Advertisement

ಆತಂಕ ಸೃಷ್ಟಿಸಿದ ಡೆಂಘೀ –ಚಿಕೂನ್‌ಗುನ್ಯಾ

10:34 AM Mar 18, 2020 | Suhan S |

ಧಾರವಾಡ: ಎರಡೂವರೆ ತಿಂಗಳೊಳಗೆ 14 ಜನರಲ್ಲಿ ಡೆಂಘೀ ದೃಢವಾಗಿದ್ದರೆ ಚಿಕೂನ್‌ಗುನ್ಯಾ ರೋಗ ಐವರಲ್ಲಿ ಖಚಿತವಾಗಿದೆ. ಇದರ ಜೊತೆಗೆ ಮಲೇರಿಯಾ ರೋಗ ಮೂವರಲ್ಲಿ ಕಂಡು ಬಂದಿದ್ದರೆ ಮಿದುಳು ಜ್ವರ ಖಚಿತವಾಗಿಲ್ಲ.

Advertisement

ಡೆಂಘೀ ಆತಂಕ: 2015ರಲ್ಲಿ 46, 2016ರಲ್ಲಿ 97, 2017ರಲ್ಲಿ 172, 2018ರಲ್ಲಿ 112, 2019ರಲ್ಲಿ 250 ಜನರಲ್ಲಿ ಡೆಂಘೀ ರೋಗ ದೃಢಪಟ್ಟಿದೆ. ಸದ್ಯ ಈ ವರ್ಷದ ಮಾಚ್‌ 1ರಿಂದ 17ರೊಳಗೆ ಸಂಶಯ ಮೇರೆಗೆ 49 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ 5 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಇನ್ನೂ ಈ ವರ್ಷದ ಜನೇವರಿಯಿಂದ ಮಾ. 17ರ ವರೆಗೆ 109 ಜನರ ಮೇಲೆ ಸಂಶಯ ವ್ಯಕ್ತಪಡಿಸಿದ್ದು, ಈ ಪೈಕಿ 106 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ 14 ಜನರಲ್ಲಿ ಡೆಂಘೀ ದೃಢಪಟ್ಟಿದೆ. ಈ ಪೈಕಿ ಕಲಘಟಗಿಯಲ್ಲಿ 1, ಕುಂದಗೋಳದಲ್ಲಿ 2, ನವಲಗುಂದದಲ್ಲಿ 2, ಧಾರವಾಡದ ಶಹರದಲ್ಲಿ 1 ಹಾಗೂ ಹುಬ್ಬಳ್ಳಿಯ ಶಹರದಲ್ಲಿ 8 ಜನರಲ್ಲಿ ಡೆಂಘೀ ಖಚಿತವಾಗಿದೆ.

ಚಿಕೂನ್‌ಗುನ್ಯಾ ಗುನ್ನ: 2015ರಲ್ಲಿ 17, 2016ರಲ್ಲಿ 6, 2017ರಲ್ಲಿ 11, 2018ರಲ್ಲಿ 85, 2019 ರಲ್ಲಿ 121 ಜನರಲ್ಲಿ ಚಿಕೂನ್‌ಗುನ್ಯಾ ಕಾಣಿಸಿಕೊಂಡು ತೊಂದರೆ ಉಂಟು ಮಾಡಿತ್ತು. ಈ ವರ್ಷ ಕಳೆದ ಎರಡೂವರೆ ತಿಂಗಳಲ್ಲಿ 34 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಪೈಕಿ ಐವರಲ್ಲಿ ರೋಗ ದೃಢಪಟ್ಟಿದೆ. ಧಾರವಾಡ ಗ್ರಾಮೀಣದಲ್ಲಿ 2, ಕಲಘಟಗಿ, ಕುಂದಗೋಳ, ನವಲಗುಂದಲ್ಲಿ ತಲಾ ಒಬ್ಬರಲ್ಲಿ ರೋಗ ದೃಢಪಟ್ಟಿರುವುದು ಗ್ರಾಮೀಣದಲ್ಲಿ ಆತಂಕ ಮನೆ ಮಾಡಿದೆ.

ಮಲಗಿದ ಮಲೇರಿಯಾ: 2015ರಲ್ಲಿ 96, 2016ರಲ್ಲಿ 78, 2017ರಲ್ಲಿ 76, 2018ರಲ್ಲಿ 25, 2019ರಲ್ಲಿ 17 ಜನರಲ್ಲಿ ಕಾಣಿಸಿಕೊಂಡಿದ್ದ ಮಲೇರಿಯಾ ರೋಗವು 2020 ರ ಎರಡೂವರೆ ತಿಂಗಳಲ್ಲಿ 3 ಜನರಲ್ಲಿ ದೃಢಪಟ್ಟಿದೆ. ಜಿಲ್ಲೆಯ ನವಲಗುಂದ ತಾಲೂಕಿನಲ್ಲಿಯೇ 3 ಜನರಿಗೆ ಇದು ಬಂದಿದೆ. ವರ್ಷದಿಂದ ವರ್ಷಕ್ಕೆ ಇದರ ಪ್ರಭಾವ ಕಡಿಮೆ ಆಗುತ್ತಲಿದೆ. ಇದರ ಜೊತೆಗೆ ಮೆದುಳು ಜ್ವರವು 2016, 2017, 2019ರಲ್ಲಿ ಕಂಡು ಬಂದಿಲ್ಲ. ಆದರೆ 2018ರಲ್ಲಿ ಈ ಜ್ವರಕ್ಕೆ ಜಿಲ್ಲೆಯಲ್ಲಿ ಓರ್ವ ಮೃತಪಟ್ಟಿದ್ದ. ಆದರೆ ಈ ವರ್ಷ ಮೆದುಳು ಜ್ವರದ ಲಕ್ಷಣಗಳು ಕಂಡು ಬಂದ ಮೂವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಮೆದುಳು ಜ್ವರ ಇಲ್ಲದಿರುವುದು ದೃಢಪಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next