Advertisement

ಸದ್ಯಕ್ಕೆ ಆರು ಮಂದಿಗೆ ಚಿಕಿತ್ಸೆ; ಡೆಂಗ್ಯೂ ನಿಯಂತ್ರಣಕ್ಕೆ ಇಲಾಖೆ ಸಜ್ಜು

08:22 PM Jul 22, 2019 | mahesh |

ಬಂಟ್ವಾಳ: ದ.ಕ. ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಪ್ರಕರಣ ವ್ಯಾಪಕವಾಗಿ ಗೋಚರಿಸಿದ್ದು, ಬಂಟ್ವಾಳ ತಾಲೂಕಿನಲ್ಲಿ ಈ ವರೆಗೆ ಒಟ್ಟು 39 ಪ್ರಕರಣಗಳು ಕಂಡುಬಂದಿವೆ. ಆರೋಗ್ಯ ಇಲಾಖೆಯ ಲೆಕ್ಕಾಚಾರದ ಪ್ರಕಾರ, ಪ್ರಸ್ತುತ ತಾಲೂಕಿನ 6 ಮಂದಿ ಮಾತ್ರ ಡೆಂಗ್ಯೂಗೆ ಸಂಬಂಧಿಸಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Advertisement

ಈ ಬಾರಿ ಡೆಂಗ್ಯೂ ಜ್ವರ ಕಂಡು ಬಂದಿರುವ 39 ಮಂದಿಯಲ್ಲಿ ಬಹುತೇಕ ಮಂದಿಯ ಖಾಯಿಲೆ ಗುಣಮುಖವಾಗಿದ್ದು, ಸದ್ಯಕ್ಕೆ ಚಿಕಿತ್ಸೆ ಪಡೆಯುತ್ತಿರುವ 6 ಮಂದಿಯಲ್ಲಿ 4 ಪ್ರಕ ರಣಗಳು ಶಂಕಿತ ಪ್ರಕರಣಗಳಾಗಿದ್ದು, ಎರಡು ಪ್ರಕರಣಗಳು ಮಾತ್ರ ಖಚಿತ ಗೊಂಡಿವೆ. ಡೆಂಗ್ಯೂ ತಡೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ಆರೋಗ್ಯ ಇಲಾಖೆ ಫಾಗಿಂಗ್‌ ಕಾರ್ಯಾ ಚರಣೆಯನ್ನೂ ನಡೆಸಿದೆ.

ತಾಲೂಕಿನ ಖಾಸಗಿ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ಜ್ವರಕ್ಕೆ ಸಂಬಂಧಿಸಿ ಚಿಕಿತ್ಸೆ ಪಡೆಯುತ್ತಿರುವವರ ಮಾಹಿತಿ ಪಡೆಯುತ್ತಿರುವ ಇಲಾಖೆಯು, ತಾಲೂಕಿ ನವರು ಮಂಗಳೂರು ಹಾಗೂ ಪುತ್ತೂರು ಸಹಿತ ಇತರ ತಾಲೂಕುಗಳಲ್ಲಿ ಚಿಕಿತ್ಸೆ ಪಡೆಯು ತ್ತಿದ್ದರೆ ಅಂಥವರ ವಿವರವನ್ನೂ ಸಂಗ್ರಹಿ ಸುವ ಕಾರ್ಯ ಮಾಡುತ್ತಿದೆ.

ವೈದ್ಯರ ಕೊರತೆಯಿಲ್ಲ
ಬಂಟ್ವಾಳ ತಾಲೂಕಿನಲ್ಲಿ ಒಟ್ಟು 17 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ವಿಟ್ಲ ಹಾಗೂ ವಾಮದಪದವು ಸೇರಿ 2 ಸಮುದಾಯ ಆರೋಗ್ಯ ಕೇಂದ್ರಗಳು, ಪುರಸಭಾ ವ್ಯಾಪ್ತಿಯಲ್ಲಿ ಒಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಬಂಟ್ವಾಳದಲ್ಲಿ ತಾಲೂಕು ಆಸ್ಪತ್ರೆ ಸೇರಿ ಹೀಗೆ ಒಟ್ಟು 21 ಆರೋಗ್ಯ ಇಲಾಖೆಯ ಕೇಂದ್ರಗಳು ಕಾರ್ಯಾಚರಿಸುತ್ತಿವೆ.

ಪ್ರಸ್ತುತ ಯಾವುದೇ ಕೇಂದ್ರದಲ್ಲೂ ವೈದ್ಯರ ಕೊರತೆ ಇಲ್ಲ ಎಂದು ಇಲಾಖೆ ಹೇಳುತ್ತಿದ್ದು, ಖಾಲಿ ಇರುವ ಕಡೆಗಳಲ್ಲಿ ಗುತ್ತಿಗೆ (ಕಾಂಟ್ರ್ಯಾಕ್ಟ್) ಆಧಾರದಲ್ಲಿ ವೈದ್ಯರನ್ನು ನೇಮಿಸಲಾಗಿದೆ. ಕನ್ಯಾನ ಹಾಗೂ ರಾಯಿ ಕೇಂದ್ರಗಳಲ್ಲಿ ವೈದ್ಯರ ಹುದ್ದೆ ಖಾಲಿ ಇತ್ತಾದರೂ, 15 ದಿನಗಳ ಹಿಂದೆ ಅದನ್ನೂ ಭರ್ತಿ ಮಾಡಲಾಗಿದೆ.

