ – ಮನೆ, ನಿರ್ಮಾಣ ಹಂತದ ಕಟ್ಟಡಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿ ರುವ ಮಹಾ ನಗರಪಾಲಿಕೆ ಅಧಿಕಾರಿಗಳು ಶನಿವಾರ ರೋಗಕ್ಕೆ ಆಹ್ವಾನ ನೀಡುತ್ತಿದ್ದ ಆರೋಪ ದಲ್ಲಿ ಕಣ್ಣೂರು ಕೆಫೆಕಾರ್ಟ್‌ ಸಂಸ್ಥೆಯ ಮಾಲಕ ನಿಶಾನ್‌ ಚಂದ್ರ ಅವರಿಗೆ 5,000 ರೂ. ದಂಡ ವಿಧಿಸಿದ್ದಾರೆ. ನಿಶಾನ್‌ ಅವರು ಸಂಸ್ಥೆಯ ಆವರಣದಲ್ಲಿ ಹಳೆ ಟಯರ್‌ಗಳನ್ನು ಇಟ್ಟಿದ್ದು,
ಅವುಗಳಲ್ಲಿ ನೀರು ತುಂಬಿ ಸೊಳ್ಳೆ ಗಳು ಉತ್ಪತ್ತಿಯಾಗಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next