ಕಾಸರಗೋಡು: ಡೆಂಗ್ಯೂ ಜ್ವರ ಭೀತಿಯ ಹಿನ್ನೆಲೆಯಲ್ಲಿ ಸಮಗ್ರ ಪ್ರತಿರೋಧ ಚಟುವಟಿಕೆ ನಡೆಸುವ ಮೂಲಕ ಚೆಂಗಳ ಗ್ರಾಮ ಪಂಚಾಯತ್ ಮಾದರಿ ಕಾಯಕ ನಡೆಸಿದೆ.
ರಾಜ್ಯ ಸರಕಾರದ ತೀವ್ರ ಶುಚಿತ್ವ ಯಜ್ಞದ ಅಂಗವಾಗಿ ಎರಡು ದಿನ (ಶನಿವಾರ, ರವಿವಾರ)ಗಳ ಕಾಲ ನಡೆಸಿದ ಶುಚಿತ್ವ ಚಟುವಟಿಕೆಗಳು ಪರಿಣಾಮಕಾರಿಯಾಗಿವೆ. ಕಳೆದ ವರ್ಷ ಈ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಭೀತಿ ಹುಟ್ಟಿಸಿದ್ದ ಡೆಂಗ್ಯೂ ಜ್ವರದ ಹಿನ್ನೆಲೆಯಲ್ಲಿ ಈ ಚಟುವಟಿಕೆ ಆರೋಗ್ಯಪೂರ್ಣ ವಾತಾವರಣ ನಿರ್ಮಾಣಕ್ಕೆ ಪೂರಕವಾಗಿದೆ.
ತ್ಯಾಜ್ಯ ನಿವಾರಣೆ ಮತ್ತು ಆರೋಗ್ಯ ಜಾಗೃತಿ ಚಟುವಟಿಕೆಗಳು ಈ ಸಂದರ್ಭ ನಡೆದುವು. ಈ ಪ್ರದೇಶದ ತೋಟಗಳಲ್ಲಿ, ಅಡಕೆಯ ಹಾಲೆಗಳಲ್ಲಿ ನೀರು ಕಟ್ಟಿನಿಲ್ಲದಂತೆ ನೋಡಿಕೊಳ್ಳಲು ಜನಜಾಗೃತಿ ಮೂಡಿಸಲಾಗಿದೆ. ಕಳೆದ ವರ್ಷ ಜ್ವರ ಹರಡುವಿಕೆಗೆ ಇವು ಪ್ರಧಾನ ಕಾರಣವಾಗಿದ್ದುವು. ಚೆರ್ಕಳ ಪೇಟೆ, ಪಾಡಿ ಶಾಲೆ, ಪಿಲಾಂಗಟ್ಟೆ ಶಾಲೆ ಆವರಣ, ಅರ್ಲಡ್ಕ ಕಾಲನಿ ಸಹಿತ ಪ್ರದೇಶಗಳಲ್ಲಿ ಶುಚೀಕರಣ ನಡೆಯಿತು.
ಚೆಂಗಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾಹಿನಾ ಸಲೀಂ ಚಟುವಟಿಕೆಗಳನ್ನು ಉದ್ಘಾಟಿಸಿದರು.
ಆರೋಗ್ಯ ಇನ್ಸ್‌ಸ್ಪೆಕ್ಟರ್‌ಗಳಾದ ರಾಜೇಶ್, ಭಾಸ್ಕರನ್, ವಿನಿರಾಜ್ ಮೊದಲಾದವರು ಉಪಸ್ಥಿತರಿದ್ದರು. ವಾರ್ಡ್ ಸದಸ್ಯರು, ಕುಟುಂಬಶ್ರೀ, ಆರೋಗ್ಯ ವಿಭಾಗ, ಆಶಾ ಕಾರ್ಯಕರ್ತರು, ನೌಕರಿ ಖಾತರಿ ಯೋಜನೆ ಕಾರ್ಮಿಕರು, ಆಟೋ ಚಾಲಕರು, ವಿವಿಧ ಕ್ಲಬ್‌ಗಳ ಪ್ರತಿನಿಧಿಗಳು ಶುಚೀಕರಣದಲ್ಲಿ ಭಾಗವಹಿಸಿದರು.