Advertisement

‘ಡೆಂಗ್ಯೂ ನಿಯಂತ್ರಣ; ಲಾರ್ವಾ ನಾಶ ಮುಂದುವರಿಕೆ’

11:39 PM Aug 06, 2019 | Team Udayavani |

ಮಹಾನಗರ: ದ.ಕ. ಜಿಲ್ಲೆಯಲ್ಲಿ ಜನವರಿಯಿಂದ ಈವರೆಗೆ 656 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, 202 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಪ್ರಸ್ತುತ ನಾಲ್ಕು ದಿನಗಳಲ್ಲಿ 160 ಶಂಕಿತ ಡೆಂಗ್ಯೂ ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್ ತಿಳಿಸಿದ್ದಾರೆ.

Advertisement

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ 88 ಪ್ರಯೋಗಾಲಯಗಳು, ಎಲ್ಲ ಆಸ್ಪತ್ರೆಗಳಿಂದಲೂ ಸಾಮಾನ್ಯ ಜ್ವರ ಪೀಡಿತ ರೋಗಿಯ ಮಾಹಿತಿ ಮತ್ತು ಅಂಕಿ ಅಂಶಗಳನ್ನು ಪಡೆದು ಡೆಂಗ್ಯೂ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದೆ ಎಂದರು.

ಡೆಂಗ್ಯೂ ಲಾರ್ವಾ ನಾಶಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗುತ್ತಿದೆ. ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ, ಸಹಕಾರ ವ್ಯಕ್ತವಾಗಿದೆ. ಇದು ಹೀಗೆ ಮುಂದುವರಿಯಬೇಕಿದೆ. ಮುಂದಿನ ಜನವರಿಗೂ ಈ ಕಾರ್ಯವನ್ನು ಜಿಲ್ಲಾಡಳಿತವು ಮುಂದುವರಿಸಲಿದೆ. ಡೆಂಗ್ಯೂ ಪೀಡಿತ ಪ್ರದೇಶಗಳಿಂದ ಇತರ ಕಡೆಗಳಿಗೆ ಹರಡದಂತೆ ಎಚ್ಚರಿಕೆ ವಹಿಸಲಾಗಿದ್ದು, ಈ ಪ್ರದೇಶಗಳಲ್ಲಿ ಲಾರ್ವಾ ನಾಶದಂತಹ ಕಾರ್ಯಗಳು ಸಮರೋಪಾದಿಯಲ್ಲಿ ನಡೆದಿವೆ ಎಂದರು.

4.5 ಲಕ್ಷ ರೂ.ದಂಡ

ಲಾರ್ವಾ ನಾಶಕ್ಕೆ ಸಂಬಂಧಿಸಿ ಶಿಕ್ಷಣ ಸಂಸ್ಥೆಗಳಿಗೆ ನೀಡಿದ್ದ ಗಡುವು ಮುಗಿದು ಪರಿಶೀಲಿಸಲಾಗುತ್ತಿದೆ. ಆ. 6ರಿಂದ ದಂಡ ವಿಧಿಸುವ ಪ್ರಕ್ರಿಯೆ ನಡೆಯಲಿದೆ. ಇತರ ನಿರ್ಮಾಣ ಹಂತದ ಕಟ್ಟಡ ಸಹಿತ ಲಾರ್ವಾ ಉತ್ಪತ್ತಿ ತಾಣಗಳಿಗೆ ದಂಡ ವಿಧಿಸುವ ಕ್ರಮದಡಿ ಈಗಾಗಲೇ ಮನಪಾದಿಂದ 4.5 ಲಕ್ಷ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

Advertisement

ಮಳೆ ನೀರು ಹರಿಯುವ ಚರಂಡಿ ಸ್ವಚ್ಛಗೊಳಿಸುವುದು ಸಂಬಂಧಿಸಿ ತ್ಯಾಜ್ಯ ಸಂಗ್ರಹಣೆಗೆ ಸಂಬಂಧಿಸಿ ಮನಪಾ ವ್ಯಾಪ್ತಿಯಲ್ಲಿ ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್ನಿಂದ ನಿರ್ಲಕ್ಷ್ಯ ವಹಿಸುತ್ತಿರುವ ವಿಚಾರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಮನಪಾದಿಂದ ನೋಟಿಸ್‌ ನೀಡಲು ಆಯುಕ್ತರು ಕ್ರಮ ಕೈಗೊಂಡಿದ್ದಾರೆ ಎಂದರು.

ಮಲೇರಿಯಾ, ಡೆಂಗ್ಯೂ ಸಹಿತ ಸಾಂಕ್ರಾಮಿಕ ರೋಗಗಳನ್ನು ಪತ್ತೆ ಹಚ್ಚಿ ಕಾರ್ಯಾಚರಣೆ ನಡೆಸುವ ಮನಪಾ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 60 ಮಂದಿ ಎಂಪಿಡಬ್ಲ್ಯು ಕಾರ್ಯಕರ್ತರನ್ನು ಆರೋಗ್ಯ ಇಲಾಖೆಯ (ಡಿಎಚ್ಒ) ನಿಯಂತ್ರಣಕ್ಕೊಳಪಡಿಸಲು ಚಿಂತಿಸಲಾಗಿದೆ. ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿ ನಿಯಮಿತ ಅವಧಿಯಲ್ಲಿ ಮಾತ್ರವೇ ಆ ಕಾರ್ಯಕರ್ತರಿಗೆ ಕೆಲಸವಿರುವುದರಿಂದ ಉಳಿದ ಅವಧಿಯಲ್ಲಿ ಅವರನ್ನು ಇತರ ಕೆಲಸಗಳಿಗೆ ಮನಪಾದಿಂದ ನಿಯೋಜಿಸಲಾಗುತ್ತಿತ್ತು. ಈಗ ಅವರೆಲ್ಲರೂ ಮುಖ್ಯವಾಗಿ ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿ ಕಾರ್ಯ ನಿರ್ವಹಿಸಲಿದ್ದು, ಡಿಎಚ್ಒ ಅನುಮತಿಯ ಮೇರೆಗೆ ಇತರ ಕೆಲಸಗಳಿಗೆ ನಿಯೋಜಿಸುವ ವ್ಯವಸ್ಥೆಯನ್ನು ಮಾಡಲು ಚಿಂತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ಎಂಪಿಡಬ್ಲ್ಯು ಕಾರ್ಯಕರ್ತರು-ಡಿಎಚ್ಒ ನಿಯಂತ್ರಣಕ್ಕೆ

Udayavani is now on Telegram. Click here to join our channel and stay updated with the latest news.

Next