ಕೆ.ಆರ್.ಪೇಟೆ: ತಾಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ಡೆಂಘೀ ವಿಷಮ ಜ್ವರಕ್ಕೆ ಶಾಲಾ ಬಾಲಕಿ ಬಲಿಯಾ ಗಿದ್ದು, ಸಹೋದರಿಗೂ ಡೆಂಘೀ ಹರಡಿ ಆಕೆಯೂ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.
ತಾಲೂಕಿನ ಅಗಸರಹಳ್ಳಿ ಗ್ರಾಮದ ರವಿಕುಮಾರ್ ಮತ್ತು ರಾಣಿ ದಂಪತಿ ಪುತ್ರಿ ಹೇಮಾವತಿ (6) ಮೃತ ಬಾಲಕಿ. ಕಿರಿಯ ಮಗಳು ಪ್ರೇರಣಾ ಡೆಂಘೀ ಜ್ವರದಿಂದ ಬಳಲುತ್ತಿರುವ ಮತ್ತೂಬ್ಬ ಪುತ್ರಿ.
ಮಂಗಳವಾರ ಮುಂಜಾನೆ ಕೆ.ಆರ್. ಪೇಟೆ ಪಟ್ಟಣದ ಪ್ರಿಯದರ್ಶಿನಿ ಕಾನ್ವೆಂಟ್‌ನಲ್ಲಿ ಒಂದನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಿರಿಯ ಮಗಳು ಹೇಮಾವತಿ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ. ಎಲ್ಕೆಜಿ ವ್ಯಾಸಂಗ ಮಾಡುತ್ತಿರುವ ಪ್ರೇರಣಾಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿದೆ.
ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಸಹೋದರಿ ಯರನ್ನು ಕಳೆದ ಎರಡು ದಿನಗಳ ಹಿಂದಷ್ಟೇ ಹೆಚ್ಚಿನ ಚಿಕಿತ್ಸೆಗಾಗಿ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡೆಂಘೀ ಜ್ವರದಿಂದ ಹಿರಿಯ ಮಗಳನ್ನು ಕಳೆದುಕೊಂಡಿರುವ ಕೃಷಿಕೂಲಿ ಕಾರ್ಮಿಕ ದಂಪತಿ ದಿಕ್ಕು ತೋಚದಂತಾಗಿದ್ದಾರೆ. ಕಿರಿಯ ಮಗಳು ಪ್ರೇರಣಾ ವಿಷಮ ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.
ಆಸ್ಪತ್ರೆ ವೈದ್ಯರು ಹೇಮಾವತಿ ಡೆಂಘೀ ಜ್ವರದಿಂದ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದು, ಪ್ರೇರಣಾ ನಿಧಾನಗತಿಯಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಕೆ.ಆರ್.ಪೇಟೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮತ್ತು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ.ಹೆಚ್.ಟಿ.ಹರೀಶ್ ಅಗಸರಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ವಿದ್ಯಾರ್ಥಿನಿ ಮೃತ ಹೇಮಾವತಿ ತಂದೆ- ತಾಯಿಗಳಿಗೆ ಸಾಂತ್ವನ ಹೇಳಿದರಲ್ಲದೆ, ಮೈಸೂರಿನ ಅಪೋಲೊ ಆಸ್ಪತ್ರೆಗೆ ತೆರಳಿ ಡೆಂಘೀ ಜ್ವರಕ್ಕೆ ಚಿಕಿತ್ಸೆ ಪಡೆಯುತ್ತಿರುವ ಪ್ರೇರಣಾಳ ಆರೋಗ್ಯ ವಿಚಾರಿಸಿದರು.