Advertisement

ತಾಲೂಕಿನಲ್ಲಿ ಒಟ್ಟು 93 ಕಿರಿಯ ಆರೋಗ್ಯ ಸಹಾಯಕಿಯರ ಹುದ್ದೆಯಲ್ಲಿ 70 ಭರ್ತಿಯಾಗಿದ್ದು, ಖಾಲಿಯಿರುವ 23 ಹುದ್ದೆಗಳನ್ನು ಬೇರೆಡೆಯಿಂದ ತಂದು ಭರ್ತಿ ಮಾಡಲಾಗಿದೆ. ಬಂಟ್ವಾಳ ಆಸ್ಪತ್ರೆಯಲ್ಲಿ ಎರಡು ಸ್ಪೆಷಲ್‌ ಪೋಸ್ಟ್‌ ಗಳು ಖಾಲಿ ಇವೆ. ಆದರೆ ಅದರಿಂದ ಯಾವುದೇ ತೊಂದರೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

32 ಗ್ರಾಮಗಳಲ್ಲಿ ಫಾಗಿಂಗ್‌
ಸಾಂಕ್ರಾಮಿಕ ರೋಗಗಳನ್ನು ತಡೆಯುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬಂದಿ ಮನೆ ಮನೆ ಭೇಟಿ ನೀಡಿ, ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿರುವ ಜತೆಗೆ ಜ್ವರ ಪ್ರಕರಣಗಳ ಸರ್ವೇಯನ್ನೂ ನಡೆಸುತ್ತಿದ್ದಾರೆ. ಸೊಳ್ಳೆ ಉತ್ಪತ್ತಿ ತಾಣಗಳನ್ನು ಗಂಭೀರವಾಗಿ ಪರಿಗಣಿಸಿ ಅದನ್ನು ನಾಶ ಮಾಡುವ ಕಾರ್ಯ ನಡೆಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

ತಾಲೂಕಿನಲ್ಲಿ ಪ್ರಸ್ತುತ ಡೆಂಗ್ಯೂ ಪ್ರಕರಣ ಕಂಡುಬಂದಿರುವ ಒಟ್ಟು 32 ಗ್ರಾಮಗಳ 719 ಮನೆಗಳಲ್ಲಿ ಫಾಗಿಂಗ್‌ ಕಾರ್ಯ ನಡೆಸಲಾಗಿದೆ. ಪ್ರಸ್ತುತ ಕಳೆದ ಕೆಲವು ದಿನಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಫಾಗಿಂಗ್‌ ಕಾರ್ಯಕ್ಕೆ ಅಡ್ಡಿಯಾಗಿದೆ. ಆದರೆ ಹೆಚ್ಚು ಮಳೆ ಬಂದಾಗ ಸೊಳ್ಳೆಗಳ ಉತ್ಪತ್ತಿಯೂ ಕಡಿಮೆಯಾಗುತ್ತದೆ. ಬಿಸಿಲು- ಮಳೆಯ ಪರಿಸ್ಥಿತಿ ಇದ್ದಾಗ ಮಾತ್ರ ಸೊಳ್ಳೆಗಳ ಹಾವಳಿ ಹೆಚ್ಚಿರುತ್ತದೆ.

ಸದ್ಯಕ್ಕೆ 6 ಮಂದಿಗೆ ಚಿಕಿತ್ಸೆ
ತಾಲೂಕಿಗೆ ಸಂಬಂಧಿಸಿ ಒಟ್ಟು 39 ಡೆಂಗ್ಯೂ ಪ್ರಕರಣಗಳಲ್ಲಿ ಪ್ರಸ್ತುತ 6 ಮಂದಿ ತುಂಬೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 4 ಶಂಕಿತ ಪ್ರಕರಣಗಳಾಗಿದ್ದು, 2 ಖಚಿತ ಪ್ರಕರಣಗಳೆಂದು ಗುರುತಿಸಲಾಗಿದೆ. ಮಲೇರಿಯಾಕ್ಕೆ ಸಂಬಂಧಿಸಿ ಜನವರಿಯಿಂದ ಜು. 22ರ ವರೆಗೆ ಕೇವಲ 10 ಪ್ರಕರಣಗಳು ಕಂಡುಬಂದಿವೆ. ರೋಗ ತಡೆಯುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದು, ಅಗತ್ಯವಿರುವ ಕಡೆ ಫಾಗಿಂಗ್‌ ಕೂಡ ಮಾಡಲಾಗಿದೆ.
-ಡಾ| ದೀಪಾ ಪ್ರಭು, ತಾಲೂಕು ಆರೋಗ್ಯಾಧಿಕಾರಿ, ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next